
ಕುಶಾಲನಗರ: ಪಟ್ಟಣದಲ್ಲಿ ಮಂಗಳವಾರ ಅದ್ದೂರಿಯಾಗಿ ನಡೆದ ಹನುಮ ಜಯಂತಿಯಲ್ಲಿ ಅಪಾರ ಜನಸ್ತೋಮ ಭಾಗಿಯಾಯಿತು. ಜೈ ಜೈ ಹನುಮ, ಜೈ ಜೈ ಶ್ರೀರಾಮ ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ಎಲ್ಲೆಲ್ಲೂ ಸಂಭ್ರಮ, ಸಡಗರ ಮನೆ ಮಾಡಿತ್ತು.
ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಮಂಗಳವಾರ ರಾತ್ರಿ ಹನುಮ ಜಯಂತಿ ದಶ ಮಂಟಪಗಳ ಸಮಿತಿ ವತಿಯಿಂದ ಏರ್ಪಡಿಸಿದ್ದ ವಿವಿಧ ಉತ್ಸವಗಳ ಮಂಟಪಗಳ ಶೋಭಾಯಾತ್ರೆ ವಿಜೃಂಭಣೆಯಿಂದ ಸಾಗಿತು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್, ಶ್ರೀ ಆಂಜನೇಯ ಸೇವಾ ಸಮಿತಿ ವತಿಯಿಂದ ಸಂಜೆ ಶ್ರೀ ಆಂಜನೇಯ ವಿಗ್ರಹವನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಮಾಡಲಾಯಿತು. ಸಿಡಿಮದ್ದು, ಬಾಣ ಬಿರುಸುಗಳು ಶೋಭಾಯಾತ್ರೆಯ ರಂಗನ್ನು ಮತ್ತಷ್ಟು ಹೆಚ್ಚಿಸಿತು.
ದೇವಸ್ಥಾನದಿಂದ ಅಂಜನೇಯ ಉತ್ಸವ ಮಂಟಪದ ಮೆರವಣಿಗೆ ರಥಬೀದಿಯಲ್ಲಿ ಸಾಗಿ ಗಣಪತಿ ದೇವಸ್ಥಾನದ ಮುಂಭಾಗಕ್ಕೆ ಬಂದು ನಂತರ ಬೈಚನಹಳ್ಳಿ ಮಾರಿಯಮ್ಮ ದೇವಸ್ಥಾನದ ಮೂಲಕ ಮೂಲ ಸ್ಥಾನಕ್ಕೆ ತೆರಳಿತು.
ಶಾಸಕ ಡಾ.ಮಂತರ್‌ಗೌಡ ಅವರು ವಿವಿಧ ಗ್ರಾಮಗಳ ಉತ್ಸವ ಮಂಟಪಗಳಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಶ್ರೀರಾಮಾಂಜನೇಯ ಉತ್ಸವದೊಂದಿಗೆ ಪಟ್ಟಣದ ಎಚ್ಆರ್‌ಪಿ ಕಾಲೊನಿಯ ಅಂಜನಿಪುತ್ರ ಜಯಂತ್ಯುತ್ಸವ ಅಚರಣಾ ಟ್ರಸ್ಟ್ ವತಿಯಿಂದ ಹೊರಡುವ ಉತ್ಸವ ಮಂಟಪವು ರಾಮಮಂದಿರದಿಂದ ಹೊರಟು ಜಾಮಿಯ ಮಸೀದಿ ಜಂಕ್ಷನ್‌ನ ಮೂಲಕ ಗಣಪತಿ ದೇವಸ್ಥಾನದ ವೃತ್ತದಲ್ಲಿ ತಮ್ಮ ಮಂಟಪದ ವರ್ಣರಂಜಿತ ಪ್ರದರ್ಶನ ನೀಡಿ ಜನಮನ ರಂಜಿಸಿತು.
ಹಾರಂಗಿ ಗ್ರಾಮದ ವೀರ ಹನುಮ ಸೇವಾ ಸಮಿತಿ, ಗುಮ್ಮನಕೊಲ್ಲಿ ಗೋಪಾಲ್ ಸರ್ಕಲ್ ಕೇಸರಿ ಬಳಗ, ಮಾದಪಟ್ಟಣ ಶ್ರೀರಾಮದೂತ ಜಯಂತಿ ಆಚರಣಾ ಸಮಿತಿ, ಇಂದಿರಾ ಬಡಾವಣೆಯ ಟೀಂ ಮಹಾವೀರ ಹನುಮನ ಸೇವಾ ಸಮಿತಿ, ಕೂಡುಮಂಗಳೂರು, ಕೂಡಿಗೆ ಹನುಮ ಸೇನಾ ಸಮಿತಿ, ಗುಡ್ಡೆಹೊಸೂರು ವೀರಾಂಜನೇಯ ಸೇವಾ ಸಮಿತಿ ವತಿಯಿಂದಲೂ ವಿಜೃಂಭಣೆಯ ಶೋಭಾಯಾತ್ರೆ ನಡೆಯಿತು.
ಮೆರವಣಿಗೆಯುದ್ದಕ್ಕೂ ಕಾರ್ಯಕರ್ತರು ಕುಣಿತು ಕುಪ್ಪಳಿಸಿದರು. ಯುವತಿಯರು, ಮಹಿಳೆಯರು, ಮಕ್ಕಳು ಹಾಗೂ ಯುವಕರು ಕೇಸರಿ ಶಾಲು ಹಾಕಿಕೊಂಡು ಬಾವುಟ ಹಿಡಿದು ಹಾಡಿಗೆ ತಕ್ಕಂತೆ ಕುಣಿದು ಸಂಭ್ರಮಿಸಿದರು.
ಮೆರವಣಿಗೆ ವೇಳೆ ಬಾಣಬಿರುಸುಗಳ ಪ್ರದರ್ಶನ ಕಣ್ಮನ ಸೆಳೆಯಿತು. ಶೋಭಾಯಾತ್ರೆಯ ವೀಕ್ಷಣೆಗೆ ಪಟ್ಟಣ ಸೇರಿದಂತೆ ಇತರೆಡೆಗಳಿಂದ ಜನಸಾಗರವೇ ಹರಿದು ಬಂದಿತು.
ಹನುಮ ಜಯಂತಿ ದಶಮಂಟಪಗಳ ಆಚರಣಾ ಸಮಿತಿ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಉಪಾಧ್ಯಕ್ಷರಾದ ಎಚ್.ಟಿ.ವಸಂತ, ಟಿ.ವಿ.ಕಿಶೋರ್, ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ಪಿ.ಆರ್.ರಾಮನಾಥನ್, ಖಜಾಂಚಿ ಡಿ.ವಿ.ಗಿರೀಶ್, ಸಹ ಕಾರ್ಯದರ್ಶಿ ಸಿ.ಎನ್.ಸುನೀಲ್, ರಾಮಾಂಜನೇಯ ಉತ್ಸವ ಸಮಿತಿ ಅಧ್ಯಕ್ಷ ರಾಜೀವ, ಉಪಾಧ್ಯಕ್ಷರಾದ ನವನೀತ್ ಪೊನ್ನೇಟಿ, ಟಿ.ವಿನು, ಕಾರ್ಯದರ್ಶಿ ಕೆ.ವಿ.ಅನುದೀಪ್, ಸಮಿತಿ ಸಂಚಾಲಕರಾದ ಪ್ರವೀಣ್ ಓಂಕಾರ್, ಎಲ್.ಹರೀಶ್, ಖಜಾಂಚಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಶರತ್, ಸಂಚಾಲಕ ಎಲ್.ಹರೀಶ್, ಮುಖಂಡರಾದ ರಾಜೀವ್, ಪುಂಡಾರೀಕಾಕ್ಷ, ಕೆ.ಎನ್.ದೇವರಾಜು, ಪ್ರವೀಣ್, ಶ್ರೀಕಾಂತ್, ಶಶಿಕುಮಾರ್, ಮಂಜುನಾಥ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಪಾಲ್ಗೊಂಡಿದ್ದರು. ಡಿವೈಎಸ್ಪಿ ಪಿ.ಚಂದ್ರಶೇಖರ್, ಸಿಪಿಐ ಬಿ.ಎಸ್.ದಿನೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.