
ಸೋಮವಾರಪೇಟೆ: ಸಮೀಪದ ಐಗೂರು ಗ್ರಾಮದ ಚೋರನ ಹೊಳೆಗೆ ಅಡ್ಡಲಾಗಿ 1837ರಲ್ಲಿ ಆಡಳಿತ ನಡೆಸುತ್ತಿದ್ದ ಬ್ರಿಟಿಷ್ ಅಧಿಕಾರಿ ಲಾರ್ಡ್ ಲೂಯಿಸ್ ಕಾಲದಲ್ಲಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಇನ್ನು ನೆನಪು ಮಾತ್ರ.
ತಾಲ್ಲೂಕಿನ ಮಡಿಕೇರಿ-ಕೊಡ್ಲಿಪೇಟೆ ರಾಜ್ಯ ಹೆದ್ದಾರಿಯಲ್ಲಿ ಬರುವ ಈ ಸೇತುವೆಯ ರಸ್ತೆಯಲ್ಲಿ ಸಾಕಷ್ಟು ಬೃಹತ್ ವಾಹನಗಳೂ ಸೇರಿದಂತೆ ಶಾಲಾ ಬಸ್ ಮತ್ತು ಸಾರಿಗೆ ಬಸ್‌ಗಳು ಸಂಚರಿಸುತ್ತಿರುವ ಪ್ರಮುಖ ರಸ್ತೆಯಾಗಿದ್ದು, ಅಪಾಯದ ಸ್ಥಿತಿಯಲ್ಲಿತ್ತು. ಇಲ್ಲಿ ನೂತನ ಸೇತುವೆ ₹10 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹಳೆಯ ಸೇತುವೆಯನ್ನು ಕೆಡವಿ ನೂತನ ಸೇತುವೆಯನ್ನು ನಿರ್ಮಾಣ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದ ಹಿಂದೆ ಲೋಕೋಪಯೋಗಿ ಸಚಿವರು ಭೂಮಿ ಪೂಜೆ ನೆರವೇರಿಸಿದ್ದರು. ಒಂದು ವರ್ಷದ ನಂತರ ಸೇತುವೆಯನ್ನು ತೆರವು ಮಾಡುವ ಕಾರ್ಯ ಪ್ರಾರಂಭವಾಗಿದೆ.
ಸೇತುವ ತೀರಾ ಕಿರಿದಾಗಿದ್ದು, ಕೇವಲ ಒಂದು ವಾಹನ ಸಂಚಾರಕ್ಕೆ ಮಾತ್ರವೇ ಅವಕಾಶ ಇತ್ತು. ಎದುರಿನಿಂದ ಬರುವ ವಾಹನಗಳು ಅಲ್ಲಿಯೇ ನಿಂತು ಕಾಯುವಂತಹ ಪರಿಸ್ಥಿತಿ ಇತ್ತು. ಕಳೆದ ಕೆಲವು ವರ್ಷಗಳ ಹಿಂದೆ ಎಂಜಿನಿಯರ್‌ರೊಬ್ಬರು ಸೇತುವೆಯ ವಸ್ತುಸ್ಥಿತಿಗತಿ ಪರಿಶೀಲಿಸಿ, ದುಸ್ಥಿತಿಯಲ್ಲಿರುವ ಸೇತುವೆಯ ಮೇಲೆ ಬೃಹತ್ ವಾಹನಗಳು ಸಂಚರಿಸಿದರೆ, ಯಾವಾಗ ಬೇಕಾದರೂ ಅಪಾಯ ಎದುರಾಗಬಹುದು ಎಂದು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಸೇತುವೆ ಶಿಥಿಲಗೊಂಡ ನಂತರ ಸೇತುವೆ ಮುಂಭಾಗದಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧಿಸಿದ್ದರೂ, ಸುಮಾರು 40 ಟನ್ ತೂಕದ ಟಿಂಬರ್ ತುಂಬಿದ ಲಾರಿಗಳು ಸಂಚರಿಸುತ್ತಿದ್ದವು.
ಸೇತುವೆಯ ಕೆಳಭಾಗ ಶಿಥಿಲಾವಸ್ಥೆಗೆ ತಲುಪಿ ಹಲವು ವರ್ಷಗಳೇ ಕಳೆದಿದ್ದವು. ಘನ ವಾಹನಗಳು, ಬಸ್‌ಗಳು ಚಲಿಸುವಾಗ ದೊಡ್ಡ ಮಟ್ಟದಲ್ಲಿ ಅಲುಗಾಡುತ್ತಿತ್ತು. ಸೇತುವೆಯ ಅಡಿಭಾಗ ಶಿಥಿಲಗೊಂಡಿತ್ತು. ತಾತ್ಕಾಲಿಕವಾಗಿ ಕಬ್ಬಿಣಕ್ಕೆ ಅಲ್ಲಲ್ಲಿ ವೆಲ್ಡ್ ಮಾಡಿ, ಬಣ್ಣ ಬಳಿಯಲಾಗಿತ್ತು.
ಸೇತುವೆ ಮೇಲೆ ಸಿಮೆಂಟ್ ಪ್ಲಾಸ್ಟಿಂಗ್ ಮಾಡಿ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತು. ಆದರೆ, ಮತ್ತೆ ಅದು ಬಿರುಕು ಬಿಡುತ್ತಿತ್ತು. ಸೇತುವೆ ಕಾಮಗಾರಿ ಪ್ರಾರಂಭಿಸಿರುವುದು ಒಳ್ಳೆಯ ಕೆಲಸ ಎಂದು ಐಗೂರಿನ ನವೀನ್ ತಿಳಿಸಿದರು.
ಅಭಿವೃದ್ಧಿಯನ್ನೇ ಕಾಣದ ಕುಶಾಲನಗರ–ಕೊಪ್ಪ ಪಾರಂಪರಿಕ ಸೇತುವೆ: ಮತ್ತೊಂದೆಡೆ ಕುಶಾಲನಗರ– ಕೊಪ್ಪ ಮಧ್ಯೆ ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ನೂರಾರು ವರ್ಷ ಹಳೆಯ ಸೇತುವೆಯನ್ನು ಉಳಿಸಿಕೊಂಡು ಹೊಸ ಸೇತುವೆ ನಿರ್ಮಿಸಲಾಗಿದೆ. ಆದರೆ, ಹಳೆಯ ಸೇತುವೆ ಯಾವುದೇ ಅಭಿವೃದ್ಧಿ ಕಂಡಿಲ್ಲ. ಅಭಿವೃದ್ಧಿಯ ಮಾತಿರಲಿ ಕನಿಷ್ಠ ಪಕ್ಷ ನಿರ್ವಹಣೆಯನ್ನೂ ಸರಿಯಾಗಿ ಮಾಡುತ್ತಿಲ್ಲ.
‘ಫ್ರೇಸರ್‌ಪೇಟೆ ಬ್ರಿಡ್ಜ್’ ಎಂದು ಕರೆಯಲಾಗುವ ಈ ಸೇತುವೆಯನ್ನು 1846ರಲ್ಲಿಯೇ ಬ್ರಿಟಿಷರು ನಿರ್ಮಿಸಿದ್ದರು. ಅದ್ಭುತ ರಚನಾ ತಂತ್ರಜ್ಞಾನದಿಂದ ನಿರ್ಮಾಣವಾಗಿರುವ ಈ ಸೇತುವೆ ಸದ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಹಿಂದೆ ಮಂಗಳೂರು ಭಾಗಕ್ಕೆ ಮೈಸೂರು ಭಾಗದಿಂದ ಸಂಪರ್ಕ ಕಲ್ಪಿಸುವ ಮಹತ್ವದ ಸೇತುವೆ ಇದಾಗಿತ್ತು. ಇದರ ಇತಿಹಾಸ ಮುಂದಿನ ಪೀಳಿಗೆಗೆ ಗೊತ್ತಾಗಬೇಕು. ಮಾತ್ರವಲ್ಲ ಈ ಐತಿಹಾಸಿಕ ಸೇತುವೆಯನ್ನೂ ಸಂರಕ್ಷಿಸಬೇಕಿದೆ.
ಈ ಕುರಿತು ‘ಪ್ರಜಾವಾಣಿ’ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕ್ಯುರೇಟರ್ ರೇಖಾ ಅವರನ್ನು ಸಂಪರ್ಕಿಸಿದಾಗ ಅವರು, ‘ಈ ಸೇತುವೆಯನ್ನು ಈಗಾಗಲೇ 2022–23ರ ಗ್ರಾಮವಾರು ಸರ್ವೇ ಕಾರ್ಯದಲ್ಲಿ ಪಾರಂಪರಿಕ ನಿರ್ಮಿತಿ ಎಂದು ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದು ಹೇಳಿದರು.
ಹೀಗೆ, ಅನೇಕ ಪಾರಂಪರಿಕ ಸೇತುವೆಗಳು ಜಿಲ್ಲೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅವುಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ದಿಪಡಿಸಿ, ಇತಿಹಾಸ ಉಳಿಸುವ ಎಲ್ಲ ಅವಕಾಶಗಳಿದ್ದರೂ, ಸರ್ಕಾರಗಳ ದಿವ್ಯನಿರ್ಲಕ್ಷ್ಯದಿಂದ ಮೂಲೆಗುಂಪಾಗಿವೆ.
ವೆಚ್ಚ ಹೆಚ್ಚಾದರೂ ಪಾರಂಪರಿಕ ರಚನೆಗಳನ್ನು ಉಳಿಸಿಕೊಳ್ಳಲು ಒತ್ತಾಯ ನೂರಾರು ವರ್ಷ ಹಳೆಯ ರಚನೆಗಳ ಧ್ವಂಸ ಬೇಡ ಹಳೆಯದನ್ನು ಉಳಿಸಿ, ಹೊಸದನ್ನು ನಿರ್ಮಿಸಲು ಆಗ್ರಹ
ಸೇತುವೆ ಉಳಿಸಿಕೊಳ್ಳಬೇಕಿತ್ತು
ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಸ್ಥಿತಿಯಲ್ಲಿದ್ದ ಕಬ್ಬಿಣದ ಸೇತುವೆ ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣ ಮಾಡುತ್ತಿರುವುದು ಒಳ್ಳೆಯ ಕೆಲಸ. ಆದರೆ ನೂರಾರು ವರ್ಷ ಜನರಿಗೆ ಸೇವೆ ನೀಡಿದ್ದ ಕಬ್ಬಿಣದಿಂದ ನಿರ್ಮಾಣ ಮಾಡಿದ ಸೇತುವೆಯನ್ನು ಉಳಿಸಿಕೊಂಡು ಹೊಸ ಸೇತುವೆ ನಿರ್ಮಿಸಬೇಕಿತ್ತು.
-ಕಲ್ಕಂದೂರು ರವೀಶ್ ಆಟೋ ಚಾಲಕರು.
ಅಪಾಯ ತಪ್ಪಿಸಿದಂತಾಗಿದೆ ಐಗೂರಿನ ಕಬ್ಬಿಣ ಸೇತುವೆ ತೀರ ದುಸ್ಥಿತಿಯಲ್ಲಿತ್ತು. ಅದನ್ನು ತೆರವುಗೊಳಿಸಿ ನೂತನ ಸೇತುವೆ ನಿರ್ಮಾಣ ಮಾಡುವ ಮೂಲಕ. ಮುಂದೊಂದು ದಿನ ಎದುರಾಗಬಹುದಾಗಿದ್ದ ಅಪಾಯವನ್ನು ತಪ್ಪಿಸಿದಂತಾಗಿದೆ. ಮಾಡುತ್ತಿರುವ ಸೇತುವೆ ಕಾಮಗಾರಿ ನೂರಾರು ವರ್ಷ ಜನರ ಸೇವೆಗೆ ಸಿಗುವಂತಾಗಬೇಕು.
- ಎಸ್.ಎಂ. ಡಿಸಿಲ್ವ ಪ್ರಗತಿಪರ ಕೃಷಿಕರು ಅಬ್ಬೂರುಕಟ್ಟೆ ಗ್ರಾಮ
ಹಳೆಯ ಸೇತುವೆ ಉಳಿಸಿ ಹೊಸ ಸೇತುವೆ ಕಟ್ಟಬೇಕಿತ್ತು ಸ್ಥಳೀಯರು ಸೇರಿದಂತೆ ಸಾಕಷ್ಟು ಜನರ ಹಲವಾರು ವರ್ಷಗಳ ಬೇಡಿಕೆ ನೂತನ ಸೇತುವೆ ನಿರ್ಮಾಣ ಮಾಡಬೇಕೆನ್ನುವುದು. ಕಬ್ಬಿಣ ಸೇತುವೆ ಈಗಾಗಲೇ ಹಳೆಯದಾಗಿತ್ತು. ಆದರೂ ಗಟ್ಟಿಮುಟ್ಟಾಗಿತ್ತು. ಅದರ ಕಾಮಗಾರಿಯನ್ನು ನೂರಾರು ವರ್ಷಗಳ ಹಿಂದೆಯೇ ಗಟ್ಟಿಮುಟ್ಟಾಗಿ ನಿರ್ಮಿಸಿದ್ದರು. ಅದು ಇಂದಿನ ಎಂಜಿನಿಯರ್‌ಗಳಿಗೂ ಅಭ್ಯಾಸ ಮಾಡಲಾದರೂ ಅದನ್ನು ಉಳಿಸಿಕೊಂಡು ಪಕ್ಕದಲ್ಲಿ ನೂತನ ಸೇತುವೆ ನಿರ್ಮಿಸಬೇಕಿತ್ತು.
-ಲೋಕೇಶ್ ಗರ್ವಾಲೆ ಗ್ರಾಮ
ಶತಮಾನ ಕಂಡ ಸೇತುವೆ
ಶತಮಾನ ಕಂಡ ಸೇತುವೆಯನ್ನು ಉಳಿಸಿಕೊಂಡು ನೂತನ ಸೇತುವೆ ನಿರ್ಮಾಣ ಮಾಡಬೇಕಿತ್ತು. ಅದಕ್ಕೆ ಬಳಸಿರುವ ಕಬ್ಬಿಣ ಇನ್ನೂ ಗಟ್ಟಿಯಾಗಿದ್ದು ಕಾರ್ಮಿಕರು ಅದನ್ನು ತೆರವುಗೊಳಿಸಲು ಪರದಾಡುತ್ತಿದ್ದಾರೆ. 2018ರ ಮಹಾಮಳೆಗೂ ಜಗ್ಗದೆ ಸೇವೆ ನೀಡಿದ್ದು ಇತಿಹಾಸ. ಹಿಂದೆ ಸುಸ್ಸಜ್ಜಿತ ಸೇತುವೆ ಕಾಮಗಾರಿ ಮಾಡಿರುವುದನ್ನು ನಮ್ಮ ಮಕ್ಕಳಿಗೆ ತೋರಿಸಲು ಮತ್ತು ಅಂದಿನ ತಾಂತ್ರಿಕ ನೈಪುಣ್ಯತೆಯನ್ನು ತಿಳಿಯಲು ಮಕ್ಕಳಿಗೆ ಅವಕಾಶ ಇಲ್ಲದಂತಾಯಿತು ಎಂದು ಸಮಾಜ ಸೇವಕ ಐಗೂರಿನ ಕೆ.ಪಿ. ದಿನೇಶ್ ಬೇಸರ ವ್ಯಕ್ತಪಡಿಸಿದರು.
-
ಕೆ.ಪಿ. ದಿನೇಶ್ ಸಮಾಜಸೇವಕರು ಐಗೂರು ಗ್ರಾಮ
ಬೇರೆ ಜಾಗ ಇಲ್ಲ
ಹಳೆಯ ಕಬ್ಬಿಣದ ಸೇತುವೆ ಉಳಿಸಿಕೊಂಡು ಹೊಸ ಸೇತುವೆ ನಿರ್ಮಿಸಲು ಪಕ್ಕದಲ್ಲೇ ಬೇರೆ ಸರ್ಕಾರಿ ಜಾಗ ಇಲ್ಲ. ಹೊಸ ಸೇತುವೆಗೆ ಯೋಜನೆ ರೂಪಿಸಿದ್ದರೆ ಭೂಸ್ವಾಧೀನ ಸೇರಿದಂತೆ ಇನ್ನಿತರ ಕ್ರಮಗಳನ್ನು ಅನುಸಬೇಕಿತ್ತು. ಆಗ ಯೋಜನಾ ವೆಚ್ಚ ಹೆಚ್ಚಳ ಹೊಸ ಸೇತುವೆ ನಿರ್ಮಾಣ ಕಾರ್ಯ ವಿಳಂಬ ಸೇರಿದಂತೆ ಇನ್ನಿತರ ಸಮಸ್ಯೆಗಳು ಎದುರಾಗುತ್ತಿತ್ತು. ಈಗ ಕಬ್ಬಿಣದ ಸೇತುವೆ ಶಿಥಿಲಾವಸ್ಥೆಗೆ ಜಾರಿದ್ದರಿಂದ ಅನಿವಾರ್ಯವಾಗಿ ಅದನ್ನು ತೆರವು ಮಾಡಿ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ
-ಇಬ್ರಾಹಿಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.