
ಮಡಿಕೇರಿ: ‘ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಸೇರಿದಂತೆ ಉನ್ನತ ಹುದ್ದೆಗಳಿಗೆ ಅರಣ್ಯಶಾಸ್ತ್ರ ಪದವೀಧರರನ್ನೇ ಪರಿಗಣಿಸಬೇಕು’ ಎಂದು ಒತ್ತಾಯಿಸಿ ರಾಜ್ಯದ ಎಲ್ಲ 3 ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 15 ದಿನ ಪೂರೈಸಿದೆ. ಆದರೆ ಸರ್ಕಾರ ಮಾತ್ರ ಬೇಡಿಕೆಗಳಿಗೆ ಕಿವಿಗೊಟ್ಟಿಲ್ಲ.
‘ಅರಣ್ಯ ವಿದ್ಯಾರ್ಥಿಗಳಾದ ನಮ್ಮದು ಅರಣ್ಯ ರೋದನವಾಯಿತೇ’ ಎಂಬುದು ವಿದ್ಯಾರ್ಥಿಗಳ ಪ್ರಶ್ನೆ.
‘ಪ್ರಸ್ತುತ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಹುದ್ದೆಗಳನ್ನು ಇಲಾಖೆಯ ಒಳಗೆ ಶೇ 50ರಷ್ಟು ಬಡ್ತಿ ಆಧಾರದ ಮೇಲೆ ತುಂಬಲಾಗುತ್ತಿದೆ. ಇನ್ನುಳಿದ ಶೇ 50ರಷ್ಟು ಹುದ್ದೆಗಳ ಪೈಕಿ ಅರ್ಧದಷ್ಟು ಮಾತ್ರವೇ ಅರಣ್ಯ ಪದವೀಧರರಿಗೆ ಮೀಸಲಿಟ್ಟಿದ್ದು, ಇನ್ನುಳಿದ ಹುದ್ದೆಗಳಿಗೆ ಯಾವುದೇ ಪದವೀಧರರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. 2018ರ ನಂತರ ನೇಮಕಾತಿಯೇ ನಡೆದಿಲ್ಲ. ಹೀಗಾದರೆ, 4 ವರ್ಷ ಸುಮಾರು ₹ 6 ಲಕ್ಷ ವ್ಯಯಿಸಿ ಕಲಿತ ಅರಣ್ಯ ಪದವಿ ಏಕಾದರೂ ಬೇಕು’ ಎಂಬುದು ಅವರ ಪ್ರಶ್ನೆ.
ಅದಕ್ಕಾಗಿ, ಅ. 10ರಿಂದ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜಿನ 150 ವಿದ್ಯಾರ್ಥಿಗಳು, ಶಿವಮೊಗ್ಗ ಜಿಲ್ಲೆಯ ಇರುವಕ್ಕಿಯ ಕಾಲೇಜಿನ 143 ವಿದ್ಯಾರ್ಥಿಗಳು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಲೇಜಿನ 160 ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಟ್ವಿಟರ್ ಹಾಗೂ ಪತ್ರ ಚಳವಳಿಯ ಮೂಲಕವೂ ಸರ್ಕಾರದ ಗಮನ ಸೆಳೆಯಲು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ, ವಿದ್ಯಾರ್ಥಿ ದರ್ಶನ್, ‘ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತ್ರ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
‘ಎಂಬಿಬಿಎಸ್ ಪದವೀಧರರನ್ನು ವೈದ್ಯರ ಹುದ್ದೆಗೆ, ಎಂಜಿನಿಯರಿಂಗ್ ಪದವಿ ಪಡೆದವರನ್ನು ಎಂಜಿನಿಯರ್ ಹುದ್ದೆಗಳಿಗೆ, ಬಿ.ಇಡಿ ಪದವೀಧರರನ್ನು ಶಿಕ್ಷಕರ ಹುದ್ದೆಗೆ ಪರಿಗಣಿಸುವಂತೆ ಅರಣ್ಯಶಾಸ್ತ್ರ ಪದವೀಧರರನ್ನು ಮಾತ್ರವೇ ಅರಣ್ಯ ಇಲಾಖೆಯ ಹುದ್ದೆಗಳಿಗೆ ಪರಿಗಣಿಸಬೇಕು. ಅರಣ್ಯದ ನೈಜ ಅನುಭವದೊಂದಿಗೆ ಪ್ರಾಯೋಗಿಕ ಶಿಕ್ಷಣ ಪಡೆದವರ ಬದಲು, ಇತರೆ ಪದವಿ ಪಡೆದವರನ್ನು ಪರಿಗಣಿಸುವುದು ಸರಿಯಲ್ಲ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.