ADVERTISEMENT

ಸಿದ್ದಾಪುರ: ಮತ್ತೊಂದು ಪ್ರವಾಹ ಭೀತಿಯಲ್ಲಿ ಸಂತ್ರಸ್ತರು!

4 ವರ್ಷವಾದರೂ ಸಂತ್ರಸ್ತರಿಗೆ ಸಿಗದ ನಿವೇಶನ; ಆಮೆಗತಿಯಲ್ಲಿ ಕಾಮಗಾರಿ

ರೆಜಿತ್‌ಕುಮಾರ್ ಗುಹ್ಯ
Published 17 ಜೂನ್ 2023, 0:15 IST
Last Updated 17 ಜೂನ್ 2023, 0:15 IST
ನಿವೇಶನಕ್ಕಾಗಿ ಗುರುತಿಸಲಾದ ಜಾಗ
ನಿವೇಶನಕ್ಕಾಗಿ ಗುರುತಿಸಲಾದ ಜಾಗ   

ಕೊಡಗಿನಲ್ಲಿ ಮತ್ತೊಂದು ಮುಂಗಾರು ಕಾಲಿರಿಸುವ ಗಳಿಗೆ ಹತ್ತಿರವಾಗುತ್ತಿದೆ. ಪ್ರತಿ ಮುಂಗಾರಿನ ಸಮಯದಲ್ಲಿ ಜಿಲ್ಲೆಯ ಹಲವೆಡೆ ಆತಂಕ ಎದುರಾಗುತ್ತದೆ. ಅನೇಕ ಮಂದಿ ಇನ್ನೂ ಅಪಾಯಕಾರಿ ಸ್ಥಳದಲ್ಲೇ ಜೀವಿಸುತ್ತಿದ್ದು, ಮುಂಗಾರು ಎಂದರೆ ಸಂಭ್ರಮಿಸುವ ಬದಲಿಗೆ ಇವರು ಭೀತಿಯ ಕ್ಷಣಗಳನ್ನು ಎಣಿಸುವಂತಾಗಿದೆ. ಕಳೆದ ವರ್ಷ ಅಪಾಯ ಉಂಟಾಗಿದ್ದ ಸ್ಥಳಗಳ ರಿಯಾಲಿಟಿ ಚೆಕ್‌ ಈ ಸರಣಿಯಲ್ಲಿದೆ.

ಸಿದ್ದಾಪುರ: ಇಲ್ಲಿನ ಕಾವೇರಿ ನದಿ ಪ್ರವಾಹದಲ್ಲಿ ಸೂರು ಕಳೆದುಕೊಂಡ ಸಂತ್ರಸ್ತರು ಈಗಲೂ ಆತಂಕದಲ್ಲೇ ದಿನದೂಡುತ್ತಿದ್ದಾರೆ.

2019ರ ಪ್ರವಾಹದಲ್ಲಿ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿಯ ಬರಡಿ, ಕುಂಬಾರಗುಂಡಿ ಹಾಗೂ ಬೆಟ್ಟದಕಾಡುವಿನ ಸುಮಾರು 100ಕ್ಕೂ ಅಧಿಕ ಮನೆ ನೆಲಸಮವಾಗಿತ್ತು. ಮನೆ ಕಳೆದುಕೊಂಡ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು, ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸುವ ಭರವಸೆ ನೀಡಿತ್ತು. ಇವರಿಗಾಗಿ ಜಾಗ ಗುರುತಿಸಿದ್ದರೂ, ನಿವೇಶನ ಹಂಚಿಕೆಯಾಗದೇ ಸಂತ್ರಸ್ತರು ನದಿ ದಡದ ಗುಡಿಸಲಿನಲ್ಲೇ ಕಾಲ ಕಳೆಯುವಂತಾಗಿದೆ.

ADVERTISEMENT

ಪ್ರತಿ ಮಳೆಗಾಲಕ್ಕೂ ಮುಂಚೆ ಕಂದಾಯ ಇಲಾಖೆ ನದಿದಡದ ನಿವಾಸಿಗಳಿಗೆ ಸುರಕ್ಷಿತ ಜಾಗಕ್ಕೆ ತೆರಳುವಂತೆ ನೋಟಿಸ್ ಜಾರಿ ಮಾಡುತ್ತದೆ. ಪ್ರಸಕ್ತ ವರ್ಷವೂ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಸಂತ್ರಸ್ತರು ಮಳೆಗಾಲದಲ್ಲಿ ಎಲ್ಲಿಗೆ ತೆರಳಬೇಕೆಂಬ ಚಿಂತೆಯಲ್ಲಿ ಇದ್ದಾರೆ.

ಪ್ರವಾಹದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಈಗಲೂ ನದಿಯ ದಡದಲ್ಲೇ ಗುಡಿಸಲು ನಿರ್ಮಿಸಿ ದಿನದೂಡುತ್ತಿದ್ದಾರೆ. ಗಾಳಿ-ಮಳೆಯಲ್ಲಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲೂ ಪ್ರವಾಹದ ಸಂದರ್ಭ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದು, ಪ್ರವಾಹ ಕಡಿಮೆಯಾದ ಬಳಿಕ ಮತ್ತೆ ಗುಡಿಸಲು ಸೇರುವ ಸ್ಥಿತಿ ಇವರದ್ದು. ಇದೀಗ ಮತ್ತೆ ಮುಂಗಾರು ಆರಂಭವಾಗುತ್ತಿದ್ದು, ಇವರಿಗೆ ಆತಂಕ ಎದುರಾಗಿದೆ.

2019ರಲ್ಲಿ ಅಭ್ಯತ್ ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ 8 ಎಕರೆ ಜಾಗವನ್ನು ಜಿಲ್ಲಾಡಳಿತ ತೆರವುಗೊಳಿಸಿ ಸಂತ್ರಸ್ತರ ನಿವೇಶನಕ್ಕೆ ಮೀಸಲಿಟ್ಟಿತ್ತು. ಆದರೆ, ನಾಲ್ಕು ವರ್ಷಗಳಾದರೂ ನಿವೇಶನ ಹಂಚಿಕೆಯಾಗಿಲ್ಲ.

ಸಂತ್ರಸ್ತರಿಗೆ ನೀಡಲು ಜಾಗ ಗುರುತಿಸಿ ಒತ್ತುವರಿ ತೆರವುಗೊಳಿಸಿದರೂ, ಮರಗಳು ಇದ್ದ ಕಾರಣ ಅರಣ್ಯ ಇಲಾಖೆ ಮರಗಳ ಎಣಿಕೆ ನಡೆಸಿ, ತೆರವಿಗೆ ಅನುಮತಿ ನೀಡಿತ್ತು. ತೆರವು ಕಾರ್ಯಕ್ಕೆ ಒಂದು ವರ್ಷಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಲಾಯಿತು. ನಕ್ಷೆ ತಯಾರಿಸುವುದು, ಗಡಿ ಗುರುತಿಸುವುದು ಸೇರಿದಂತೆ ವಿವಿಧ ಕೆಲಸಗಳು ಮಂದಗತಿಯಲ್ಲಿ ಸಾಗಿತು. ಜಾಗಕ್ಕೆ ತೆರಳುವಲ್ಲಿ ತೋಡು ಇದ್ದು, ಸೇತುವೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. 2022ರಲ್ಲಿ ಸೇತುವೆ ನಿರ್ಮಾಣಕ್ಕೆ ಟೆಂಡರ್ ಅನುಮೋದನೆಗೊಂಡಿದ್ದು, ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಪ್ರಸ್ತುತ ಸೇತುವೆ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.

ಅಭ್ಯತ್ ಮಂಗಲ ಗ್ರಾಮದಲ್ಲಿ ಸಂತ್ರಸ್ತರಿಗೆ ನೀಡಲು ಗುರುತಿಸಿರುವ ಜಾಗ ಇನ್ನೂ ಸಮತಟ್ಟು ಕಾರ್ಯ ಆರಂಭವಾಗಿಲ್ಲ. ಸಂತ್ರಸ್ತರಿಗೆ ನೀಡುವ ಜಾಗವನ್ನು ವಿಂಗಡಿಸಬೇಕಾಗಿದ್ದು, ರಸ್ತೆಯನ್ನು ಗುರುತಿಸಿ ಜಾಗ ಬಿಡಬೇಕಿದೆ. ಉಪವಿಭಾಗಾಧಿಕಾರಿ ನೇತೃತ್ವದಲ್ಲಿ 2019ರಲ್ಲೇ ಸಂತ್ರಸ್ತರಿಗೆ ಟೋಕನ್ ಮೂಲಕ ನಿವೇಶನ ಹಂಚಿಕೆ ಮಾಡಲಾಗಿದ್ದರೂ, ಈವರೆಗೂ ಹಂಚಿಕೆ ಪ್ರಕ್ರಿಯೆ ಆಗಿಲ್ಲ.

ನಿವೇಶನಕ್ಕಾಗಿ ಗುರುತಿಸಲಾದ ಜಾಗಕ್ಕೆ ಕಲ್ಪಿಸಿರುವ ಸೇತುವೆ
ಕಳೆದ 4 ವರ್ಷಗಳಿಂದ ನಿರಂತರವಾಗಿ ನಿವೇಶನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಜಾಗ ಗುರುತಿಸಿದ್ದರೂ ವಿವಿಧ ಕಾಮಗಾರಿಗಳು ವಿಳಂಬವಾಗುತ್ತಿದೆ. ಕೂಡಲೇ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು.
-ಪಿ.ಆರ್.ಭರತ್ ಸಂಚಾಲಕರು ನಿರಾಶ್ರಿತರ ಹೋರಾಟ ಸಮಿತಿ.
ಈಗಾಗಲೇ 8 ಎಕರೆ ಜಾಗವನ್ನು ಕಾರ್ಯನಿರ್ವಹಣಾಧಿಕಾರಿಗಳ ಹೆಸರಿಗೆ ವರ್ಗಾಯಿಸಲಾಗಿದೆ. ಜಾಗಕ್ಕೆ ತೆರಳಲು ಕಿರು ಸೇತುವೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಶೀಘ್ರ ಜಾಗ ವಿಂಗಡಿಸಿ ಸಂತ್ರಸ್ತರಿಗೆ ಹಸ್ತಾಂತರಿಸಲಾಗುವುದು.
-ಪ್ರಕಾಶ್ ತಹಶೀಲ್ದಾರರು ಕುಶಾಲನಗರ ತಾಲ್ಲೂಕು.
4 ವರ್ಷದಿಂದ ನದಿ ದಡದಲ್ಲೇ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದೇವೆ. ಮಳೆಗಾಲದಲ್ಲಿ ತೀವ್ರ ತೊಂದರೆ ಎದುರಾಗುತ್ತದೆ. ನದಿ ನೀರು ಹೆಚ್ಚಾಗುವ ಸಂದರ್ಭ ಮತ್ತೆ ಪರಿಹಾರ ಕೇಂದ್ರಕ್ಕೆ ಹೋಗುತ್ತೇವೆ. ಶಾಶ್ವತ ನಿವೇಶನ ಸಿಗುವ ಭರವಸೆಯಲ್ಲಿದ್ದೇವೆ.
-ಜಾರ್ಜ್, ನಿರಾಶ್ರಿತರು ಬೆಟ್ಟದಕಾಡು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.