ADVERTISEMENT

ಮಡಿಕೇರಿ | ಎಚ್‌ಐವಿ: ಎಚ್ಚರವಿರಲಿ, ತಾರತಮ್ಯ ಬೇಡ

ಮಡಿಕೇರಿಯ ಹಲವೆಡೆ ತೊಗಲು ಗೊಂಬೆಯಾಟ, ಜಾಥಾ, ಮೋಂಬತ್ತಿ ಬೆಳಗಿಸಿ ಶ್ರದ್ದಾಂಜಲಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 5:25 IST
Last Updated 2 ಡಿಸೆಂಬರ್ 2025, 5:25 IST
ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಎಚ್‌ಐವಿ ಕುರಿತ ತೊಗಲು ಗೊಂಬೆಯಾಟವನ್ನು ಹಾಸನದ ಶ್ರೀರಾಜಾರಾಮ ತೊಗಲುಗೊಂಬೆ ಕಲಾಸಂಘದ ಕಲಾವಿದರು ಸೋಮವಾರ ಪ್ರದರ್ಶಿಸಿದರು
ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಎಚ್‌ಐವಿ ಕುರಿತ ತೊಗಲು ಗೊಂಬೆಯಾಟವನ್ನು ಹಾಸನದ ಶ್ರೀರಾಜಾರಾಮ ತೊಗಲುಗೊಂಬೆ ಕಲಾಸಂಘದ ಕಲಾವಿದರು ಸೋಮವಾರ ಪ್ರದರ್ಶಿಸಿದರು   

ಮಡಿಕೇರಿ: ಎಚ್‌ಐವಿ ಬಾರದಂತೆ ಎಚ್ಚರ ವಹಿಸಿ, ನಿಯಮಿತ ಚಿಕಿತ್ಸೆಯಿಂದ ಇತರರಂತೆ ಬದುಕಲು ಎಚ್‌ಐವಿ ಸೋಂಕಿತರಿಗೆ ಅವಕಾಶ ಇದೆ, ಎಚ್‌ಐವಿ ಸೋಂಕಿತರಿಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬೇಡಿ ಎಂಬ ಸಂದೇಶವನ್ನು ನಗರದಲ್ಲಿ ಸೋಮವಾರ ಬಿತ್ತರಿಸಲಾಯಿತು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಮೀಪ, ಇಂದಿರಾಗಾಂಧಿ ವೃತ್ತ (ಚೌಕಿ), ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಜಿಲ್ಲಾ ಕಾರಾಗೃಹದಲ್ಲಿ ಹಾಸನದ ಶ್ರೀರಾಜಾರಾಮ ತೊಗಲುಗೊಂಬೆ ಕಲಾಸಂಘದ ಕಲಾವಿದರು ತೊಗಲು ಗೊಂಬೆಯಾಟದ ಮೂಲಕ ಅರಿವು ಮೂಡಿಸಿದರು.

ಎಚ್‌ಐವಿ ಸೋಂಕಿನಿಂದ ಮರಣ ಹೊಂದಿದವರಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮೋಂಬತ್ತಿ ಬೆಳಗಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು ಹಾಗೂ ಎಚ್‌ಐವಿ ಹರಡದಂತೆ ಮುಂಜಾಗ್ರತಾ ವಹಿಸುವ ಸಂಬಂಧ ಮೋಂಬತ್ತಿ ಹಿಡಿದು ಸಭಿಕರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ADVERTISEMENT

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಲಯನ್ಸ್ ಸಂಸ್ಥೆ, ರೋಟರಿ ಮಿಸ್ಟಿ ಹಿಲ್ಸ್, ಎಫ್‍ಎಂಕೆಎಂಸಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಕಾಲೇಜು, ಓಡಿಪಿ-ಸ್ನೇಹಾಶ್ರಯ ಸಮಿತಿ, ಚೈತನ್ಯ ನೆಟ್‍ವರ್ಕ್ ಕೊಡಗು ಹಾಗೂ ಆಶೋದಯ ಸಮಿತಿ ವತಿಯಿಂದ ಇಲ್ಲಿ ಸೋಮವಾರ ನಡೆದ ‘ವಿಶ್ವ ಏಡ್ಸ್ ದಿನ’ ಕಾರ್ಯಕ್ರಮದಲ್ಲಿ ಈ ದೃಶ್ಯಗಳು ಕಂಡು ಬಂದವು.

ಮೊದಲಿಗೆ, ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿಯಿಂದ ಪ್ರಾರಂಭವಾದ ವಿಶ್ವ ಏಡ್ಸ್ ದಿನದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಸುರೇಂದ್ರ ಅವರು, ‘ಎಚ್‍ಐವಿ ಏಡ್ಸ್ ಹರಡುವ ಹಾಗೂ ನಿಯಂತ್ರಣ ಕುರಿತು ಎಲ್ಲರೂ ತಿಳಿದುಕೊಳ್ಳಬೇಕು. ಎಚ್‍ಐವಿ ಏಡ್ಸ್ ನಿಯಂತ್ರಣ ಎಲ್ಲರ ಜವಾಬ್ದಾರಿ ಎಂದು ಅರಿತುಕೊಳ್ಳೋಣ’ ಎಂದು ನುಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ, ‘ಕಾನೂನು ಸೇವಾ ಪ್ರಾಧಿಕಾರದಿಂದ ಹಲವು ರೀತಿಯ ಕಾನೂನು ಸೇವೆಗಳಿದ್ದು, ನೆರವು ಸಿಗಲಿದೆ’ ಎಂದು ಹೇಳಿದರು.

ಜಾಥವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳಿ ಆರಂಭವಾಗಿ ಜನರಲ್ ತಿಮ್ಮಯ್ಯ ವೃತ್ತದ ಮೂಲಕ ಮಂಗೇರಿರ ಮುತ್ತಣ್ಣ ವೃತ್ತ ಮೂಲಕ ಸಾಗಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನವರೆಗೆ ಸಾಗಿತು.
ಜಾಥದಲ್ಲಿ ಹಲವು ಪದವಿ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಎಚ್‍ಐವಿ ಏಡ್ಸ್ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿದರು.

ನಂತರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆದು, ಮೋಂಬತ್ತಿ ಬೆಳಗಿ ಎಚ್‌ಐವಿ ಸೋಂಕಿನಿಂದ ಮೃತಪಟ್ಟವರಿಗೆ ಶ್ರದ್ದಾಂಜಲಿ ಸಲ್ಲಿಸಿ, ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಅಧ್ಯಕ್ಷ ರತ್ನಾಕರ ರೈ, ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಸಾಲ್ಡನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಕೂಪದಿರ ಸುನಿತಾ ಮುತ್ತಣ್ಣ ಭಾಗವಹಿಸಿದ್ದರು.

ಅತ್ಯುತ್ತಮ ರೆಡ್‍ರಿಬ್ಬನ್ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಎನ್‍ಎಸ್‍ಎಸ್ ಅಧಿಕಾರಿಗಳನ್ನು ಇದೇ ವೇಳೆ ಸನ್ಮಾನಿಸಲಾಯಿತು. ನಗರದ ಎಫ್‍ಎಂಸಿ ಕಾಲೇಜು, ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾವೇರಿ ಕಾಲೇಜು, ಗೋಣಿಕೊಪ್ಪಲು ಕಾವೇರಿ ಕಾಲೇಜು, ಸೋಮವಾರಪೇಟೆ ಸಂತ ಜೋಸೆಫರ ಪದವಿ ಕಾಲೇಜು ಈ ಕಾಲೇಜಿನ ಪ್ರತಿನಿಧಿಗಳನ್ನು ಗೌರವಿಸಲಾಯಿತು.

ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವಿಶ್ವ ಏಡ್ಸ್ ದಿನಾಚರಣೆಯಲ್ಲಿ ಮೋಂಬತ್ತಿ ಬೆಳಗಿ ಎಚ್‌ಐವಿಯಿಂದ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಯಿತು
ವಿಶ್ವ ಏಡ್ಸ್‌ ದಿನಾಚರಣೆ ಪ್ರಯುಕ್ತ ಸೋಮವಾರ ಮಡಿಕೇರಿಯಲ್ಲಿ ಜಾಥಾ ನಡೆಯಿತು

ಮಡಿಕೇರಿಯಲ್ಲಿ ನಡೆಯಿತು ಜಾಥಾ ಮೋಂಬತ್ತಿ ಬೆಳಗಿಸಿ ಶ್ರದ್ದಾಂಜಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಯುವಜನರು

ಎಚ್‍ಐವಿಯನ್ನು ದೂರವಿರಲು ಸ್ವಯಂ ನಿಯಂತ್ರಣ ಹಾಗೂ ತಾಳ್ಮೆ ಅತೀ ಮುಖ್ಯ. ಸ್ವಯಂ ಶಿಸ್ತು ಇದ್ದಲ್ಲಿ ಯಾವುದೇ ರೋಗಗಳು ಬರುವುದಿಲ್ಲ. ಯುವ ಜನರು ಹಾದಿ ತಪ್ಪಿದರೆ ಇಡೀ ಸಮಾಜ ಹದಗೆಡುತ್ತದೆ

-ಪ್ರೊ.ಮೇಜರ್ ರಾಘವ ಎಫ್‍ಎಂಕೆಎಂಸಿ ಕಾಲೇಜಿನ ಪ್ರಾಂಶುಪಾಲ.

ಎಚ್‍ಐವಿ ಸೋಂಕಿತರ ಕುರಿತು ಸಮಾಜದಲ್ಲಿ ಆಗುತ್ತಿರುವ ಆಗುಹೋಗುಗಳ ಬಗ್ಗೆ ನಾವೆಲ್ಲ ತಿಳಿಯುವ ಒಂದು ಅವಕಾಶ ವಿಶ್ವ ಏಡ್ಸ್ ದಿನ. ಸೋಂಕಿತರಿಗೆ ಸಂಬಂಧಿಸಿದ ಮಾಹಿತಿ ತಿಳಿದವರು ಇತರರಿಗೆ ತಿಳಿಸುವ ಸದಾವಕಾಶದ ದಿನ

-ಬಿ.ಕೆ.ರವೀಂದ್ರ ರೈ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿ.

ಎಚ್‍ಐವಿ ಸೋಂಕಿತರಿಗೆ ಯಾವುದೇ ಕಳಂಕ ತಾರತಮ್ಯ ಮಾಡಬಾರದು. ಅವರಿಗೂ ಕೂಡ ಎಲ್ಲಾ ಆರೋಗ್ಯದ ಸೇವೆಗಳನ್ನು ಪಡೆಯುವ ಹಕ್ಕಿದೆ

-ಅಂಬೆಕಲ್ಲು ನವೀನ್ ಲಯನ್ಸ್ ಟ್ರಸ್ಟ್ ಅಧ್ಯಕ್ಷ.

‘ಕೊಡಗು ಜಿಲ್ಲೆಯಲ್ಲಿ 2025-26 ನೇ ಸಾಲಿನಲ್ಲಿ 61 ಎಚ್‍ಐವಿ ಏಡ್ಸ್ ಸೋಂಕಿತ ಪ್ರಕರಣಗಳು ವರದಿಯಾಗಿದ್ದು ಉಚಿತ ಸಹಾಯವಾಣಿ 1097 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು

-ಶಾಂತಿ ಆರೋಗ್ಯ ಶಿಕ್ಷಣಾಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.