ADVERTISEMENT

ಸೋಮವಾರಪೇಟೆ: ಅಣಬೆ ಕೃಷಿ; ಯಶಸ್ಸು ಕಂಡ ಸ್ನೇಹಿತರು

ಕಡಿಮೆ ಖರ್ಚಿನಲ್ಲಿ ಬೆಳೆದು ಹಣ ಸಂಪಾದನೆ

ಡಿ.ಪಿ.ಲೋಕೇಶ್
Published 14 ಫೆಬ್ರುವರಿ 2025, 8:09 IST
Last Updated 14 ಫೆಬ್ರುವರಿ 2025, 8:09 IST
ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ವಿನೋದ್ ಮತ್ತು ಲಿಖಿತ್ ಅವರು ಬೆಳೆಯುತ್ತಿರುವ ಅಣಬೆ
ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ವಿನೋದ್ ಮತ್ತು ಲಿಖಿತ್ ಅವರು ಬೆಳೆಯುತ್ತಿರುವ ಅಣಬೆ   

ಸೋಮವಾರಪೇಟೆ: ಇಬ್ಬರು ಸ್ನೇಹಿತರು ಅಣಬೆ ಬೆಳೆದು ಯಶಸ್ವಿಯಾಗಿ, ಇತರರಿಗೆ ಮಾದರಿಯಾಗಿದ್ದಾರೆ. ಅವರೇ ಇಲ್ಲಿನ ತಲ್ತಾರೆಶೆಟ್ಟಳ್ಳಿಯ ವಿನೋದ್ ಮತ್ತು ಯಖಿಲ್. ಇವರಿಬ್ಬರೂ ಜೊತೆಯಾಗಿ ಪಾಲದಾರಿಕೆಯಲ್ಲಿ ಅಣಬೆ ಬೆಳೆಯುತ್ತಿದ್ದಾರೆ.

ವೃತ್ತಿಯಿಂದ ಛಾಯಾಚಿತ್ರಗಾರರಾಗಿರುವ ವಿನೋದ್ ತಲ್ತಾರೆಶೆಟ್ಟಳ್ಳಿಯ ತಮ್ಮ ಮನೆಯ ಪಕ್ಕದಲ್ಲಿಯೇ ಒಂದು ಶೆಡ್ ನಿರ್ಮಾಣ ಮಾಡಿ, ಅಣಬೆ ಕೃಷಿ ಮಾಡುತ್ತಿದ್ದಾರೆ.

‘ಅಣಬೆ ಕೃಷಿಗೆ ಕಡಿಮೆ ಜಾಗ, ಹೆಚ್ಚು ಬಂಡವಾಳ ಬೇಡದ ಹಾಗೂ ಅಧಿಕ ಲಾಭ ತರುವ ಕೃಷಿ. ಅಪೌಷ್ಟಿಕತೆ ನಿವಾರಣೆ ಮಾಡುವಲ್ಲಿ ಅಣಬೆ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಅಣಬೆ ಕೃಷಿಯಿಂದ ರೈತರು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ವಿನೋದ್ ಹೇಳುತ್ತಾರೆ.

ADVERTISEMENT

ಅಣಬೆಯು ದೇಹಕ್ಕೆ ಬೇಕಾದ ಎಲ್ಲ ಪೋಷಕಾಂಶಗಳನ್ನು ಒದಗಿಸುವ ಪರಿಪೂರ್ಣ ಆಹಾರವಾಗಿದೆ. ಹಾಲು ಮತ್ತು ಜೇನಿನಂತಹ ಮೌಲ್ಯಯುತ ಆಹಾರವಾಗಿದ್ದು, ಖನಿಜ, ಲವಣ, ಪ್ರೊಟೀನ್ ಯುಕ್ತವಾಗಿದೆ. ಮಲೆನಾಡಿನ ಭಾಗದ ರೈತರು ಅಣಬೆ ಕೃಷಿಯನ್ನು ಹೆಚ್ಚು ಮಾಡುವುದನ್ನು ಕಾಣಬಹುದು. ಮಳೆಗಾಲದ ಸಂದರ್ಭದಲ್ಲಿ ನೈಸರ್ಗಿಕವಾಗಿ ಮಾತ್ರ ಅಣಬೆ ಬೆಳೆಯುತ್ತದೆ ಎಂಬುದಷ್ಟೇ ತಿಳಿದ ಜನರಿಗೆ, ಅದನ್ನು ಕಡಿಮೆ ಖರ್ಚಿನಲ್ಲಿ ಬೆಳೆದು, ಹೆಚ್ಚು ಲಾಭಗಳಿಸಬಹುದು ಎಂಬುದರ ಬಗ್ಗೆ ಅರಿವು ಮೂಡಿಸುವ ಕೆಲಸ ಇಂದಿಗೂ ನಡೆಯುತ್ತಿದೆ.

‘ಕೊಠಡಿಯನ್ನು ಯಾವುದೇ ಸೋಂಕು ಇಲ್ಲದಂತೆ ಸ್ವಚ್ಛಗೊಳಿಸಿರಬೇಕು, ಬೇಯಿಸಿದ ಭತ್ತದ ಹುಲ್ಲನ್ನು 5 ಕೆ.ಜಿ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ತುಂಬಿ, ಒಂದು ಬ್ಯಾಗ್‌ನಲ್ಲಿ 20 ಬೀಜಗಳನ್ನು ಇಟ್ಟು, ಬೇವಿನ ಕಡ್ಡಿಯಿಂದ 20 ರಂಧ್ರ ಮಾಡಿ, ರಂಧ್ರಗಳಿಗೆ ಹತ್ತಿ ಇಡಬೇಕು. ಈ ಬ್ಯಾಗ್‌ಗಳನ್ನು ವಿಶೇಷ ಕೊಠಡಿಯಲ್ಲಿ ತೂಗು ಹಾಕಿ 22 ದಿನಗಳವರೆಗೆ ಗಾಳಿ, ಬೆಳಕು ಇಲ್ಲದ ರೀತಿ ಕೊಠಡಿಯನ್ನು 28 ಡಿಗ್ರಿ ಉಷ್ಣಾಂಶದಲ್ಲಿ ವ್ಯವಸ್ಥೆ ಮಾಡಬೇಕು. 22 ದಿನದ ನಂತರ ಬ್ಯಾಗ್‌ಗಳನ್ನು ಬೇರೆ ಕೊಠಡಿಗೆ ಸ್ಥಳಾಂತರ ಮಾಡಿ, ಎಲ್ಲ ಬ್ಯಾಗ್‌ಗಳನ್ನು ತೂಗು ಹಾಕಿದರೆ ಪ್ರತೀ ದಿನವು ರಂಧ್ರದ ಮೂಲಕ ಅಣಬೆ ಬೆಳೆಯಲು ಆರಂಭಿಸುತ್ತದೆ. ಆರಂಭದಲ್ಲಿ ಅಣಬೆ ಕೃಷಿಯಿಂದ ನಿರೀಕ್ಷಿತ ಲಾಭ ಬಾರದ ಕಾರಣ, ಕೃಷಿಯನ್ನು ವ್ಯವಸ್ಥಿತವಾಗಿ ಬೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ ಪೊನ್ನಂಪೇಟೆಯ ಜಿಕೆವಿಕೆಯಲ್ಲಿ ತರಬೇತಿ ಪಡೆದು, ವೈಜ್ಞಾನಿಕವಾಗಿ ಕೃಷಿ ಆರಂಭಿಸಿದ್ದೇವೆ. ಈಗ ಯಾವುದೇ ಸಮಸ್ಯೆ ಇಲ್ಲ. ಗುಣಮಟ್ಟದ ಅಣಬೆ ಬೆಳೆಯಲಾಗುತ್ತಿದೆ. ಉತ್ತಮ ಖರೀದಿದಾರರು ಇದ್ದಾರೆ’ ಎಂದು ತಲ್ತಾರೆ ಯಖಿಲ್ ತಿಳಿಸಿದರು.

ಸಮೃದ್ಧವಾಗಿ ಬೆಳೆದಿರುವ ಅಣಬೆ ಬೆಳೆ
ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ವಿನೋದ್ ಮತ್ತು ಲಿಖಿತ್ ಅವರು ಅಣಬೆ ಬೆಳೆಯಲು ಮಾಡಿರುವ ಶೆಡ್
ಹೊಸದಾಗಿ ಅಣಬೆ ಕೃಷಿ ಮಾಡ ಬಯಸುವವರಿಗೆ ರಾಷ್ಟ್ರೀಯ ತೋಟಗಾರಿಕಾ ಯೋಜನೆಯಿಂದ ಶೇ 50ರಷ್ಟು ಸಹಾಯಧನ ತರಬೇತಿ ಜೊತೆಗೆ ಅಣಬೆ ಬೀಜ ನೀಡಲಾಗುವುದು
ಲಿಖಿತ ಸಹಾಯಕ ನಿರ್ದೇಶಕತೋಟಗಾರಿಕಾ ಇಲಾಖೆ ಸೋಮವಾರಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.