ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ: ‘ವಿದೇಶಿ ಶಕ್ತಿಗಳು ನಮ್ಮನ್ನು ಕೆಣಕಿದರೆ, ಒಗ್ಗಟ್ಟಿನ ಮೂಲಕ ಉತ್ತರ ಕೊಡಬೇಕು’ ಎಂದು ಕೂಡಿಗೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ನಡೆದ 79ನೇ ಸ್ವಾತಂತ್ರೋತ್ಸವದ ಧ್ಜಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಅಮೆರಿಕ ನಮ್ಮನ್ನು ಹೆದರಿಸಲು ಬಂದರೆ ನಾವೆಷ್ಟು ಬಲಿಷ್ಠರು ಎಂಬುದನ್ನು ತೋರಿಸಿಕೊಡಬೇಕಿದೆ. ಅಮೆರಿಕ ವಿಪರೀತ ತೆರಿಗೆ ಹಾಕಿದರೆ ಅಮೆರಿಕಾದ ವಸ್ತುಗಳನ್ನೇ ಖರೀದಿಸಬಾರದು. ದೇಶಿ ವಸ್ತುಗಳನ್ನು ಉಪಯೋಗಿಸಬೇಕು. ಒಗ್ಗಟ್ಟಿನಿಂದ ಎಲ್ಲವನ್ನೂ ಸಾಧಿಸಬಹುದು’ ಎಂದು ಹೇಳಿದರು.
ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಮಾತನಾಡಿ, ‘ಭಾರತದಲ್ಲಿ ವಾಸಿಸುವ ಎಲ್ಲರೂ ದೇಶದ ಪ್ರಗತಿಗೆ ಕೊಡುಗೆ ನೀಡುವುದಾಗಿ ಹಾಗೂ ಪರಿಸರ ರಕ್ಷಣೆ, ಕಾನೂನನ್ನು ಗೌರವಿಸುವುದಾಗಿ ಪ್ರತಿಜ್ಞೆ ಮಾಡಿ ಮುನ್ನೆಡೆದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ’ ಎಂದು ಹೇಳಿದರು.
‘1950ರಲ್ಲಿ ಡಾ.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಭಾರತೀಯರಿಗೆ ಸಮಾನವಾದ ಹಕ್ಕುಗಳನ್ನು ನೀಡಿದ್ದು, ಭಾರತ ಸರ್ವತೋಮುಖ ಅಭಿವೃದ್ಧಿ ಕಂಡಿದೆ. ಬಲಿಷ್ಠ ಭಾರತ ನಮ್ಮದು ಎಂದು ನಾವೆಲ್ಲರೂ ಹೆಮ್ಮೆಯಿಂದ ಹೇಳಿಕೊಳ್ಳುವಂತಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಮಾಜಿ ಸೈನಿಕ ಹವಾಲ್ದಾರ್ ಪಿ.ಎಸ್.ಮೋಹನ್, ಪಟ್ಟಣ ಪಂಚಾಯಿತಿ ಸಿಬ್ಬಂದಿ ಎಚ್.ಪಿ.ನರಸಿಂಹ, ಕಂದಾಯ ಇಲಾಖೆಯ ಕೃಷ್ಣ, ಹಿರಿಯ ಪತ್ರಕರ್ತ ಎಸ್.ಮಹೇಶ್, ಪಿಡಿಒ ರವಿ ಕೆ. ನಾಯರ್, ಆಗ್ನಿಶಾಮಕ ದಳದ ಚೇತನ್, ಆಶಾ ಕಾರ್ಯಕರ್ತೆ ಜಯಲಲಿತ, ಅಂಗನವಾಡಿ ಸಹಾಯಕಿ ಶಾಂತ ಅವರುಗಳನ್ನು ಸನ್ಮಾನಿಸಲಾಯಿತು.
ಶಾಲಾ-ಕಾಲೇಜು ವಿದ್ಯಾರ್ಥಿಗಳು ದೇಶಭಕ್ತಿಗೀತೆ ಹಾಡಿದರು. ಪೊಲೀಸ್, ಹೊಂ ಗಾರ್ಡ್ಸ್, ಸ್ಕೌಟ್ಸ್ ಮಕ್ಕಳಿಂದ ಗೌರವ ರಕ್ಷೆ ನಡೆಸಲಾಯಿತು.
ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್.ಗೀತಾ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜು, ಸೂಡ ಅಧ್ಯಕ್ಷ ಕೆ.ಎ.ಆದಂ, ಬಿಇಒ ಕೃಷ್ಣ ಪ್ರಸಾದ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್, ಇಒ ಪರಮೇಶ ಕುಮಾರ್, ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪದಾಧಿಕಾರುಗಳು, ಇಲಾಖಾಧಿಕಾರಿಗಳು ಇದ್ದರು.
Highlights - ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ವಿದ್ಯಾರ್ಥಿಗಳಿಂದ ದೇಶಭಕ್ತಿ ಗಾಯನ ಹಲವು ಮಂದಿ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.