ADVERTISEMENT

ತೋಟವನ್ನೇ ನೆಲೆ ಮಾಡಿಕೊಂಡ ಕಾಡಾನೆಗಳು!

ಹಲವು ವರ್ಷಗಳಿಂದ ಬೀಡುಬಿಟ್ಟ ಗಜಪ‍ಡೆ l ತೋಟದಲ್ಲೇ ಜನಬೆಳೆಯುವ ಆನೆಗಳು

ರೆಜಿತ್ ಕುಮಾರ್
Published 27 ನವೆಂಬರ್ 2022, 9:49 IST
Last Updated 27 ನವೆಂಬರ್ 2022, 9:49 IST
ಸಿದ್ದಾಪುರದ ಮುಖ್ಯ ರಸ್ತೆಯಲ್ಲಿ ಈಚೆಗೆ ಸಾಗಿದ ಕಾಡಾನೆ ಹಿಂಡು
ಸಿದ್ದಾಪುರದ ಮುಖ್ಯ ರಸ್ತೆಯಲ್ಲಿ ಈಚೆಗೆ ಸಾಗಿದ ಕಾಡಾನೆ ಹಿಂಡು   

ಸಿದ್ದಾಪುರ: ಜಮೀನುಗಳಲ್ಲಿ ಬೆಳೆದಿರುವ ಬೆಳೆಯನ್ನು ಆನೆಗಳು ಕಾಡಿನಿಂದ ಬಂದು ನಾಶ ಮಾಡುತ್ತಿರುವ ಸಮಸ್ಯೆ ಬೇರೆಡೆ ಇದ್ದರೆ, ಸಿದ್ದಾಪುರ ಭಾಗದಲ್ಲಿ ಈ ಸಮಸ್ಯೆಯೊಂದಿಗೆ ಮತ್ತೊಂದು ವಿಶಿಷ್ಟ ಸಮಸ್ಯೆಯೂ ಸೇರಿಕೊಂಡಿದೆ.

ಹಲವು ವರ್ಷಗಳ ಹಿಂದೆ ತೋಟಗಳಿಗೆ ಬಂದ ಕಾಡಾನೆಗಳು ವಾಪ‍ಸ್ ಕಾಡಿಗೆ ಹೋಗದೇ ತೋಟದಲ್ಲೇ ನೆಲೆ ನಿಂತಿವೆ. ಸುಮಾರು 40ರಿಂದ 50 ಆನೆಗಳು ತೋಟದಲ್ಲೇ ಹುಟ್ಟಿ, ಬೆಳೆಯುತ್ತಿವೆ. ಇವುಗಳು ತೋಟದಾನೆಗಳಾಗಿ ಬದಲಾವಣೆ ಹೊಂದಿದ್ದು, ಕಾಫಿ ತೋಟದ ಮಾಲೀಕರಿಗೆ ಮಾತ್ರವಲ್ಲಿ ಕಾರ್ಮಿಕರನ್ನೂ ಚಿಂತೆಗೀಡು ಮಾಡಿವೆ.

ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಕರಡಿಗೋಡು, ಗುಹ್ಯ, ಬೀಟಿಕಾಡು, ಪಾಲಿಬೆಟ್ಟ, ಮಠ, ಘಟ್ಟದಳ, ಮಾಲ್ದಾರೆ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಪ್ರತಿದಿನ ಕಾಡಾನೆ ಹಾವಳಿ ಇದೆ. ಕೆಲವು ಆನೆಗಳು ಈ ಹಿಂದೆ ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟಿದ್ದರೇ, ಇನ್ನೂ ಕೆಲವು ಆನೆಗಳು ಕಾಫಿ ತೋಟದಲ್ಲೇ ಹುಟ್ಟಿ, ತೋಟಗಳಲ್ಲಿಯೇ ಬೆಳೆದಿವೆ. ಹಾಗಾಗಿ, ಕಾಡಾನೆಗಳು ಕಾಡಿನತ್ತ ತೆರಳಲು ಹಿಂದೇಟು ಹಾಕುತ್ತಿದೆ. ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ, ಅಭ್ಯತ್ ಮಂಗಲ, ಬರಡಿ, ವಾಲ್ನೂರು, ತ್ಯಾಗತ್ತೂರು ವ್ಯಾಪ್ತಿಯಲ್ಲೂ ಕಾಡಾನೆ ಹಾವಳಿ ಮಿತಿ ಮೀರಿದ್ದು, ರೈತರು ಕಂಗಾಲಾಗಿದ್ದಾರೆ.

ADVERTISEMENT

ಟಾಟಾ, ಬಿ.ಬಿ.ಟಿ.ಸಿ ಸಂಸ್ಥೆಗಳು ಸೇರಿದಂತೆ ದೊಡ್ಡ ದೊಡ್ಡ ಕಾಫಿ ತೋಟಗಳು ಇದ್ದು, ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಡುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಭಾಗದಲ್ಲಿ ಹೆಚ್ಚು ಬೆಳೆ ಹಾನಿ ಹಾಗೂ ಜೀವ ಹಾನಿಯಾಗಿದೆ.

ಭತ್ತದ ಕೃಷಿ ಮಾಡಿದರೇ, ಕಾಡಾನೆಗಳು ಕೃಷಿ ಫಸಲನ್ನು ನಾಶ ಮಾಡುತ್ತಿದ್ದು,ಕೃಷಿಕರು ಭತ್ತದ ಗದ್ದೆಯನ್ನು ಪಾಳು ಬಿಡುವಂತಾಗಿದೆ. ಇನ್ನೂ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ದಾಂದಲೆ ನಡೆಸುತ್ತಿದ್ದು, ಅಪಾರ ಪ್ರಮಾಣದ ಕಾಫಿ, ಕರಿಮೆಣಸು, ಅಡಿಕೆ, ತೆಂಗು ಹಾಗೂ ಹಲವು ಫಸಲುಗಳು ನಾಶವಾಗಿವೆ.

ವಿಫಲವಾಗುತ್ತಿವೆ ಯೋಜನೆಗಳು: ಕಾಡಾನೆ ಹಾವಳಿ ತಡೆಗೆ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಸೌರ ಬೇಲಿ, ತೂಗು ಸೋಲಾರ್ ಯೋಜನೆಗಳು ನಿರ್ವಹಣೆ ಇಲ್ಲದೇ ಆನೆಗಳು ಸೋಲಾರ್ ಬೇಲಿಯನ್ನು ದಾಟಿ ನಾಡಿಗೆ ಬರುತ್ತಿದೆ.

ಕೆಲವು ಭಾಗದಲ್ಲಿ ಕಂದಕಗಳ ಮೂಲಕವೂ ಆನೆಗಳು ಕಾಡಿನಿಂದ ಹೊರಬರುತ್ತಿದೆ. ವಾಲ್ನೂರು ವ್ಯಾಪ್ತಿಯಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಸಿದ್ದರೂ, ಕಾಡಾನೆ ಬ್ಯಾರಿಕೇಡ್ ಮೂಲಕ ತೋಟಕ್ಕೆ ಬಂದಿದೆ. ಇನ್ನೂ ತೋಟದಲ್ಲಿರುವ ಕಾಡಾನೆಗಳನ್ನು ಆರ್.ಆರ್.ಟಿ ತಂಡ ಕಾಡಿಗೆ ಓಡಿಸುತ್ತಿದ್ದು, ಇದರಿಂದಾಗಿ ತೋಟಕ್ಕೆ ಮತ್ತಷ್ಟು ಹಾನಿಯಾಗುತ್ತಿದೆ ಎಂದು ಬೆಳೆಗಾರರು ದೂರಿದ್ದಾರೆ.

ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳ ವಡಿಸಬೇಕು, ತೋಟದಲ್ಲಿರುವ ಕಾಡಾನೆಗಳನ್ನು ಕಾಡಿಗೆ ಕಳುಹಿಸ ಬೇಕು, ಅರಣ್ಯದಲ್ಲಿ ಆನೆಗಳಿಗೆ ಬೇಕಾದ ಆಹಾರ, ನೀರು ಒದಗಿಸಬೇಕು, ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.