ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲಿಯೇ ಅದ್ಧೂರಿತನದ ಗೌರಿಗಣೇಶೋತ್ಸವಕ್ಕೆ ಹೆಸರಾಗಿರುವ ಪಟ್ಟಣವೆಂದರೆ ಅದು ವಿರಾಜಪೇಟೆ. ಜಿಲ್ಲೆಯಲ್ಲಿ ಮಾತ್ರವಲ್ಲದೆ ಪಟ್ಟಣದ ಗಣೇಶೋತ್ಸವ ರಾಜ್ಯದಲ್ಲಿಯೇ ವಿಶಿಷ್ಟವಾಗಿ ಗುರುತಿಸಿಕೊಂಡಿದೆ.
ಪಟ್ಟಣದಲ್ಲಿಂದು ಗಣೇಶೋತ್ಸವ ಕೇವಲ ಒಂದು ಸಮುದಾಯದ ಹಬ್ಬವಾಗಿರದೆ, ಇದು ವಿರಾಜಪೇಟೆಯ ಮಟ್ಟಿಗೆ ಊರ ಹಬ್ಬವಾಗಿದೆ. ಪುರಸಭೆಯ ವ್ಯಾಪ್ತಿಯಲ್ಲಿಯೇ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ಸಾರ್ವಜನಿಕ ಗೌರಿಗಣೇಶೋತ್ಸವ ಸಮಿತಿಗಳು ವಿಘ್ನನಾಶಕನ ಉತ್ಸವವನ್ನು ಪ್ರತಿವರ್ಷದಂತೆ ಈ ಬಾರಿಯೂ ವಿಜೃಂಭಣೆ ಹಾಗೂ ಅಷ್ಟೇ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿವೆ.
ಉತ್ಸವದಿಂದಾಗಿ ಪಟ್ಟಣ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಸುಂದರವಾಗಿ ಕಂಗೊಳಿಸುತ್ತಿದೆ. ಉತ್ಸವವು ಈ ಬಾರಿಯೂ ಪಟ್ಟಣವನ್ನು ಕಳೆಗಟ್ಟಿಸಿದೆ.
ಹೆಚ್ಚಿನ ಸಮಿತಿಗಳು ತಮ್ಮ ವೇದಿಕೆಯಲ್ಲಿ ಪ್ರತಿ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಭದ್ರಾವತಿಯಿಂದ ಕೇರಳದವರೆಗಿನ ಕಲಾ ತಂಡಗಳು ಈ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿವೆ. ಹೊರಊರಿನ ಖ್ಯಾತ ಕಲಾವಿದರೊಂದಿಗೆ, ಸ್ಥಳೀಯರಿಗೂ ಅವಕಾಶ ನೀಡುವ ಮೂಲಕ ಗೌರಿಗಣೇಶೋತ್ಸವವು ಸ್ಥಳೀಯ ಪ್ರತಿಭೆಗಳನ್ನು ಗುರುತಿಸುವ ವೇದಿಕೆಯೂ ಆಗಿದೆ.
11 ದಿನಗಳ ಕಾಲ ನಡೆಯುವ ಉತ್ಸವದ ಜೀವಾಳವೆಂದರೆ ಕೊನೆಯ ದಿನದಂದು ರಾತ್ರಿಯಿಂದ ಮುಂಜಾನೆವರೆಗೆ ನಡೆಯುವ ಶೋಭಾಯಾತ್ರೆಯೇ ಆಗಿದೆ. ಈ ಬಾರಿ ಸೆ. 6ರಂದು ರಾತ್ರಿ ಆರಂಭಗೊಳ್ಳುವ ಶೋಭಾಯಾತ್ರೆಯು ಮರುದಿನ ಅಂದರೆ ಸೆ. 7ರಂದು ಮುಂಜಾನೆವರೆಗೆ ನಡೆಯಲಿದೆ. ಈ ಬಾರಿಯ ಶೋಭಾಯಾತ್ರೆಯಲ್ಲಿ ಪ್ರಮುಖ 22 ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಭಾಗವಹಿಸಲಿವೆ.
ಬೆಳಗಿನ ಜಾವದವರೆಗೂ ನಡೆಯುವ ಆಕರ್ಷಕ ಶೋಭಾಯಾತ್ರೆಗೆ ವಿವಿಧ ಊರುಗಳಿಂದ ಆಗಮಿಸುವ ಸಾವಿರಾರು ಜನ ಸಾಕ್ಷಿಯಾಗಲಿದ್ದಾರೆ. ಶೋಭಾಯಾತ್ರೆಯಲ್ಲಿ 22 ಸಮಿತಿಗಳು ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಯನ್ನಿರಿಸಿ ಹಿರಿತನದ ಆಧಾರದಲ್ಲಿ ಸಾಲಾಗಿ ಮೆರವಣಿಗೆಯಲ್ಲಿ ಸಾಗುತ್ತವೆ.
ಮೆರವಣಿಗೆಯು ಬೆಳಗಿನ ಜಾವದ ಸುಮಾರಿಗೆ ಪಟ್ಟಣದ ಖಾಸಗಿ ಬಸ್‌ನಿಲ್ದಾಣದ ಬಳಿಯಿರುವ ಗೌರಿಕೆರೆ ತಲುಪಿ, ತಮ್ಮ ಹಿರಿತನದಂತೆ ಶ್ರದ್ಧಾಭಕ್ತಿಯಿಂದ ಉತ್ಸವಮೂರ್ತಿಗಳನ್ನು ವಿಸರ್ಜಿಸುವ ಮೂಲಕ ಉತ್ಸವಕ್ಕೆ ವಿದಾಯ ಹೇಳಲಾಗುತ್ತದೆ.
ವಿಶೇಷತೆಯೆಂದರೆ, ಹಬ್ಬದ ಮೊದಲ ದಿನ ಪಟ್ಟಣದ ಮಹಾಗಣಪತಿ ದೇವಾಲಯದಲ್ಲಿ ಉತ್ಸವ ಮೂರ್ತಿಗಳ ಪ್ರತಿಷ್ಠಾಪನೆಯ ನಂತರ ಉಳಿದ ಗಣೇಶೋತ್ಸವ ಸಮಿತಿಗಳಲ್ಲಿ ಪ್ರತಿಷ್ಠಾಪನಾ ಕಾರ್ಯ ನಡೆಯುತ್ತದೆ. ಹಾಗೂ ಶೋಭಾಯಾತ್ರೆಯಂದು ಮಹಾಗಣಪತಿ ದೇವಾಲಯದಲ್ಲಿ ಉತ್ಸವಮೂರ್ತಿಯನ್ನು ಹೊರತಂದು ಶೋಭಾಯಾತ್ರೆಗೆ ಚಾಲನೆ ನೀಡಿ, ಸಿಡಿಮದ್ದು ಸಿಡಿಸಲಾಗುತ್ತದೆ. ಸಿಡಿಮದ್ದಿನ ಸೂಚನೆಯನ್ನು ಅರ್ಥೈಸಿಕೊಂಡ ಉಳಿದ 21 ಸಮಿತಿಗಳು ತಾವು ಪ್ರತಿಷ್ಠಾಪಿಸಿದ್ದ ಉತ್ಸವಮೂರ್ತಿಗಳನ್ನು ಹೊರತಂದು ಶೋಭಾಯಾತ್ರೆಯ ರಥದಲ್ಲಿರಿಸಿ ಮೆರವಣಿಗೆಗೆ ಚಾಲನೆ ನೀಡುತ್ತವೆ. ಇದು ಹಿಂದಿನಿಂದಲೂ ಪಾಲಿಸುತ್ತಾ ಬಂದಿರುವ ಅಘೋಷಿತ ನಿಯಮ.
ಉತ್ಸವದ 11 ದಿನಗಳು, ವಿಶೇಷವಾಗಿ ಕೊನೆಯ ದಿನವಂತೂ ಪಟ್ಟಣದ ಪ್ರತಿಯೊಬ್ಬರ ಮನ-ಮನೆಯಲ್ಲೂ ಸಂಭ್ರಮ ಕಂಗೊಳಿಸುತ್ತಿರುತ್ತದೆ. ಆದರೆ, ಶೋಭಾಯಾತ್ರೆಯ ಮರುದಿನ ಪಟ್ಟಣ ಸಂಪೂರ್ಣವಾಗಿ ಕಳೆಗುಂದುತ್ತದೆ. ಜೊತೆಗೆ, ಪ್ರತಿಯೊಬ್ಬರೂ ಭಾರವಾದ ಹೃದಯದೊಂದಿಗೆ ಮುಂದಿನ ಸಾಲಿನ ಉತ್ಸವದ ಬಗ್ಗೆ ಯೋಚಿಸುವುದು ಸುಳ್ಳಲ್ಲ. ಇದು ಗೌರಿಗಣೇಶೋತ್ಸವದೊಂದಿಗೆ ಪಟ್ಟಣದ ನಂಟು ಹಾಗೂ ಪ್ರತಿಯೊಬ್ಬರ ಮೇಲೆ ಬೀರಿರುವ ದಟ್ಟ ಪ್ರಭಾವಕ್ಕೆ ಸಾಕ್ಷಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.