ADVERTISEMENT

ರಾಷ್ಟ್ರೀಯ ತಂಡದ ಕದ ತಟ್ಟುತ್ತಿರುವ ಪ್ರತಿಭೆ; ಹಾಕಿ ಕ್ರೀಡೆಯಲ್ಲಿ ಪೃಥ್ವಿ ಮಿಂಚು

ರೈತ ಕುಟುಂಬದ ಕುಡಿ

ಡಿ.ಪಿ.ಲೋಕೇಶ್
Published 6 ಮೇ 2022, 5:02 IST
Last Updated 6 ಮೇ 2022, 5:02 IST
ಟ್ರೋಫಿಯೊಂದಿಗೆ ಪೃಥ್ವಿ
ಟ್ರೋಫಿಯೊಂದಿಗೆ ಪೃಥ್ವಿ   

ಸೋಮವಾರಪೇಟೆ: ಹಾಕಿ ಕ್ರೀಡೆಯ ಗಂಧ ಗಾಳಿಯಿಲ್ಲದ ಗ್ರಾಮೀಣ ಪ್ರತಿಭೆಯೊಂದು ಹಾಕಿ ಕ್ಷೇತ್ರದಲ್ಲಿ ಮಿಂಚುತ್ತಿದೆ. ರಾಷ್ಟ್ರೀಯ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಪೃಥ್ವಿ.

ತಾಲ್ಲೂಕಿನ ಹರಗ ಗ್ರಾಮದ ರೈತ ಕುಟುಂಬವೊಂದರಲ್ಲಿ ಜನಿಸಿರುವ ಪೃಥ್ವಿ ಗ್ರಾಮೀಣ ಭಾಗದಲ್ಲಿಯೇ ತನ್ನ ವಿದ್ಯಾಭ್ಯಾಸ ಪಡೆದಿದ್ದಾರೆ. 1ರಿಂದ 6ನೇ ತರಗತಿವರೆಗೆ ಹರಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ, 7ನೇ ತರಗತಿಯನ್ನು ಬೆಟ್ಟದಳ್ಳಿ ಶಾಲೆಯಲ್ಲಿ ಪೂರ್ಣ ಗೊಳಿಸಿದ್ದರು. ಎಸ್ಸೆಸ್ಸೆಲ್ಸಿ ತನಕ ಪೊನ್ನಂಪೇಟೆ ಯಲ್ಲಿ ಇರುವ ಹಾಕಿ ಕ್ರೀಡಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪಿಯುಸಿ ಮತ್ತು ಪದವಿಯನ್ನು ಬೆಂಗಳೂರಿನ ಸೂರಣ ಕಾಲೇಜಿನಲ್ಲಿ ಪಡೆದಿದ್ದರು.

2013ರಿಂದ 2017ರವರೆಗೆ ಬೆಂಗಳೂರಿನ ಸ್ಪೋರ್ಟ್ಸ್‌ ಅಥಾರಿಟಿ ಆಫ್ ಇಂಡಿಯಾದ ಹಾಸ್ಟೆಲ್‍ನಲ್ಲಿ ಇದ್ದುಕೊಂಡು ಅಭ್ಯಾಸ ನಡೆಸಿದ್ದರು. ನಂತರ, 2017ರಲ್ಲಿ ತಮಿಳುನಾಡಿನ ಕೇಂದ್ರ ಸರ್ಕಾರದ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಕೆಲಸ ಗಿಟ್ಟಿಸಿಕೊಂಡರು.

ADVERTISEMENT

ಪೊನ್ನಂಪೇಟೆಯ ಸ್ಪೋರ್ಟ್ಸ್‌ ಹಾಸ್ಟೆಲ್‍ನಲ್ಲಿ ಅಭ್ಯಾಸ ಮಾಡುವ ಸಂದರ್ಭವೇ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದ್ವಿತೀಯ ಪಿಯುಸಿ ವೇಳೆ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದರು. ಸಾಯಿ ಆಲ್ ಇಂಡಿಯಾ ಹಾಕಿ ಟೂರ್ನಿಯಲ್ಲಿ ಇವರ ತಂಡ ಮೂರನೇ ಸ್ಥಾನ ಗಳಿಸಿತ್ತು.

ಪ್ರಸ್ತುತ ಕೇಂದ್ರ ಸರ್ಕಾರಕ್ಕೊಳ ಪಟ್ಟಿರುವ ತಮಿಳುನಾಡಿನ ರೈಲ್ವೆ ಕೋಚ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು, ತಮಿಳುನಾಡಿನ ಹಾಕಿ ತಂಡದಲ್ಲಿ ಫುಲ್ ಬ್ಯಾಕ್ ಆಟಗಾರರಾಗಿದ್ದಾರೆ.

ಎರಡು ಬಾರಿ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇವರು, ಈಚೆಗೆ ನಡೆದ 12ನೇ ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ ಶಿಪ್‍ನಲ್ಲಿ 2ನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾರೆ. 5ನೇ ಜೂನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‌ನಲ್ಲಿ ಕಂಚು, 11ನೇ ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಂಡಿದ್ದರು.

ಇವರು ಹರಗ ಗ್ರಾಮದ ರೈತರಾದ ಶಶಿ ಮತ್ತು ಜಿ.ಇ. ಮೊಗಪ್ಪ ಅವರ ಪುತ್ರ. ಪೃಥ್ವಿಗೆ ತಮ್ಮ ಇದ್ದಾರೆ.

‘ಕ್ರೀಡೆಯಲ್ಲಿ ಜೀವನ ಕಂಡು ಕೊಳ್ಳಬಹುದು ಎಂಬುವುದಕ್ಕೆ ನಾನೇ ಸಾಕ್ಷಿ. ಪ್ರಾಥಮಿಕ ಶಿಕ್ಷಣದ ಸಂದರ್ಭ ಯಾವುದೇ ಕ್ರೀಡೆಯ ಬಗ್ಗೆ ತಿಳಿದಿರಲಿಲ್ಲ. 8ನೇ ತರಗತಿಗೆ ನನ್ನ ತಂದೆ ಸ್ಪೋರ್ಟ್ಸ್ ಹಾಸ್ಟೆಲ್‍ಗೆ ಸೇರಿಸಿದರು. ಹಾಕಿ ಸ್ಟಿಕ್ ಹಿಡಿಯುವುದು ತಿಳಿದಿರಲಿಲ್ಲ. ನಂತರ ಒಂದೊಂದೇ ಮೆಟ್ಟಿಲು ಏರುತ್ತಾ ಸಾಗಿ ಅದರಿಂದಲೇ ಜೀವನ ಕಂಡು ಕೊಂಡಿದ್ದೇನೆ’ ಎಂದು ಪೃಥ್ವಿ ಹೇಳಿದರು.

‘ಕ್ರೀಡೆಯಿಂದ ಸಾಧನೆ ಸಾಧ್ಯ’

‘ಕಠಿಣ ಪರಿಶ್ರಮದಿಂದ ಕ್ರೀಡೆಯಲ್ಲಿ ಎತ್ತರಕ್ಕೆ ಬೆಳೆಯ ಬಹುದು. ನಮ್ಮ ಸಮಾಜದಲ್ಲಿ ಯುವಕರ ಸಾಧನೆಗೆ ಸಾಕಷ್ಟು ಅವಕಾಶಗಳಿದ್ದರೂ, ತಮ್ಮ ಜೀವನವನ್ನು ಮೋಜು ಮಸ್ತಿಯಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಸ್ಥಳೀಯ ಮಟ್ಟದಿಂದ ಹಾಕಿಯಲ್ಲಿ ರಾಷ್ಟ್ರೀಯ ಮಟ್ಟದವರೆಗೆ ಎಲ್ಲವನ್ನು ಅನುಭವಿಸಿದ್ದೇನೆ. ದೇಶದ ಪರವಾಗಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಆಡಲು ಕಾಯುತ್ತಿದ್ದೇನೆ’ ಎಂದು ಪೃಥ್ವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.