ADVERTISEMENT

ಅಧಿವೇಶನ ಮುಗಿದ ಬಳಿಕ ಕೊಡಗು ಎಸ್‌ಪಿ ಕಚೇರಿ, ಶಾಸಕರ ಮನೆಗೆ ಮುತ್ತಿಗೆ:ಎಂ ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 12:27 IST
Last Updated 14 ಸೆಪ್ಟೆಂಬರ್ 2022, 12:27 IST
   

ಮಡಿಕೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕೋಳಿಮೊಟ್ಟೆ ಎಸೆದಿದ್ದಕ್ಕೆ ಪ್ರತಿಯಾಗಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಹಾಗೂ ಇಲ್ಲಿನ ಶಾಸಕರ ಮನೆಗೆ ವಿಧಾನಸಭೆ ಅಧಿವೇಶನ ಮುಗಿದ ಬಳಿಕ ಮುತ್ತಿಗೆ ಹಾಕಲಾಗುವುದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.

‘ಕೊಡಗೇನೂ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರ ಆಸ್ತಿಯೇ’ ಎಂದು ಪ್ರಶ್ನಿಸಿದ ಅವರು, ಕಳೆದ 25 ವರ್ಷಗಳಿಂದ ಶಾಸಕರಾಗಿರುವ ತಮ್ಮ ಸಾಧನೆ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಸವಾಲೆಸೆದರು.

ಸಿದ್ದರಾಮಯ್ಯ ಅವರನ್ನು ಕಂಡರೆ ಬಿಜೆಪಿಗೆ ಭಯ ಇರುವುದರಿಂದಲೇ ಅವರ ಮೇಲೆ ಕೋಳಿಮೊಟ್ಟೆ ಎಸೆಯಲಾಯಿತು. ಅವರನ್ನು ಟೀಕಿಸುವುದಕ್ಕೆ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಬಹುಪಾಲು ಸಮಯ ವ್ಯಯಿಸಲಾಯಿತು. ಇಲ್ಲಿನ ಶಾಸಕರು ಮುಂಬರುವ ಚುನಾವಣೆಯಲ್ಲಿ ಟಿಕೆಟ್‌ ಗಳಿಸಲು ಸಿದ್ದರಾಮಯ್ಯ ವಿರುದ್ಧ ಕಪ್ಪುಬಾವುಟ ಪ್ರದರ್ಶನದಂತಹ ಪ್ರತಿಭಟನೆಗೆ ಕುಮ್ಮಕ್ಕು ನೀಡಿದರು ಎಂದು ಆರೋಪಿಸಿದರು.

ADVERTISEMENT

‘ಸಿ.ಟಿ.ರವಿ ಬೆಂಕಿ ಹೊತ್ತಿಸುವ ವ್ಯಕ್ತಿ. ಅವರ ಭಾವ ಸಾಕಷ್ಟು ಆಸ್ತಿ ಮಾಡಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅವರದೇ ಪಕ್ಷದ 17 ಮಂದಿ ಸಿ.ಡಿಯೊಂದರ ಪ್ರಸಾರಕ್ಕೆ ತಡೆಯಾಜ್ಞೆಗೆ ತಂದಿದ್ದಾರೆ. ಈ ಎಲ್ಲದರ ಕುರಿತು ಸಿ.ಟಿ.ರವಿ ಉತ್ತರ ಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.