ಮಡಿಕೇರಿ: ಕೊಡಗಿನಲ್ಲಿ ಗುರುತಿಸಲಾದ ಪಾರಂಪರಿಕ ತಾಣಗಳು ಕೇವಲ ಬೆರಳೆಣಿಕೆಯಷ್ಟು. ಗುರುತಿಸದೇ ಇರವುವು ಹಲವಾರಿವೆ. ಅವುಗಳಲ್ಲಿ ಕೆಲವು ಅಳಿವಿನತ್ತ ಸಾಗುತ್ತಿವೆ. ಇವುಗಳ ಸಂರಕ್ಷಣೆಗೆ ಜಿಲ್ಲಾಡಳಿತ ತುರ್ತು ಗಮನ ನೀಡಬೇಕಿದೆ.
ಸದ್ಯ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಗುರುತಿಸಿರುವ ಐತಿಹಾಸಿಕ ಸ್ಮಾರಕಗಳು ಕೇವಲ 3. ಮಡಿಕೇರಿಯ ರಾಜರ ಗದ್ದುಗೆ, ನಾಲ್ಕುನಾಡಿನ ಅರಮನೆ ಹಾಗೂ ಅರಪಟ್ಟುವಿನ ಈಶ್ವರ ದೇವಸ್ಥಾನಗಳಷ್ಟೇ ಇಲಾಖೆ ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಿದೆ. ಇನ್ನೂ 20 ಸ್ಮಾರಕಗಳನ್ನು ಘೋಷಿಸಲು ಇಲಾಖೆಯು ಕಂದಾಯ ಇಲಾಖೆಗೆ 2023ರ ಡಿಸೆಂಬರ್‌ನಲ್ಲೇ ಪ್ರಸ್ತಾವ ಸಲ್ಲಿಸಿದೆ. ಆನಂತರವೂ ಅನೇಕ ನೆನಪೋಲೆಗಳನ್ನು ಕಳುಹಿಸಿದೆ. ಆದರೆ, ಇಲಾಖೆ ಮಾತ್ರ ಈ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ.
ಇನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಕೇವಲ 4 ಸ್ಮಾರಕಗಳನ್ನಷ್ಟೇ ಸಂರಕ್ಷಿತ ತಾಣವೆಂದು ಘೋಷಿಸಿದೆ. ಮಡಿಕೇರಿಯ ಕೋಟೆ, ರಾಜಾಸೀಟ್, ದೊಡ್ಡಮಳ್ತೆ ಸುಳಿಮಳ್ತೆಯ ಶಿಲಾಸಮಾಧಿಗಳು ಹಾಗೂ ಮುಳ್ಳೂರಿನ ಜೈನ ಬಸದಿಯಷ್ಟೇ ಇಲಾಖೆ ದೃಢೀಕರಿಸಿದೆ.
ಈ ಗುರುತಿಸಲಾದ ಸ್ಮಾರಕಗಳೂ ಸಹ ಅಷ್ಟೇನೂ ಕಣ್ಣು ಕೋರೈಸುವಂತಿಲ್ಲ. ಮಡಿಕೇರಿಯ ಕೋಟೆ, ರಾಜರ ಗದ್ದುಗೆಗಳ ಸ್ಥಿತಿ ನೋಡಿದರೆ ಎಂತಹವರಿಗೂ ಮನಸ್ಸಿನಲ್ಲಿ ವಿಷಾದದ ಭಾವ ಸುಳಿಯದೇ ಇರದು.
ಇನ್ನು ಇಲಾಖೆ ಗುರುತಿಸದ ಇನ್ನೂ ಅನೇಕ ಪಾರಂಪರಿಕ ತಾಣಗಳು ನಮ್ಮಲ್ಲಿವೆ. ರಾಜಸೀಟ್‌ನಲ್ಲಿ ಉದ್ಯಾನ ನಿರ್ಮಾಣಕ್ಕಾಗಿ ಅಲ್ಲಿಂದ ತೆರವು ಮಾಡಿದ ಬ್ರಿಟಿಷರ ಗೋರಿಗಳು ನಗರದ ಹೊರವಲಯದಲ್ಲಿದ್ದು, ಅಲ್ಲಿ ದಟ್ಟ ಕಾಡು ಬೆಳೆದುಕೊಂಡಿದೆ. ಈ ತಾಣ ಇನ್ನೂ ಇಲಾಖೆಯ ಕಣ್ಣಿಗೆ ಇರಲಿ, ನಗರಸಭೆಯ ಕಣ್ಣಿಗೂ ಬೀಳದೇ ಅಳಿವಿನಂಚಿನಲ್ಲಿದೆ.
ಇದೇ ರೀತಿ ಜಿಲ್ಲೆಯಲ್ಲಿರುವ ಅನೇಕ ಶಿಲಾಸಮಾಧಿಗಳು ಸಹ ಅವಸಾನದ ಅಂಚನ್ನು ತಲುಪಿವೆ. ಇವುಗಳನ್ನು ಸಂರಕ್ಷಿಸುವಂತಹ ಕೆಲಸ ಯಾವುದೇ ಇಲಾಖೆಗಳಿಂದಲೂ ಆಗುತ್ತಿಲ್ಲ.
ಸ್ಮಾರಕ ದತ್ತು ಯೋಜನೆಗೂ ಸಾರ್ವಜನಿಕರಿಂದ ಸ್ಪಂದನೆ ಇಲ್ಲ
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಸ್ಮಾರಕ ದತ್ತು ಯೋಜನೆ ಘೋಷಣೆಯಾಗಿ 3 ವರ್ಷ ಕಳೆದರೂ ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ. ಕೊಡಗು ಜಿಲ್ಲೆಯಲ್ಲಿ ಕೇವಲ ನಾಲ್ಕುನಾಡು ಅರಮನೆಯಷ್ಟೇ ಈ ಯೋಜನೆಯಡಿ ಸೇರ್ಪಡೆಯಾಗಿದ್ದು, ಒಡಂಬಡಿಕೆಯ ಪ್ರಕ್ರಿಯೆಗಳು ನಡೆಯುತ್ತಿವೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಸಂರಕ್ಷಿತ ಸ್ಮಾರಕವೆಂದು ಘೋಷಿಸಲು ಪ್ರಸ್ತಾವ ಸಲ್ಲಿಸಿರುವ ತಾಣಗಳು
* ಮಡಿಕೇರಿ ಅರಮನೆ
* ಕಾಂತೂರು ಅರಮನೆ
* ಅಂಜನಗಿರಿ ಬೆಟ್ಟಗೇರಿಯ ಜೈನ ಬಸದಿ
* ಮೋರಿಕಲ್ಲು ಶಿಲಾಸಮಾಧಿಗಳು
* ತಾಳ್ತಾರೆ ಶೆಟ್ಟಿಹಳ್ಳಿಯ ಮಲ್ಲಿಕಾರ್ಜನಸ್ವಾಮಿ ದೇಗುಲ
* ದೊಡ್ಡಕಣಗಾಲುವಿನ ಬಸದಿ
* ದೊಡ್ಡಮಳ್ತೆಯ ಸಿದ್ದೇಶ್ವರ, ಬಸವೇಶ್ವರ ದೇಗುಲ
* ಹೊಸಪಟ್ಟಣದ ಸೋಮೇಶ್ವರಸ್ವಾಮಿಗಳ ಗದ್ದುಗೆ
* ನಂಜರಾಯಪಟ್ಟಣದ ವೀರಭದ್ರ ದೇಗುಲ
* ಉಂಡೂರಿನ ದೇವಾಲಯ
* ಹೆಬ್ಬಾಲೆಯ ಮಂಟಪ
* ಕಳತ್ಮಾಡುವಿನ ನಂದೀಶ್ವರ ದೇಗುಲ
* ಬೊಳ್ಳುಮಾಡುವಿನ ಮಾದೇರಪ್ಪ ದೇಗುಲ
* ಅರಮೇರಿಯ ಭಗವತಿ ಈಶ್ವರ ದೇವಾಲಯ
* ಚಿಕ್ಕಮಂಡೂರಿನ ಅಚ್ಚುನಾಯಕ ಕಲ್ಲುಕೈಮಡ
* ಸುಳುಗೋಡುವಿನ ಈಶ್ವರ ದೇಗುಲ
* ಬಿಳಿಯೂರಿನ ಜೈನಬಸದಿ
* ಹಾತೂರುವಿನ ಕಲ್ಲುಗುಡಿ
* ಅರ್ವತ್ತೊಕ್ಲುವಿನ ಈಶ್ವರ ದೇಗುಲ
ಪುರಾತತ್ವ ಸಂಗ್ರಹಾಲಯಗಳು, ಪರಂಪರೆ ಇಲಾಖೆಯಡಿ 3 ಪಾರಂಪರಿಕ ತಾಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಡಿ 4 ತಾಣ ಘೋಷಿಸಲು ಪ್ರಸ್ತಾವ ಸಲ್ಲಿಸಿರುವುದು 20 ತಾಣ
ಸ್ಮಾರಕ ದತ್ತು ಯೋಜನೆಯಡಿ ನಾಲ್ಕುನಾಡು ಅರಮನೆಯನ್ನು ದತ್ತು ತೆಗೆದುಕೊಳ್ಳಲು ಫೌಂಡೇಷನ್ ಒಂದು ಮುಂದೆ ಬಂದಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ.ಬಿ.ಪಿ.ರೇಖಾ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.