ADVERTISEMENT

ಕಾಡಾನೆಗೆ ಚಿಕಿತ್ಸೆ; ವಾಸಿಯಾಗದ ಗಾಯ

ಬಾಣವಾರ ಮೀಸಲು ಅರಣ್ಯದ ಕಾಡುಹಾಡಿಯಲ್ಲಿ ಗಾಯಗೊಂಡಿದ್ದ ಒಂಟಿ ಸಲಗ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2019, 8:35 IST
Last Updated 12 ಆಗಸ್ಟ್ 2019, 8:35 IST
ಶನಿವಾರಸಂತೆ ಸಮೀಪದ ಬಾಣವಾರ ಕಾಡುಹಾಡಿಯಲ್ಲಿ ಗಾಯಗೊಂಡಿರುವ ಸಲಗ
ಶನಿವಾರಸಂತೆ ಸಮೀಪದ ಬಾಣವಾರ ಕಾಡುಹಾಡಿಯಲ್ಲಿ ಗಾಯಗೊಂಡಿರುವ ಸಲಗ   

ಶನಿವಾರಸಂತೆ: ಸಮೀಪದ ಬಾಣವಾರ ಮೀಸಲು ಅರಣ್ಯ ವ್ಯಾಪ್ತಿಯ ಕಾಡುಹಾಡಿಯಲ್ಲಿ ಗಾಯಗೊಂಡಿದ್ದ ಒಂಟಿ ಸಲಗಕ್ಕೆ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಸ್ಪಂದಿಸಿದರೂ ಗಾಯ ಇನ್ನೂ ವಾಸಿಯಾಗಿಲ್ಲ.

30 ವರ್ಷದ ಸಲಗದ ಹಿಂಭಾಗದ ಎಡಗಾಲಿನಲ್ಲಿ ಗಾಯವಾಗಿದ್ದು, ಅರಣ್ಯದಲ್ಲಿ ಘೀಳಿಡುತ್ತಾ ಸಂಚರಿಸುತ್ತಿತ್ತು. ಈ ಬಗ್ಗೆ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ನಾಗರಹೊಳೆ ರಾಜೀವ ಗಾಂಧಿ ರಾಷ್ಟ್ರೀಯ ಅಭಯಾರಣ್ಯ ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮುಜೀದ್ ನೇತೃತ್ವದಲ್ಲಿ ಮೂರು ಸಾಕಾನೆಗಳ ಸಹಾಯದಿಂದ ಕಾಡಾನೆಗೆ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಶಿವಮೊಗ್ಗದ ಸಕ್ರೆಬೈಲಿನ ಆನೆ ಶಿಬಿರಕ್ಕೆ ಸಾಗಿಸಲು ಹಿರಿಯ ಅಧಿಕಾರಿಗಳು ಅನುಮತಿ ನೀಡಿಲ್ಲ. ಹೀಗಾಗಿ, ಸ್ಥಳೀಯ ಪಶುವೈದ್ಯಾಧಿಕಾರಿ ಚಿಕಿತ್ಸೆ ನೀಡುತ್ತಿದ್ದಾರೆ. ಪ್ರತಿದಿನ ಚುಚ್ಚುಮದ್ದು ನೀಡುತ್ತಿದ್ದು, ಗಾಯಕ್ಕೆ ಅರಿಸಿನಪುಡಿ, ಬೇವಿನರಸ, ನಾಟಿ ಔಷಧಿ ಹಚ್ಚಲಾಗುತ್ತಿದೆ.

ಆನೆಯ ಮತ್ತೊಂದು ಕಾಲಿಗೆ ಸರಪಳಿಯಲ್ಲಿ ಕಟ್ಟಿ ಹಾಕಿರುವುದರಿಂದ ಆ ಕಾಲಿಗೂ ಗಾಯವಾಗಿದೆ. ನೋವಿನಿಂದ ನರಳುತ್ತಾ ಘೀಳಿಡುತ್ತಿದೆ. ಆನೆಯನ್ನು ನೋಡಲು ಗ್ರಾಮಸ್ಥರು, ಸ್ಥಳೀಯರು ಸ್ಥಳಕ್ಕೆ ಬರುತ್ತಿದ್ದಾರೆ.

ಸ್ವಲ್ಪ ಮಟ್ಟಿಗೆ ಚೇತರಿಕೆ ಕಾಣುತ್ತಿದೆ. ಹುಣ್ಣು ಒಡೆದಿದ್ದು, ಅದರಲ್ಲಿದ್ದ ಹುಳು ಹೊರಬಂದಿದೆ. ಕಾಲನ್ನು ನೆಲಕ್ಕೆ ಊರುತ್ತಿದೆ. ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.