ಸೋಮವಾರಪೇಟೆ: ತಾಲ್ಲೂಕಿನಲ್ಲಿ ಬಿಡುವು ನೀಡದ ಮುಂಗಾರು ಮಳೆಯಿಂದ ಜನಜೀವನ ಹೈರಾಣಾಗಿದೆ. ಇದೀಗ ಗುಡ್ಡ ಕುಸಿಯುವಿಕೆಯೂ ಆರಂಭವಾಗಿರುವುದು ಈ ಭಾಗದ ಜನರ ಎದೆಬಡಿತ ಹೆಚ್ಚಿಸಿದೆ. ಜೊತೆಗೆ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದೆ.
ಶಾಂತಳ್ಳಿ ಸಮೀಪ ಜೇಡಿಗುಂಡಿ ಬಳಿಯಲ್ಲಿ ಗುರುವಾರ ಗುಡ್ಡ ಕುಸಿದಿದ್ದ ಸ್ಥಳದಲ್ಲೇ ಮತ್ತೆ ಶುಕ್ರವಾರ ಕುಸಿತ ಆರಂಭವಾಗಿದೆ. ಎರಡು ಜೆಸಿಬಿ ಮತ್ತು ಟಿಪ್ಪರ್‌ಗಳನ್ನು ಬಳಸಿಕೊಂಡು ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡಲಾಗುತ್ತಿದ್ದರೂ, ಮಣ್ಣು ಜಾರುತ್ತಲೇ ಇದೆ ಎಂದು ಶಾಂತಳ್ಳಿಯ ಕೆ.ಎಂ.ಲೋಕೇಶ್ ತಿಳಿಸಿದರು. ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಅಲ್ಲಲ್ಲಿ ಜಲ ಉಕ್ಕುತಿದೆ. ಜಲದ ನೀರಿನೊಂದಿಗೆ ಮಣ್ಣು ಕುಸಿಯುತ್ತಿದೆ ಎಂದು ಅವರು ಹೇಳಿದರು.
ಭಾರಿ ಗಾಳಿ ಮಳೆಯಿಂದಾಗಿ ಮಾದಾಪುರದಿಂದ ಕಿರಗಂದೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹರಿಯುವ ಮಾದಾಪುರು ಹೊಳೆ ತುಂಬಿ ಹರಿಯುತ್ತಿರುವುದರಿಂದ, ವಾಹನ ಸಂಚಾರವನ್ನು ಇಲ್ಲಿ ನಿಷೇಧಿಸಲಾಗಿದೆ. ಪಟ್ಟಣಕ್ಕೆ ಸಮೀಪದ ಆಲೆಕಟ್ಟೆ ರಸ್ತೆಯ ಕಾವೇರಿ ಬಡಾವಣೆಯಲ್ಲಿ ಕಕ್ಕೆಹೊಳೆಯ ನೀರು ತುಂಬಿ ಹರಿದು ಎನ್.ಎಸ್ ಕೃಷ್ಣ ಅವರ ವಾಸದ ಮನೆಗೆ ನುಗ್ಗಿ ಹಾನಿಯಾಗಿದೆ.ಮತ್ತೊಂದು ದೇವಸ್ಥಾನದ ಸುತ್ತ ನೀರು ಸಂಗ್ರಹವಾಗಿದೆ.
ಶನಿವಾರಸಂತೆ ಮುಖ್ಯ ರಸ್ತೆಯಲ್ಲಿ ಬಿಲಾಳ ಅವರ ವಾಸದ ಮನೆ ಗಾಳಿ ಮಳೆಗೆ ಕುಸಿದಿದೆ. ಶನಿವಾರಸಂತೆಯಿಂದ ಕುಶಾಲನಗರಕ್ಕೆ ತೆರಳುವ ಮಾರ್ಗದ ಮಾಲಂಬಿ ಗ್ರಾಮದ ಬಳಿ ಬೃಹತ್ ಮರವೊಂದು ಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಸ್ಥಳಕ್ಕೆ ಆಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ತೆರಳಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನವು ಮಾಡಿಕೊಟ್ಟರು .ತಾಲ್ಲೂಕಿನ ಮೂದರವಳ್ಳಿ ಗ್ರಾಮದ ಸಮುದಾಯ ಭವನದ ಚಾವಣಿ ಗಾಳಿ ಮಳೆಗೆ ಹಾರಿ ಬಿದಿದ್ದು, ನಷ್ಟವಾಗಿದೆ. ಶ್ರೀ ವೆಂಕಟೇಶ್ವರ ಯುವ ಸಂಘದ ಗೋಡೆ ಕುಸಿದು ಹಾನಿಯಾಗಿದೆ.
ಪಟ್ಟಣಕ್ಕೆ ನೀರಿನ ಸಮಸ್ಯೆ: ತೀವ್ರ ಸ್ವರೂಪದ ಗಾಳಿಗೆ ಮರಗಳು ಸಾಲು ಸಾಲಾಗಿ ವಿದ್ಯುತ್ ಮಾರ್ಗದ ಮೇಲೆ ಬೀಳುತ್ತಿವೆ. ಪಟ್ಟಣಕ್ಕೆ ಸಂಪರ್ಕ ನೀಡುವ 33 ಕೆ.ವಿ ಮಾರ್ಗದ ಮೇಲೆ ನಿರಂತರವಾಗಿ ಮರ ಬೀಳುತ್ತಿದೆ. ಒಂದು ಭಾಗದಲ್ಲಿ ಸರಿಪಡಿಸಿದಂತೆ ಮತ್ತೊಂದೆಡೆ ಮರಗಳು ಬೀಳುತ್ತಿರುವುದರಿಂದ ಕೆಲವೆಡೆ ವಾರದಿಂದಲೂ ವಿದ್ಯುತ್ ಸಮಸ್ಯೆಯಾಗಿದೆ.
ಇದರಿಂದಾಗಿ ಪಟ್ಟಣದಲ್ಲಿ ಒಂದು ವಾರದಿಂದ ಜನರು ಕುಡಿಯಲು ನೀರಿಲ್ಲದೆ, ಪರದಾಡುತ್ತಿದ್ದಾರೆ. ಪಟ್ಟಣಕ್ಕೆ ದುದ್ ಗಲ್ ಮತ್ತು ಹಾರಂಗಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ಎರಡೂ ಕಡೆಯಲ್ಲಿ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಪಟ್ಟಣದ ಜನರು ಇತರೆ ಚಟುವಟಿಕೆಗಳಿಗೆ ಮಳೆಯ ನೀರನ್ನೇ ಆಶ್ರಯಿಸಬೇಕಾಗಿದೆ. ಆದರೆ, ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ.
‘ತಾಲ್ಲೂಕಿನಾದ್ಯಂತ ಮಳೆಗಾಳಿಗೆ ಹೆಚ್ಚಿನ ಹಾನಿಯಾಗುತ್ತಿದ್ದು, ಸಿಬ್ಬಂದಿಗಳ ಕೊರತೆಯಿಂದ ಮಾರ್ಗ ಸರಿಪಡಿಸಲು ಆಗುತ್ತಿಲ್ಲ. ಕಿರಗಂದೂರು ಗ್ರಾಮದಲ್ಲಿ 24 ಕಂಬಗಳನ್ನು ಸರಿಪಡಿಸಲಾಗಿತ್ತು. ಒಂದೇ ದಿನದಲ್ಲಿ ಮತ್ತೆ 9 ವಿದ್ಯುತ್ ಕಂಬಗಳು ಧರೆಗುರುಳಿವೆ. ಇರುವ ಕೆಲಸಗಾರರನ್ನು ಬಳಸಿಕೊಂಡು ಕೆಲಸ ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿ ಸಮಸ್ಯೆ ಹೆಚ್ಚಾಗಿರುವುದನ್ನು ಮನಗಂಡ ಮೇಲಧಿಕಾರಿಗಳು ಮತ್ತೊಂದು ತಂಡವನ್ನು ಕಳಿಸಿಕೊಡುತ್ತಿದೆ. ಮತ್ತೆ ದಿನಗೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ಸೆಸ್ಕ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ರವಿ ತಿಳಿಸಿದರು.
Highlights - ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ ಮರಗಳು ದುರಸ್ತಿ ಕಾರ್ಯದಲ್ಲಿ ನಿರತರಾಗಿರುವ ಸೆಸ್ಕ್ ಸಿಬ್ಬಂದಿ ದಿನದಿಂದ ದಿನಕ್ಕೆ ಮಳೆ, ಗಾಳಿ ಹೆಚ್ಚಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.