ADVERTISEMENT

ಕೊಡಗು | ಕಾಫಿ ಕಣಿವೆಯಲ್ಲಿ ಹಸಿರು ಸಿಂಗಾರ

ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ತಂದ ಸೊಬಗು, ಅರಳಿದ ಹೂವುಗಳು, ಹಸಿರು ಹೊದ್ದ ಗಿರಿಗಳು

ಅದಿತ್ಯ ಕೆ.ಎ.
Published 10 ಮೇ 2020, 19:30 IST
Last Updated 10 ಮೇ 2020, 19:30 IST
ಕೊಡಗು ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಅರಳಿರುವ ಹೂವುಗಳು
ಕೊಡಗು ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಆಸುಪಾಸಿನಲ್ಲಿ ಅರಳಿರುವ ಹೂವುಗಳು   
""
""

ಮಡಿಕೇರಿ: ಮುಂಗಾರು ಪೂರ್ವ ಮಳೆಯು ಭೂರಮೆಗೆ ತಾಕಿ ಗಿರಿಶ್ರೇಣಿಗಳು ಹಸಿರು ಹೊದ್ದು ಸೊಬಗು ಸೂಸುತ್ತಿವೆ. ರಸ್ತೆಯ ಇಕ್ಕೆಲಗಳು ಹಸಿರಾಗಿವೆ. ಗಿಡಮರಗಳು ಹೂವು ಬಿಟ್ಟು ನಳನಳಿಸುತ್ತಿವೆ; ಪಕ್ಷಿಗಳು ಇಂಪಾಗಿ ಹಾಡುತ್ತಿವೆ. ‘ಕಾಫಿ ಕಣಿವೆ’ ಕೊಡಗು ಜಿಲ್ಲೆಯ ಪ್ರಕೃತಿ ಸೊಬಗು ಚೆಲ್ಲಿದ್ದು ಮನಸ್ಸಿಗೆ ಮುದ ನೀಡುತ್ತಿದೆ. ಲಾಕ್‌ಡೌನ್‌ ನಡುವೆ ‘ಪ್ರಕೃತಿ ದಿಗ್ಬಂಧನ’ಕ್ಕೆ ಒಳಗಾಗದೆ ಚಿಗುರೊಡೆದು ಮನಸ್ಸಿಗೆ ಮುದ ನೀಡುತ್ತಿದೆ.

ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆಯು ಎರಡು ದಿನಕ್ಕೊಮ್ಮೆ ಧಾರಾಕಾರವಾಗಿ ಸುರಿಯುತ್ತಿದ್ದು ಪ್ರಕೃತಿ ಚೆಲುವಿನ ನಗೆ ಬೀರಿದೆ. ಮಳೆಯು ಸೊಬಗು ಹೊತ್ತು ತಂದಿದೆ.

ಲಾಕ್‌ಡೌನ್, ಕೊರೊನಾ ಸೋಂಕಿನ ಭೀತಿಯಿಂದ ಜನರ ಓಡಾಟವು ಕಡಿಮೆಯಿದೆ. ಪ್ರಕೃತಿ ಮೇಲಿನ ಒತ್ತಡ ತಗ್ಗಿದೆ. ವಾಹನಗಳು ಉಗುಳುವ ಹೊಗೆಯೂ ಅಷ್ಟಿಲ್ಲ; ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ ಎಸೆದು ಪರಿಸರಕ್ಕೆ ಧಕ್ಕೆ ತರುತ್ತಿದ್ದರು. ಅದೂ ನಿಯಂತ್ರಣಕ್ಕೆ ಬಂದಿದೆ!

ADVERTISEMENT

ಮಳೆಯ ಮಜ್ಜನದಿಂದ ಪ್ರಕೃತಿಯಲ್ಲಿ ಹಸಿರು ಉಕ್ಕುತ್ತಿದೆ. ಜಿಲ್ಲೆಯಲ್ಲಿ ಮಾರ್ಚ್ ಹಾಗೂ ಏಪ್ರಿಲ್‌ನಲ್ಲಿ ಬಿಸಿಲ ಬೇಗೆ ಹೆಚ್ಚಾಗಿಯೇ ಇರುತ್ತಿತ್ತು. ಒಂದೆರಡು ಮಳೆ ಬಿದ್ದು ಭೂಮಿ ತಂಪಾಗುತ್ತಿತ್ತು ಅಷ್ಟೇ. ಆದರೆ, ಈ ವರ್ಷ ಏಪ್ರಿಲ್‌ ಮೊದಲ ವಾರದಿಂದಲೂ ಮಳೆ ಸುರಿಯುತ್ತಿದೆ. ಹೀಗಾಗಿ, ಪ್ರಕೃತಿಯಲ್ಲಿ ಹಲವು ಬದಲಾವಣೆ ಆಗಿವೆ.

ಬೆಟ್ಟಗಳತ್ತ ಹಳ್ಳಿಗರು...:ಇನ್ನು ಲಾಕ್‌ಡೌನ್‌ನಿಂದ ಹಳ್ಳಿಗೆ ಬಂದ ಬಹುತೇಕರು ತಮ್ಮ ಕಾರ್ಯ ಸ್ಥಾನಕ್ಕೆ ಮರಳಿಲ್ಲ. ಈಗ ಪಾಸ್‌ ಪಡೆದು ಜಿಲ್ಲೆಗೆ ಮರಳುವರರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗೆ ಬಂದವರು 14 ದಿನಗಳ ಮನೆಯಲ್ಲೇ ಕ್ವಾರಂಟೈನ್‌ ಮುಗಿಸಿ ಕಾಡುಮೇಡುಗಳತ್ತ ಹೆಜ್ಜೆ ಇಡುತ್ತಿದ್ದಾರೆ! ಕಾಡುಮೇಡು, ಕಾಫಿ ತೋಟಗಳಲ್ಲಿ ಗಿಡ ಮರಗಳಲ್ಲಿ ಎಲೆಗಳು ಚಿಗುರಿವೆ. ಬಣ್ಣಗಳೂ ಬದಲಾವಣೆ ಕಂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಮಳೆಯಲ್ಲಿ ತೊಯ್ದು ಪ್ರಕೃತಿಯಲ್ಲಿ ಆಗಿರುವ ಬದಲಾವಣೆ ಕಣ್ಣಿಗೆ ಆನಂದ ನೀಡುತ್ತಿದೆ.

ಬೆಂಗಳೂರು, ಬಾಂಬೆ, ಹೈದರಾಬಾದ್‌ನಲ್ಲಿ ಟೆಕ್ಕಿಗಳಾಗಿ ಕೆಲಸ ಮಾಡುತ್ತಿದ್ದವರಿಗೆ ಈಗ ವರ್ಕ್‌ ಫ್ರಮ್‌ ಹೋಂನಿಂದಾಗಿ ಅವರೆಲ್ಲರೂ ತಮ್ಮೂರಿಗೆ ಮರಳಿದ್ದಾರೆ. ಅವರು ಪ್ರಕೃತಿಯಲ್ಲಿ ಆಗಿರುವ ಬದಲಾವಣೆ ಕಣ್ತುಂಬಿಕೊಳ್ಳುತ್ತಿದ್ದಾರೆ. ‘ಇಡೀ ವಾತಾವರಣವೇ ಬದಲಾಗಿದೆ; ತಂಪಾದ ಗಾಳಿ ಸಿಗುತ್ತಿದೆ’ ಎಂದು ಟೆಕ್ಕಿ ಸಂತೋಷ್‌ ಹರ್ಷ ವ್ಯಕ್ತ ಪಡಸುತ್ತಾರೆ.

ರಸ್ತೆ ಬದಿಯಲ್ಲಿ ಅರಳಿದ ಹೂವು:ರಸ್ತೆಯ ಎರಡು ಬದಿಯ ಮರಗಳಲ್ಲೂ ಹೂವು ಅರಳಿ ಪ್ರಯಾಣಿಕರಿಗೆ ಮುದ ನೀಡುತ್ತಿದೆ. ಪ್ರವಾಸಿಗರ ವಾಹನವಿಲ್ಲದ ಕಾರಣಕ್ಕೆ ಮಡಿಕೇರಿಯಿಂದ ಆನೆಕಾಡು ಮಾರ್ಗವಾಗಿ ಕುಶಾಲನಗರಕ್ಕೆ ತಲುಪುವಾಗ ಈ ಬದಲಾವಣೆ ಅನುಭವಕ್ಕೆ ಸಿಗುತ್ತಿದೆ. ಬಿರು ಬೇಸಿಗೆಯ ಬಳಿಕ ನೆಲದೊಳಗಿನ ಗಡ್ಡೆಗಳು ಮೊಳಕೆಯೊಡೆದು ಹೂವು ಅರಳಿವೆ. ಇನ್ನು ಕುಶಾಲನಗರದ ಸುತ್ತಮುತ್ತ, ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ ಭಾಗದಲ್ಲಿ ‘ಮೇ ಫ್ಲವರ್‌’ ಅರಳಿವೆ.

ಕಾವೇರಿಯಲ್ಲಿ ಕಳೆ:ಈ ವರ್ಷ ಕಾವೇರಿ ನದಿ ಸೇರಿದಂತೆ ಸಣ್ಣಪುಟ್ಟ ಹಳ್ಳಗಳು ಬತ್ತಿಲ್ಲ. ಪ್ರತಿ ವರ್ಷ ಕಾವೇರಿ ನದಿಯು ಮಾರ್ಚ್‌, ಏಪ್ರಿಲ್‌ನಲ್ಲಿ ಬತ್ತಿ ಕಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿತ್ತು. ಈ ವರ್ಷ ಆ ಸಮಸ್ಯೆಯೇ ಆಗಿಲ್ಲ. ಕಾವೇರಿಯಲ್ಲಿ ನೀರಿನ ಮಟ್ಟ ಕೊಂಚ ಏರಿಕೆ ಕಂಡಿದೆ. ಕಾವೇರಿ ನದಿ ಬದಿಯ ಹೋಂಸ್ಟೇ, ರೆಸಾರ್ಟ್‌ಗಳು ಬಂದ್‌ ಆಗಿದ್ದರ ಪರಿಣಾಮ. ನೀರಿನ ಗುಣಮಟ್ಟವು ವೃದ್ಧಿಯಾಗಿದೆ. ನದಿಯ ಒಡಲು ಒಳಗಿನ ಕಲ್ಲುಗಳು ಗೋಚರಿಸುತ್ತಿವೆ.

ಅರಣ್ಯ ಪ್ರದೇಶದಲ್ಲೇ ಆಹಾರ:ಅರಣ್ಯದಲ್ಲಿ ಬಿಸಿಲಿಗೆ ಹಸಿರು ಒಣಗಿ ಕಾಡಾನೆಗಳು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿದ್ದವು. ಆದರೆ, ಈ ವರ್ಷ ಅದು ತಪ್ಪಿದೆ. ಮಳೆಯಿಂದ ಕಾಡಾನೆ ಸೇರಿದಂತೆ ಸಸ್ಯಹಾರಿ ಪ್ರಾಣಿಗಳಿಗೆ ಕಾಡಿನಲ್ಲಿ ಸಾಕಷ್ಟು ಆಹಾರ ಹಾಗೂ ನೀರು ಲಭಿಸುತ್ತಿದೆ. ಕಾಡಾನೆ ಹಾವಳಿ ಕೊಂಚಮಟ್ಟಿಗೆ ಕಡಿಮೆಯಿದೆ.

ಬೆಂಕಿ ಅವಘಡಗಳೂ ಕಡಿಮೆ
ಲಾಕ್‌ಡೌನ್‌ನಿಂದ ಜನರ ಓಡಾಟ ಕಡಿಮೆಯಿದೆ. ಮುಂಗಾರು ಪೂರ್ವ ಮಳೆಯಿಂದ ಕಾಳ್ಗಿಚ್ಚು ಪ್ರಕರಣಗಳೂ ಕಡಿಮೆಯಾಗಿವೆ. ಸೋಮವಾರಪೇಟೆ ತಾಲ್ಲೂಕಿನ ಯಡವನಾಡು ಮೀಸಲು ಅರಣ್ಯಕ್ಕೆ ಏಪ್ರಿಲ್‌ ಮೊದಲ ವಾರದಲ್ಲಿ ಬೆಂಕಿ ಬಿದ್ದ ಪ್ರಕರಣ ಹೊರತು ಪಡಿಸಿದರೆ, ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಬೆಂಕಿ ಅವಘಡಗಳು ಸಂಭವಿಸಿಲ್ಲ. ಅದು ನೆಮ್ಮದಿಯ ವಿಚಾರ.

ಕಾವೇರಿ ನದಿಯಲ್ಲಿ ತಿಳಿಯಾದ ನೀರು

*
ಪ್ರಕೃತಿ ನೋಡಿದರೆ ನಮಗೆ ಚೈತನ್ಯ ಬರಲಿದೆ. ಕೊಡಗಿನ ಮಳೆ, ಮಂಜು, ಹಸಿರು ನವೋಲ್ಲಾಸ ನೀಡಲಿದೆ. ಹೊಸ ಆಸೆಗಳು, ಕಸನುಗಳು ಚಿಗುರೊಡೆಯುತ್ತವೆ.
– ಸಂತೋಷ್‌, ಮಡಿಕೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.