ಮಡಿಕೇರಿ: ಕೊಡಗು ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಸಮೀಪ ಸರ್ಕಾರಿ ಶಾಲೆಯೊಂದು ಸಕಲ ಸೌಲಭ್ಯಗಳಿಂದ ಸುಜ್ಜಿತವಾಗಿದ್ದು, ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿದೆ.
ಊರುಗುತ್ತಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1950ರಲ್ಲಿ ಆರಂಭಗೊಂಡಿತು. ಬರೋಬರಿ 75 ವಸಂತಗಳನ್ನು ಕಂಡಿರುವ ಈ ಶಾಲೆಯಲ್ಲಿ ಅಮೃತ ಮಹೋತ್ಸವ ನಡೆಸಬೇಕಾಗಿದೆ. ಇಷ್ಟು ವರ್ಷದಲ್ಲಿ ಈ ಶಾಲೆಯಲ್ಲಿ ಸಾವಿರಾರು ಮಂದಿ ವಿದ್ಯೆ ಕಲಿತು, ಈಗ ಶಾಲೆಗೆ ನೆರವಾಗುವ ಮೂಲಕ ಸಹಾಯಹಸ್ತ ಚಾಚಿದ್ದಾರೆ.
ಈ ಶಾಲೆಯಲ್ಲಿ ಕಲಿತವರು ರಾಜ್ಯಸಭೆಯ ಉದ್ಯೋಗಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿ ಗಣ್ಯ ವ್ಯಕ್ತಿಗಳು ಎಂಬ ಸ್ಥಾನಮಾನ ಪಡೆದಿದ್ದಾರೆ. ಇದೀಗ ಅವರಲ್ಲಿ ಬಹುತೇಕ ಮಂದಿ ತಾವು ಕಲಿತ ಶಾಲೆಯ ಶ್ರೇಯೋಭಿವೃದ್ಧಿಗೆ ನಿಂತಿದ್ದಾರೆ.
ಈ ಶಾಲೆ ಇಲ್ಲಿ ಸುಮಾರು 3 ಎಕರೆಯಷ್ಟು ವಿಸ್ತೀರ್ಣದ ಪ್ರದೇಶದಲ್ಲಿ ಸುಸಜ್ಜಿತ ಸ್ಥಿತಿಯಲ್ಲಿದೆ. ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಬಲ್ಲ ವಿಶಾಲವಾದ ಆಟದ ಮೈದಾನ, ಉತ್ತಮ ಕ್ರೀಡಾಪರಿಕರಗಳು ಇಲ್ಲಿವೆ. ಸದ್ಯ, ಉತ್ತಮ ಸ್ಥಿತಿಯಲ್ಲಿರುವ ಈ ಶಾಲೆಗೂ ಬೇರೆ ಇತರೆ ಸರ್ಕಾರಿ ಶಾಲೆಗಳಿಗೆ ಇರುವಂತೆ ವಿದ್ಯಾರ್ಥಿಗಳ ಕೊರತೆಯೂ ಕಾಡುತ್ತಿದೆ.
ಆದಾಗ್ಯೂ, ಈ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ ತಾಲ್ಲೂಕುಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದಿದ್ದಾರೆ. ಕಳೆದ ವರ್ಷವೂ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿದ್ದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ರಾಧಾ, ‘ಶಾಲೆಯು ಉತ್ತಮ ಸ್ಥಿತಿಯಲ್ಲಿದ್ದು, ಉತ್ತಮ ಸೌಲಭ್ಯಗಳನ್ನು ಹೊಂದಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಉತ್ತಮ ಹಾಗೂ ಸರ್ವಾಂಗೀಣ ಶಿಕ್ಷಣ ದೊರೆಯುತ್ತದೆ’ ಎಂದು ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿಗಳಾದ ತೇಜಸ್ ಅವರು ಕಂಪ್ಯೂಟರ್, ಟೀಶರ್ಟ್, ಹನೀಫ್ ಮತ್ತು ಗಿರೀಶ್ ಅವರು ಬೀರು, ಟೇಬಲ್, ಮಂಜುನಾಥ್ ಅವರು ರಾಷ್ಟ್ರನಾಯಕರು, ಕವಿಗಳ ಚಿತ್ರಗಳನ್ನು, ಪ್ರವೀಣ್ ಅವರು ₹ 40 ಸಾವಿರ ಮೌಲ್ಯದ ಡೆಸ್ಕ್, ಬೆಂಚುಗಳನ್ನು ನೀಡಿದ್ದಾರೆ.
ಬೇಡಗೊಟ್ಟ ಗ್ರಾಮ ಪಂಚಾಯಿತಿಯಿಂದ ₹ 10 ಸಾವಿರ ಮೌಲ್ಯದ ಕ್ರೀಡಾಪರಿಕರಗಳನ್ನು ನೀಡಲಾಗಿದೆ. ಶಟಲ್ ಕಾಕ್, ವಾಲಿಬಾಲ್, ಫುಟ್‌ಬಾಲ್, ಥ್ರೋಬಾಲ್, ಸ್ಕಿಪಿಂಗ್, ಚೆಸ್, ಕೇರಂ ಮೊದಲಾದ ಕ್ರೀಡಾ ಸಾಮಗ್ರಿಗಳು ಈಗ ಶಾಲೆಯಲ್ಲಿವೆ.
ಕಳೆದ ವರ್ಷ ಟೆಸ್ಕಸ್ ಕಂಪನಿಯವರು ಲೇಖನ ಸಾಮಗ್ರಿ ನೀಡಿದ್ದರೆ, ಮುಖ್ಯ ಶಿಕ್ಷಕಿ ರಾಧಾ ಅವರು ಮಕ್ಕಳಿಗೆ ಟೈ ಮತ್ತು ಬೆಲ್ಟ್‌ಗಳನ್ನು ನೀಡಿದ್ದರು. ಇವರು 2021–22ನೇ ಸಾಲಿನಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೂ ಭಾಜನರಾಗಿದ್ದರು.
ಸದ್ಯ, ಶಾಲೆಯಲ್ಲಿ 16 ಮಕ್ಕಳಿದ್ದು, ಇವರಿಗಾಗಿ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿತ ಈರೇಂದ್ರಕುಮಾರ್ ರಾಜ್ಯಸಭೆಯಲ್ಲಿ ಕೆಲಸ ಮಾಡುತ್ತಿದ್ದರು.
ನಮ್ಮ ಶಾಲೆಯಲ್ಲಿ ಪಾಠ ಮಾತ್ರವಲ್ಲದೆ ಕ್ರೀಡೆ ಸಂಗೀತ ನಾಟಕ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜ್ಞಾನ ಪ್ರದರ್ಶನಗಳು ಎಲ್ಲಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗುತ್ತದೆ.ಎ.ಪಿ.ರಾಧಾ ಪ್ರಭಾರ ಮುಖ್ಯ ಶಿಕ್ಷಕಿ.
ಶಾಲೆ ಉತ್ತಮವಾಗಿದ್ದು ಅತ್ಯುತ್ತಮ ವ್ಯವಸ್ಥೆಯನ್ನು ಹೊಂದಿದೆ. ಪೋಷಕರು ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಿದರೆ ಉತ್ತಮ ಗುಣಾತ್ಮಕ ನಿಶ್ಚಿತವಾಗಿಯೂ ಸಿಗಲಿದೆ.ಅಶೋಕಕುಮಾರ್ ಸಹಶಿಕ್ಷಕ.
ಖಾಸಗಿ ಶಾಲೆಗಳನ್ನು ಮೀರಿಸುವಂತಹ ಕ್ರೀಡಾ ಪರಿಕರಗಳಿವೆ. ಉತ್ತಮ ಆಟದ ಮೈದಾನ ಇದೆ. ಮಕ್ಕಳು ಕ್ರೀಡೆಗಳಲ್ಲೂ ಸಾಧನೆ ಮಾಡುತ್ತಿದ್ದಾರೆ.ಎಸ್.ಬಿ.ಚಂದ್ರಕಲಾ ಸಹಶಿಕ್ಷಕಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.