ADVERTISEMENT

ಮೊದಲ ಮಾವು ಮೇಳ; ಸಿದ್ಧತೆ ಪೂರ್ಣ

ಶಾಸಕರಿಂದ ಇಂದು ಚಾಲನೆ; ಬಗೆಬಗೆಯ ತಳಿಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 16:19 IST
Last Updated 2 ಜೂನ್ 2022, 16:19 IST
ಮಡಿಕೇರಿಯ ಹಾಪ್‌ಕಾಮ್ಸ್‌ ಆವರಣದಲ್ಲಿ ಮಾವುಮೇಳಕ್ಕಾಗಿ ಮಳಿಗೆ ನಿರ್ಮಾಣ ಕಾರ್ಯ ಗುರುವಾರ ಭರದಿಂದ ನಡೆಯಿತು
ಮಡಿಕೇರಿಯ ಹಾಪ್‌ಕಾಮ್ಸ್‌ ಆವರಣದಲ್ಲಿ ಮಾವುಮೇಳಕ್ಕಾಗಿ ಮಳಿಗೆ ನಿರ್ಮಾಣ ಕಾರ್ಯ ಗುರುವಾರ ಭರದಿಂದ ನಡೆಯಿತು   

ಮಡಿಕೇರಿ: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಜೂನ್ 3ರಿಂದ 6ರವರೆಗೆ ಜಿಲ್ಲಾ ಹಾಪ್‌ಕಾಮ್ಸ್‌ ಆವರಣದಲ್ಲಿ ನಡೆಯಲಿರುವ ಮಾವುಮೇಳಕ್ಕಾಗಿ ಗುರುವಾರ ಸಿದ್ಧತೆಗಳು ಭರದಿಂದ ನಡೆದವು.

ಇಲ್ಲಿ ಒಟ್ಟು 13 ಮಳಿಗೆಗಳಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದ ಮಾವು ಬೆಳೆಗಾರರು ವಿಭಿನ್ನ ತಳಿಯ ಮಾವುಗಳನ್ನು ಪ್ರದರ್ಶಿಸಲಿದ್ದು, ಮಾರಾಟವೂ
ನಡೆಯಲಿದೆ.

ಜಿಲ್ಲೆಯಲ್ಲಿ ಒಂದೆರಡು ತಳಿಯ ಮಾವು ಬಿಟ್ಟರೆ ಉಳಿದ ತಳಿಗಳ ಮಾವು ಸಿಗುತ್ತಿದ್ದದ್ದು ತೀರಾ ಕಡಿಮೆ. ಮೈಸೂರು ಇಲ್ಲವೇ ಬೆಂಗಳೂರಿನಲ್ಲೆ ಅಪರೂಪದ ತಳಿಗಳ ಮಾವನ್ನು ಖರೀದಿಸಬೇಕಿತ್ತು. ಇದನ್ನು ಮನಗಂಡ ತೋಟಗಾರಿಕಾ ಇಲಾಖೆ, ಕೊಡಗು ಜಿಲ್ಲಾ ಹಾಪ್‌ಕಾಮ್ಸ್‌ ಜಿಲ್ಲಾ ಪಂಚಾಯಿತಿ ಮಾವು ಮೇಳ ಏರ್ಪಡಿಸಿದೆ.

ADVERTISEMENT

ಮಳೆ ಬಂದರೂ ನೆನೆಯದ ಹಾಗೆ ಚಾವಣಿಗೆ ಶೀಟ್‌ ಹಾಕಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಶಾಮಿಯಾನವೂ ಇರಲಿದ್ದು, ಬಹುತೇಕ ಸಿದ್ಧತೆಗಳು ಪೂರ್ಣಗೊಂಡಿವೆ. ಸುಮಾರು 8ರಿಂದ 10 ತಳಿಗಳ ಮಾವು ಮಾರಾಟ ಇರಲಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕರಾದ ಸಿ.ಎಂ.ಪ್ರಮೋದ್ ‘ಪ್ರಜಾವಾಣಿ’ಗೆ
ತಿಳಿಸಿದರು.

ಜೂನ್ 3 ರಂದು ಬೆಳಿಗ್ಗೆ 10 ಗಂಟೆಗೆ ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ.ಬೋಪಯ್ಯ ಮಾವುಮೇಳಕ್ಕೆ ಚಾಲನೆ ನೀಡಲಿದ್ದಾರೆ. ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ರವಿಕುಶಾಲಪ್ಪ, ಶಾಸಕರಾದ ಎಂ.ಪಿ.ಸುಜಾ ಕುಶಾಲಪ್ಪ, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ಅಧ್ಯಕ್ಷ ಬಿ.ಡಿ.ಭೂಕಾಂತ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾ ಮಂಡಳದ ವ್ಯವಸ್ಥಾಪಕ ನಿರ್ದೇಶಕಿ ಹೇಮಾ, ಮೈಸೂರು ವಿಭಾಗದ ತೋಟಗಾರಿಕಾ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜ್, ಕೊಡಗು ಜಿಲ್ಲಾ ಹಾಪ್‍ಕಾಮ್ಸ್‍ನ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಉಪಾಧ್ಯಕ್ಷ ಮಲ್ಲಂಡ ಮಧುದೇವಯ್ಯ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.