ಸಾವು (ಪ್ರಾತಿನಿಧಿಕ ಚಿತ್ರ)
ಮಡಿಕೇರಿ: ದಕ್ಷಿಣ ಅಮೆರಿಕಾದ ಗಯಾನಾ ದೇಶದಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮಡಿಕೇರಿ ತಾಲ್ಲೂಕಿನ ಮದೆನಾಡು ಗ್ರಾಮದ ನಿವಾಸಿ ಪಿ.ಬಿ.ಗಿರೀಶಬಾಬು ಪಾಲೆ ಅವರ ಮೃತದೇಹ ತರಲು ರಾಜ್ಯಸರ್ಕಾರವು ₹ 3.60 ಲಕ್ಷ ನೆರವು ನೀಡಿದೆ.
2 ವರ್ಷಗಳಿಂದ ಗಯಾನಾದ ಶೆರಿಫ್ ಜನರಲ್ ಆಸ್ಪತ್ರೆಯಲ್ಲಿ ಸ್ಟಾಫ್‌ನರ್ಸ್ ಆಗಿದ್ದ ಅವರು, ಜುಲೈ 3ರಂದು ಅನಾರೋಗ್ಯದಿಂದ ಅಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಅನಿಯಮಿತ ರಕ್ತಸ್ರಾವದ ಹೃದಯಘಾತದಿಂದ ಜುಲೈ 14ರಂದು ಮೃತಪಟ್ಟರು.
ಪತ್ನಿ ಜಾನಕಿ 2 ವರ್ಷದ ಮಗನೊಂದಿಗೆ ಬೆಂಗಳೂರಿನಲ್ಲಿದ್ದು, ಮೃತದೇಹ ತರಲು ಸುಮಾರು ₹ 12 ಲಕ್ಷ ವೆಚ್ಚವಾಗಲಿದ್ದು, ಅಷ್ಟು ದೊಡ್ಡ ಮೊತ್ತವನ್ನು ಭರಿಸುವುದು ಕಷ್ಟ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ, ಅನಿವಾಸಿ ಭಾರತೀಯ ಸಮಿತಿಯಿಂದ ಮೃತದೇಹವನ್ನು ಭಾರತಕ್ಕೆ ಕರೆತರಲು ತಗಲುವ ವೆಚ್ಚವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಧನಸಹಾಯ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿತ್ತು.
‘ಮನವಿಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವತಿಯಿಂದ ₹ 3.60 ಲಕ್ಷವನ್ನು ಮಂಜೂರು ಮಾಡಿದ್ದು, ಉಳಿಕೆ ಹಣವನ್ನು ಮೃತ ಪಿ.ಬಿ.ಗಿರೀಶ ಬಾಬು ಪಾಲೆ ಅವರು ಕೆಲಸ ಮಾಡುತ್ತಿದ್ದ ಶೆರಿಫ್ ಜನರಲ್ ಆಸ್ಪತ್ರೆಯವರು ಭರಿಸಲು ಒಪ್ಪಿದ್ದಾರೆ. ಗಯಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಾಗೂ ನವದೆಹಲಿಯಲ್ಲಿರುವ ನಿವಾಸಿ ಆಯುಕ್ತರ ವತಿಯಿಂದ ಮೃತದೇಹವನ್ನು ಭಾರತಕ್ಕೆ ತರಲಾಗುವುದು’ ಎಂದು ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರ ವಿಶೇಷ ಕರ್ತವ್ಯಾಧಿಕಾರಿ ಎಚ್.ಎಸ್.ಸತೀಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.