ADVERTISEMENT

92 ಮಂದಿಗೆ ಅರಣ್ಯ ಹಕ್ಕುಪತ್ರ ನೀಡಲು ಒಪ್ಪಿಗೆ

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 10:18 IST
Last Updated 27 ಸೆಪ್ಟೆಂಬರ್ 2022, 10:18 IST
ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ನಡೆಯಿತು
ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ನಡೆಯಿತು   

ಮಡಿಕೇರಿ: ಅರಣ್ಯ ಹಕ್ಕು ಕಾಯ್ದೆಯಡಿ 92 ಮಂದಿಯ ಅರ್ಜಿಗಳಿಗೆ ಹಾಗೂ ಸಮುದಾಯದ 3 ಅರ್ಜಿಗಳಿಗೆ ಇಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಜತೆಗೆ, ಮಡಿಕೇರಿ ವಿಭಾಗದ ಭಾಗಮಂಡಲ ಪ್ರಾದೇಶಿಕ ಅರಣ್ಯ ವಲಯದ ಬಿ.ಬಾಡಗ ವ್ಯಾಪ್ತಿಯ 1, ಕರಿಂಬಳಪು ವ್ಯಾಪ್ತಿಯ 21 ಕುಟುಂಬಗಳಿಗೆ ಇತರೆ ಪಾರಂಪರಿಕ ಅರಣ್ಯ ವಾಸಿಗಳ ಕಾಯ್ದೆಯಡಿ ಅರಣ್ಯ ಹಕ್ಕುಪತ್ರ ನೀಡಲೂ ನಿರ್ಧರಿಸಲಾಯಿತು.

ಮಡಿಕೇರಿ ವನ್ಯಜೀವಿ ವಿಭಾಗದ(ಪುಷ್ಪಗಿರಿ ವನ್ಯಜೀವಿ ವಲಯ) ಗಾಳಿಬೀಡು ವ್ಯಾಪ್ತಿಯ 2 ಕುಟುಂಬ, ಗಾಳಿಬೀಡು ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯ 8, ಮಾಲ್ದಾರೆಯ ಆಸ್ತಾನ ವ್ಯಾಪ್ತಿಯ 2, ನಾಗರಹೊಳೆ ವನ್ಯಜೀವಿ ವಿಭಾಗದ ನಿಟ್ಟೂರು ವ್ಯಾಪ್ತಿಯ ಕೊಲ್ಲಿ ಹಾಡಿ 7, ಚೆನ್ನೆಯನಕೋಟೆ ವ್ಯಾಪ್ತಿಯ ದಿಡ್ಡಳ್ಳಿ 2, ತಿತಿಮತಿ ವ್ಯಾಪ್ತಿಯ ಅಕ್ಕೆಮಾಳ 1, ಜಂಗಲ್ ಹಾಡಿ 1, ಕೆ.ಬಾಡಗ ವ್ಯಾಪ್ತಿಯ ಕೊಡಂಗೆ 20, ನಾಲ್ಕೇರಿ ವ್ಯಾಪ್ತಿಯ ಬೊಮ್ಮಾಡು 8, ಗೋಣಿಗದ್ದೆ 6 ಆದಿವಾಸಿ ಕುಟುಂಬಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಈ ಮೂಲಕ ದೊರೆತಂತಾಯಿತು.

ADVERTISEMENT

ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ವ್ಯಾಪ್ತಿಯ ಗೋಂದಿಬಸವನಹಳ್ಳಿಯ ಪರಿಶಿಷ್ಟ ಪಂಗಡದ 9, ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ವನ್ಯಜೀವಿ ವಿಭಾಗದ ತಿತಿಮತಿ ಬೊಂಬುಕಾಡಿನ 3, ದೇವರಪುರ ದೇವಮಚ್ಚಿ 1 ವೈಯಕ್ತಿಕ ಅರ್ಜಿಗಳಿಗೂ ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯಹಕ್ಕು ಪತ್ರ ನೀಡಲು ಅನುಮೋದನೆ ದೊರೆಯಿತು.

ಕೊಲ್ಲಿಹಾಡಿ, ಮಾಕುಟ್ಟ ಹಾಗೂ ನೋಕ್ಯ ಹಾಡಿಗಳಲ್ಲಿ ಸಮುದಾಯ ಅರಣ್ಯ ಹಕ್ಕುಪತ್ರ ನೀಡಲು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಒಪ್ಪಿಗೆ ನೀಡಿದರು.

ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೋಕ್ಯ ಹಾಡಿಯಲ್ಲಿ ಒಂದೂವರೆ ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಲಾಯಿತು. ಸಮುದಾಯ ಸಂಪನ್ಮೂಲ ಹಕ್ಕು ಸಂಬಂಧಿಸಿದಂತೆ ಈಗಾಗಲೇ 45 ಅರ್ಜಿಗಳಲ್ಲಿ 13 ಅರ್ಜಿಗಳಿಗೆ ಅರಣ್ಯ ಹಕ್ಕುಪತ್ರ ವಿತರಿಸಲಾಯಿತು. 2 ಅರ್ಜಿಗಳಿಗೆ ಮರು ಸರ್ವೇ ನಡೆಸಲು ಸೂಚಿಲಾಯಿತು. ಉಳಿದಂತೆ, 30 ಅರ್ಜಿಗಳಿಗೆ ಅನುಮೋದನೆ ನೀಡುವ ಸಂಬಂಧ ಸರ್ವೇ ಪ್ರತಿ, ನಕಾಶೆ, ಸ್ಥಳ ಮಹಜರು, ಗ್ರಾಮ ಪಂಚಾಯಿತಿ ನಡವಳಿ ಮತ್ತಿತರ ಹೆಚ್ಚಿನ ಮಾಹಿತಿ ಒದಗಿಸುವಂತೆ ತಿಳಿಸಿದರು.

ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ನೆಹರು, ಪಾಷಾ, ಗೋಪಾಲ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶೇಖರ್, ಪೊನ್ನಂಪೇಟೆ ತಾಲ್ಲೂಕು ಸಮಗ್ರ ಗಿರಿಜನ ಯೋಜನಾಧಿಕಾರಿ ಗುರುಶಾಂತಪ್ಪ, ಮಡಿಕೇರಿ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಬಾಲಕೃಷ್ಣ ರೈ, ವ್ಯವಸ್ಥಾಪಕರಾದ ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.