ADVERTISEMENT

ಕೊಡಗು ಜಿಲ್ಲೆಯಲ್ಲಿ ಗಣೇಶೋತ್ಸವದ ಸಂಭ್ರಮ ಮರೆಮಾಡಿದ ಮಹಾಮಳೆ, ಭೂಕುಸಿತ

ಸರಳ ಆಚರಣೆ, ಒಂದೇ ದಿನಕ್ಕೆ ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 12:46 IST
Last Updated 14 ಸೆಪ್ಟೆಂಬರ್ 2018, 12:46 IST
ಮಡಿಕೇರಿಯಲ್ಲಿ ಕೋಟೆ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ಮಾಡಲಾಗಿದ್ದ ಹೂವಿನ ಅಲಂಕಾರ
ಮಡಿಕೇರಿಯಲ್ಲಿ ಕೋಟೆ ಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ್ ಹಬ್ಬದ ಪ್ರಯುಕ್ತ ಮಾಡಲಾಗಿದ್ದ ಹೂವಿನ ಅಲಂಕಾರ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ತಿಂಗಳು ಸಂಭವಿಸಿದ ಭೂಕುಸಿತ ಹಾಗೂ ಮಹಾಮಳೆಯು ಗಣೇಶೋತ್ಸವದ ಸಂಭ್ರಮವನ್ನೇ ಮರೆಮಾಡಿತು. ಗುರುವಾರ ಬಹುತೇಕ ಗ್ರಾಮಗಳಲ್ಲಿ ಹಬ್ಬದ ಸಂಭ್ರಮ ಇರಲಿಲ್ಲ. ಕೆಲವು ಪರಿಹಾರ ಕೇಂದ್ರದಲ್ಲಿ ಗಣೇಶೋತ್ಸವ ಆಚರಿಸಲಾಯಿತು. ನಗರದ ವಿವಿಧೆಡೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗಣೇಶ ಹಬ್ಬ ಸರಳವಾಗಿ ನಡೆಯಿತು.

ನಗರದ ಬಹುತೇಕ ಕಡೆ ಒಂದೇ ದಿನಕ್ಕೆ ಗಣಪತಿ ಮೂರ್ತಿ ಪೂಜಿಸಿ ಮೂರ್ತಿಗಳನ್ನು ನಗರದ ಗೌರಿ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಕೋಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯ ಅಂಗವಾಗಿ ಬೆಳಿಗ್ಗಿನಿಂದ ಗುರು ಗಣಪತಿ ಪೂಜೆ, ಸಂಕಲ್ಪ, ಮಹಾಗಣಪತಿ ಹೋಮ,ಶಾಂತಿ ಹೋಮ, ಕಲಶಾಭಿಷೇಕ ನಡೆಯಿತು.‌ ಭಕ್ತರಿಗೆ ಬೆಳಿಗ್ಗೆ 5 ಗಂಟೆಯಿಂದ ರಾತ್ರಿ 8ರ ವರೆಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.

ADVERTISEMENT

ನಗರದ ಕೊಹಿನೂರು ರಸ್ತೆಯಲ್ಲಿ ಹಿಂದೂ ಯುವ ಶಕ್ತಿ ಸಮಿತಿ, ನಗರಸಭೆ, ಚಾಮುಂಡೇಶ್ವರಿ ನಗರ, ಧಾರ್ಮಿಕ ಗಣೇಶ ಸಮಿತಿ, ಶಾಂತಿನಿಕೇತನ ಗಣೇಶೋತ್ಸವ ಸಮಿತಿ, ಆಶೋಕ್‌ ನಗರ, ಪುಟಾಣಿ ನಗರ, ಕಾನ್ವೆಂಟ್‌ಜಂಕ್ಷನ್‌ನ ಗಣಪತಿ ಸೇವಾ ಸಮಿತಿ, ಚಾಮುಂಡೇಶ್ವರಿ ವಿದ್ಯುತ್‌ಸರಬರಾಜು ನಿಗಮ... ಹೀಗೆ ವಿವಿಧ ಕಡೆಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಕ್ಕಂದೂರು ಗಜಾನನ ಯುವಕ ಸಂಘವು ಭೂಕುಸಿತದ ಹಿನ್ನೆಲೆಯುಳ್ಳ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಇನ್ಮುಂದೆ ಇಂತಹ ಕಹಿ ಘಟನೆ ನಡೆಯದಂತೆ ಮಾಡಪ್ಪ ಗಣಪ ಎಂದು ಬೇಡಿಕೊಂಡರು.

ಉಡೋತ್‌ಮೊಟ್ಟೆ ಹಾಗೂ ತಾಳತ್ತಮನೆ ನೆಹರು ಯುವ ಕೇಂದ್ರದ ವತಿಯಿಂದ ಗಣಪತಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತಿಗೀತೆ, ಮಹಾಗಣಪತಿ ಹೋಮಗಳು ಸೇರಿದಂತೆ ಸಂಜೆಯ ವೇಳೆಗೆ ವಿವಿಧ ಗಣೇಶೋತ್ಸವ ಸಮಿತಿಯವರು ಭವ್ಯ ಮೆರವಣಿಗೆಯೊಂದಿಗೆ ಅಪ್ಪಂಗಳದಲ್ಲಿರುವ ತೋಡಿಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.