ADVERTISEMENT

ರಾಷ್ಟ್ರಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಗಳಿಗೆ ವರ್ಣರಂಜಿತ ಚಾಲನೆ

ಅಮ್ಮತ್ತಿಯಲ್ಲಿ ಫುಟ್‌ಬಾಲ್‌ ಸುಗ್ಗಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 5:06 IST
Last Updated 21 ಜನವರಿ 2023, 5:06 IST
ರಾಷ್ಟ್ರೀಯ ಹೊನಲು ಬೆಳಕಿನ ಫುಟ್‌ಬಾಲ್‌ ಪಂದ್ಯಾವಳಿಗೆ ಶುಕ್ರವಾರ ಫುಟ್‌ಬಾಲ್‌ನ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ.ವಿಜಯನ್ ಚಾಲನೆ ನೀಡಿದರು. ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಇದ್ದಾರೆ. (ಎಡಚಿತ್ರ) ಕೇರಳದ ಯುನೈಟೆಡ್ ಕಣ್ಣೂರು ಹಾಗೂ ಕೊಡಗಿನ ಕಲ್ಲು ಬಾಯ್ಸ್ ಕಲ್ಲುಬಾಣೆ ತಂಡಗಳ ನಡುವೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಫುಟ್‌ಬಾಲ್ ಪಂದ್ಯ ನಡೆಯಿತು
ರಾಷ್ಟ್ರೀಯ ಹೊನಲು ಬೆಳಕಿನ ಫುಟ್‌ಬಾಲ್‌ ಪಂದ್ಯಾವಳಿಗೆ ಶುಕ್ರವಾರ ಫುಟ್‌ಬಾಲ್‌ನ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ.ವಿಜಯನ್ ಚಾಲನೆ ನೀಡಿದರು. ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಇದ್ದಾರೆ. (ಎಡಚಿತ್ರ) ಕೇರಳದ ಯುನೈಟೆಡ್ ಕಣ್ಣೂರು ಹಾಗೂ ಕೊಡಗಿನ ಕಲ್ಲು ಬಾಯ್ಸ್ ಕಲ್ಲುಬಾಣೆ ತಂಡಗಳ ನಡುವೆ ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ಫುಟ್‌ಬಾಲ್ ಪಂದ್ಯ ನಡೆಯಿತು   

ಸಿದ್ದಾಪುರ: ಇಲ್ಲಿಗೆ ಸಮೀಪದ ಅಮ್ಮತ್ತಿ ಗ್ರಾಮದಲ್ಲಿ ರಾಷ್ಟ್ರೀಯ ಹೊನಲು ಬೆಳಕಿನ ಫುಟ್‌ಬಾಲ್‌ ಪಂದ್ಯಾವಳಿಗೆ ಶುಕ್ರವಾರ ಜಗಮಗಿಸುವ ವಿದ್ಯುತ್ ದೀಪಗಳ ಬೆಳಕಿನಲ್ಲಿ ವರ್ಣರಂಜಿತ ಚಾಲನೆ ದೊರೆಯಿತು. ಇಲ್ಲಿನ ಪ್ರೌಢಶಾಲಾ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ 10 ದಿನಗಳ ಫುಟ್‌ಬಾಲ್‌ ಪಂದ್ಯಗಳು ನಡೆಯಲಿವೆ.

ಮಿಲನ್ಸ್ ಫುಟ್‌ಬಾಲ್ ಅಸೋಸಿಯೇಷನ್ ಹಾಗೂ ಕೊಡಗು ಫುಟ್‌ಬಾಲ್ ಅಸೋಸಿಯೇಷನ್ ವತಿಯಿಂದ ಆಯೋಜನೆಗೊಂಡಿರುವ ಈ ಪಂದ್ಯಾವಳಿಗೆ ಚಾಲನೆ ನೀಡಿದ ಫುಟ್‌ಬಾಲ್‌ನ ಭಾರತ ತಂಡದ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ.ವಿಜಯನ್, ‘ಜಿಲ್ಲೆಯಲ್ಲಿ ಹಾಕಿ ಸೇರಿದಂತೆ ಇತರೆ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡಬೇಕು’ ಎಂದು ಪ್ರತಿಪಾದಿಸಿದರು.

‘ಫುಟ್‌ಬಾಲ್‌ನಲ್ಲಿ ಭಾರತ ತಂಡವು ಈಗಾಗಲೇ ಉತ್ತಮ ತಂಡವಾಗಿ ಬೆಳೆಯುತ್ತಿದೆ. ಕೊಡಗಿನಲ್ಲೂ ಉತ್ತಮ ಆಟಗಾರರಿದ್ದು, ಯುವ ಆಟಗಾರರು ಈ ಕ್ರೀಡೆಯತ್ತ ಹೆಚ್ಚು ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಮಾತನಾಡಿ, ‘ಮಿಲನ್ಸ್ ಕ್ಲಬ್ ಅಚ್ಚುಕಟ್ಟಾಗಿ ಹೊನಲು ಬೆಳಕಿನ ಪಂದ್ಯಾಟ ಆಯೋಜಿಸಿ, ಫುಟ್‌ಬಾಲ್ ಪ್ರೇಮಿಗಳಿಗೆ ವೀಕ್ಷಿಸಲು ಅವಕಾಶ ನೀಡಿರುವುದು ಶ್ಲಾಘನೀಯ’ ಎಂದರು.

ಕೊಡಗಿನ ವಾಲಗ ವಾದ್ಯಗೋಷ್ಠಿಯೊಂದಿಗೆ ಗಣ್ಯರನ್ನು ಮೈದಾನಕ್ಕೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಿಲನ್ಸ್ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಲಿಜೇಶ್ ವಹಿಸಿದ್ದರು. ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರನ್ ನಾಣಯ್ಯ, ಮುಖಂಡರಾದ ಡಾ.ರಾಜಾ ವಿಜಯ ಕುಮಾರ್, ಕೆ.ಎಂ.ಶಾಲಿ, ಅಬ್ದುಲ್ ಮನಾನ್ ಖಾನ್, ಪಿ.ಕೆ.ಜಗದೀಶ್, ಕೊಡಗು ಜಿಲ್ಲಾ ಫುಟ್‌ಬಾಲ್ ಅಸೋಸಿಯೇಷನ್‌ನ ಜಗದೀಶ್ ಪಾಣತ್ತಲೆ, ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮೊಲ್ಲೆರ ಸದಾ ಅಪ್ಪಚ್ಚು, ಜೂಮರ್ಸ್ ಕ್ಲಬ್ ಅಧ್ಯಕ್ಷ ಮೊಲ್ಲೆರ ಹರ್ಷ ಇದ್ದರು. ಇದೇ ಸಂದರ್ಭದಲ್ಲಿ ಐ.ಎಂ.ವಿಜಯನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಉದ್ಘಾಟನೆಯ ಬಳಿಕ ಕೇರಳದ ಯುನೈಟೆಡ್ ಕಣ್ಣೂರು ಹಾಗೂ ಕಲ್ಲು ಬಾಯ್ಸ್ ಕಲ್ಲುಬಾಣೆ ತಂಡಗಳ ನಡುವಿನ ಪಂದ್ಯಾವಳಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.