
ವಿರಾಜಪೇಟೆ: ಲಿಂಗ ಸಮಾನತೆಯಿಂದ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಶ್ವಿನಿ ಸ್ತ್ರೀ ಶಕ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚಿಯನ್ ಕಾಲೊನಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಸೋಮವಾರ ನಡೆದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಂಡು ಮಕ್ಕಳಿಗೆ ಮಾತ್ರ ಅದ್ಯತೆ ನೀಡದೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶ ಕಲ್ಪಿಸುವುದರ ಜೊತೆಗೆ ಹೆಣ್ಣು ಮಕ್ಕಳನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು. ಮಕ್ಕಳಲ್ಲಿ ಲಿಂಗ ತಾರತಮ್ಯ ಮಾಡದೇ ಪ್ರತಿ ಮಗುವಿಗೂ ಉತ್ತಮ ಭವಿಷ್ಯ ನಿರ್ಮಾಣ ಮಾಡುವತ್ತ ಪೋಷಕರು ಗಮನಹರಿಸಬೇಕು. ಕೆಲ ಮಕ್ಕಳಲ್ಲಿ ಅಪೌಷ್ಟಿಕತೆಯ ಕಾರಣದಿಂದ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತಿದೆ. ಇದನ್ನು ಮನಗಂಡ ಸರ್ಕಾರವು ಮಕ್ಕಳ ಬೆಳವಣಿಗೆ ಸರಿಪಡಿಸಲು ಪೋಷಣ ಕಾರ್ಯಕ್ರಮ ಹಮ್ಮಿಕೊಂಡಿದೆ. ಗರ್ಭಿಣಿಯರು ಪೌಷ್ಟಿಕ ಆಹಾರ ಬಳಕೆ ಹೆಚ್ಚು ಮಾಡುವತ್ತ ಗಮನಹರಿಸಬೇಕು’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ರೀತಾ ಅವರು ಮಾತನಾಡಿ, ‘ಗರ್ಭಿಣಿಯರು ಹೆಚ್ಚು ಒತ್ತಡದಿಂದ ಬಳಲುತ್ತಿರುವುದು ಕಂಡು ಬರುತ್ತಿದೆ. ಆಹಾರ ಪದ್ಧತಿ ಬದಲಾವಣೆ ಮಾಡದೆ ಹಾಗೂ ಹೆಚ್ಚಿನ ಪೋಷಕಾಂಶಗಳು ಹೊಂದಿರುವ ಮಿತ ಆಹಾರ ಸೇವಿಸುವುದು ಉತ್ತಮ. 6ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಬೆಳವಣಿಗೆಯಲ್ಲಿ ಕುಂಠಿತ ಕಂಡುಬರುತ್ತಿದೆ. ಮಕ್ಕಳು ಹೆಚ್ಚಾಗಿ ಮೊಬೈಲು ಮತ್ತು ಟಿ.ವಿ ನೋಡುತ್ತಾ ದಿನ ಕಳೆಯುತ್ತಿರುವುದು ಇದಕ್ಕೆ ಕಾರಣ. ಸಸ್ಯಾಹಾರ ಮತ್ತು ಮಾಂಸಹಾರ ಆಹಾರ ಮಿತವಾಗಿ ಬಳಸುವುದು ಅಪೌಷ್ಟಿಕತೆಯನ್ನು ನಿವಾರಿಸುವಲ್ಲಿ ಸಹಕಾರಿ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ. ಪರಮೇಶ್ವರ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಮಾತನಾಡಿದರು.
ಇದೇ ವೇಳೆ ಬೇಟಿ 'ಬಚಾವೋ- ಬೇಟಿ ಪಡವೋ' ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲಾಯಿತು. ಗ್ರಾಮ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶ್ವಿನಿ ಸ್ತ್ರೀ ಶಕ್ತಿ ಸಂಘದ ಸದಸ್ಯರು ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಪ್ರದರ್ಶಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ರೇಣುಕಾ, ಗ್ರಾಮ ಪಂಚಾಯಿತಿ ಸದಸ್ಯರಾದ ಮಾಳೇಟಿರ ಸಾಬ ಮುತ್ತಪ್ಪ, ವೀಣಾ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶೀಲಾ ಎ.ಬಿ ವೇದಿಕೆಯಲ್ಲಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.