ADVERTISEMENT

‘ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿ’

ಕೊಡಗು ಜಿಲ್ಲೆಯ ಪ್ರಾಥಮಿಕ ಶಾಲೆಗಳು ಬಂದ್‌, ಶಿಕ್ಷಕರು ಬೇಡಿಕೆ ಈಡೇರಿಸಲು ಪಟ್ಟು

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 10:58 IST
Last Updated 9 ಜುಲೈ 2019, 10:58 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಸಂಘದ ಪದಾಧಿಕಾರಿಗಳು 
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕ ಸಂಘದ ಪದಾಧಿಕಾರಿಗಳು    

ಮಡಿಕೇರಿ: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು, 1ರಿಂದ 5ನೇ ತರಗತಿಗೆ ಮಾತ್ರ ಬೋಧಿಸಬೇಕು ಎಂದು ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಚೇತನ್‌ ಕುಮಾರ್‌ ಒತ್ತಾಯಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಮಂಗಳವಾರ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಪ್ರಾಥಮಿಕ ಶಾಲೆಗಳನ್ನೂ ಬಂದ್‌ ಮಾಡಿ ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ನೂತನ, ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕು. ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಚೇತನ್‌ ಕುಮಾರ್‌ ಕೋರಿದರು.

ಇಂಗ್ಲಿಷ್ ಮಾಧ್ಯಮ ವ್ಯಾಮೋಹ ಪೋಷಕರಲ್ಲಿ ಹೆಚ್ಚಾಗಿದೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ. ಆದ್ದರಿಂದ, ಪ್ರಾಥಮಿಕ ಶಾಲೆಗಳಲ್ಲಿ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಆರಂಭಿಸಿ, ಶಿಕ್ಷಕರಿಗೂ ಅಗತ್ಯ ಸವಲತ್ತುಗಳನ್ನು ನೀಡಬೇಕು ಎಂದು ಮನವಿ ಮಾಡಿದರು.

2014ಕ್ಕಿಂತ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 5ನೇ ತರಗತಿಗೆ ಸೀಮಿತಗೊಳಿಸಿದ ಆದೇಶವನ್ನು ತಕ್ಷಣ ರದ್ದು ಮಾಡಬೇಕು. ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಶಿಕ್ಷಕರಿಗೆ ಬಡ್ತಿ ನೀಡಿ, ಪ್ರೌಢಶಾಲೆಯಲ್ಲೂ ಬೋಧನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

5 ಮತ್ತು 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸು ಪ್ರಕಾರ ಮುಖ್ಯ ಶಿಕ್ಷಕರಿಗೆ ಬಡ್ತಿ ನೀಡಬೇಕು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪ ನಿರ್ದೇಶಕರ ಹುದ್ದೆಯವರೆಗೂ ಬಡ್ತಿ ನೀಡಬೇಕೆಂದು ಮನವಿ ಮಾಡಿದರು.

ಸಂಘದ ಪದಾಧಿಕಾರಿ ಎಚ್‌.ಬಿ.ಕರುಂಬಯ್ಯ ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಇದಕ್ಕೆ ಶಿಕ್ಷಕರನ್ನು ಕಾರಣ ಮಾಡಬೇಕಿಲ್ಲ. ಕೆಲವು ಶಾಲೆಗಳಲ್ಲಿ ಮಕ್ಕಳಿದ್ದರೂ ಶಿಕ್ಷಕರ ಕೊರತೆ ಕಾಡುತ್ತಿದೆ. ವಿದ್ಯಾರ್ಥಿಗಳ ಕೊರತೆ, ವರ್ಗಾವಣೆ ಹಾಗೂ ಪದವೀಧರ ಶಿಕ್ಷಕರ ಗಂಭೀರ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸಂಘ ಸೆಳೆಯಬೇಕಿದೆ ಎಂದು ಒತ್ತಾಯಿಸಿದರು.

ಸಂಘದ ಮಡಿಕೇರಿ ಅಧ್ಯಕ್ಷ ಜನಾರ್ದನ, ವಿರಾಜಪೇಟೆ ಅಧ್ಯಕ್ಷ ಸುರೇಂದ್ರ, ಮುಖಂಡರಾದ ಯೋಗೇಶ್ ಕುಮಾರ್‌, ರೇವತಿ ರಮೇಶ್‌, ಮಂಜುನಾಥ್‌, ವನಜಾ, ರಾಖಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.