ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಸರೆ ಮತ್ತು ಗಣೇಶೋತ್ಸವಗಳು ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದ್ದು, ಬಹುತೇಕ ಯುವಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಅದರಲ್ಲೂ ಗಣೇಶೋತ್ಸವವಗಳು ಬಹುತೇಕ ಎಲ್ಲ ಬಡಾವಣೆಗಳಲ್ಲೂ ನಡೆಯಲಿವೆ. ಆದರೆ, ಇದಕ್ಕೆ ಅನುಮತಿ ಪಡೆಯಬೇಕಾದರೆ ಮಾತ್ರ ಆಯೋಜಕರು ಸಾಕಷ್ಟು ಶ್ರಮ ವಹಿಸಬೇಕಿದೆ.
ಗಣೇಶೋತ್ಸವಕ್ಕೆ ಪ್ರತಿ ಬಾರಿಯೂ ಏಕಗವಾಕ್ಷಿ ವ್ಯವಸ್ಥೆ ತರುತ್ತೇವೆ ಎಂದು ಹೇಳುವ ಪೊಲೀಸರು ಅದನ್ನು ಜಾರಿ ಮಾಡದೇ ಸುಮ್ಮನಾಗುತ್ತಾರೆ. ಹೀಗಾಗಿ, ಕಚೇರಿಯಿಂದ ಕಚೇರಿಗೆ ಆಯೋಜಕರು ಅಲೆಯಬೇಕಿದೆ.
ಮೊದಲಿಗೆ ನಗರಸಭೆಗೆ ತೆರಳಿ ₹ 500 ಪಾವತಿಸಿ ಅನುಮತಿ ಪತ್ರ ಪಡೆಯಬೇಕು. ನಂತರ, ಅಗ್ನಿಶಾಮಕದಳದ ಕಚೇರಿಗೆ ಹೋಗಿ ಅಲ್ಲಿ ₹ 100 ಪಾವತಿಸಿ ಅನುಮತಿ ಪಡೆಯಬೇಕು. ತದನಂತರ, ಸೆಸ್ಕ್ ಕಚೇರಿಗೆ ಹೋಗಿ ಅನುಮತಿ ಪತ್ರ ಪಡೆಯಬೇಕು. ಈ ಎಲ್ಲದರ ಅನುಮತಿ ಪತ್ರಗಳ 3 ಪ್ರತಿಗಳೊಂದಿಗೆ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕು. ಅಲ್ಲಿ ಮೆರವಣಿಗೆಗೆ ₹ 1,500, ಹಾಗೂ ಇತರ ಶುಲ್ಕ ಪಾವತಿಸಿ ಅನುಮತಿ ಪಡೆಬೇಕು. ಮಾತ್ರವಲ್ಲ, ಮೆರವಣಿಗೆಗೆ ಸಾಗುವ ವಾಹನಗಳ ದಾಖಲಾತಿಗಳನ್ನೂ ನೀಡಬೇಕು. ಇಷ್ಟೆಲ್ಲ ಮಾಡುವಷ್ಟರಲ್ಲಿ ಸಾಕು ಬೇಕಾಗುತ್ತದೆ ಎಂದು ಆಯೋಜಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ಜತೆಗೆ, ಏಕಗವಾಕ್ಷಿ ವ್ಯವಸ್ಥೆ ತಂದಲ್ಲಿ ಅನುಕೂಲವಾಗುತ್ತದೆ ಎಂದರು.
ಇನ್ನು ಗಣೇಶನನ್ನು ಕೂರಿಸುವ ಮಕ್ಕಳ ಪಾಡಂತೂ ಹೇಳತೀರದಾಗಿದೆ. ಕಚೇರಿಗೆ ಕಚೇರಿಗೆ ಅಲೆಯುವಷ್ಟರಲ್ಲಿ ಹೈರಣಾಗುತ್ತಾರೆ. ಹಾಗಾಗಿ, ಎಲ್ಲ ಅನುಮತಿ ಪತ್ರಗಳು ಹಾಗೂ ಶುಲ್ಕ ಪಾವತಿ ಒಂದೇ ಕಡೆ ನೀಡುವಂತಹ ವ್ಯವಸ್ಥೆ ಬೇಕು ಎಂಬ ಒತ್ತಾಯ ಗಣೇಶೋತ್ಸವ ಆಯೋಜಕರಿಂದ ಕೇಳಿ ಬಂದಿದೆ.
ಏಕಗವಾಕ್ಷಿ ವ್ಯವಸ್ಥೆ ಬೇಕು ಗಣೇಶೋತ್ಸವಕ್ಕೆ ಅನುಮತಿ ನೀಡಲು ಏಕಗವಾಕ್ಷಿ ವ್ಯವಸ್ಥೆ ಬೇಕಿದೆ. ಕಚೇರಿಯಿಂದ ಕಚೇರಿಗೆ ಹೋಗಬೇಕಾದ ಸ್ಥಿತಿ ಇದೆ. ಇನ್ನು ಮಕ್ಕಳ ಪಾಡಂತೂ ಹೇಳತೀರದಾಗಿದೆ. ಶೀಘ್ರದಲ್ಲಿ ಒಂದೇ ಕಡೆ ಅನುಮತಿ ನೀಡುವ ವ್ಯವಸ್ಥೆ ತನ್ನಿಚೇತನ್ ಶಾಂತಿನಿಕೇತನ ಯುವಕ ಸಂಘ.
ನಿಯಮ ಸರಳೀಕರಣ ಮಾಡಲಾಗಿದೆ ಪೊಲೀಸ್ ಅನುಮತಿ ಮಾತ್ರ ಕಡ್ಡಾಯವಾಗಿದೆ. ಚಿಕ್ಕದಾಗಿ ಸರಳವಾಗಿ ಗಣೇಶ ಕೂರಿಸುವವರು ಪೊಲೀಸ್ ಅನುಮತಿ ತೆಗೆದಕೊಂಡರೆ ಸಾಕು. ಆದರೆ ದೊಡ್ಡ ಮಟ್ಟದ ಗಣೇಶೋತ್ಸವ ಮಾಡುವವರು ಮಾತ್ರ ವಿವಿಧ ಇಲಾಖೆಗಳ ಅನುಮತಿ ಪಡೆಬೇಕು. ದೊಡ್ಡಮಟ್ಟದ ಗಣೇಶೋತ್ಸವ ಮಾಡುವವರ ಸಂಖ್ಯೆ ಕಡಿಮೆ ಇದೆಕೆ.ರಾಮರಾಜನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.