ADVERTISEMENT

ಗೋಣಿಕೊಪ್ಪಲು: ಹಾಕಿ ಟೂರ್ನಿಗೆ ಇಂದು ಚಾಲನೆ

ವಿ.ಬಾಡಗ ಹೈ ಫ್ಲೈಯರ್ಸ್ ಕಪ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 6:49 IST
Last Updated 28 ನವೆಂಬರ್ 2023, 6:49 IST
ಗೋಣಿಕೊಪ್ಪಲು ಬಳಿಯ ವಿಬಾಡಗದಲ್ಲಿ ನಡೆಯಲಿರುವ ಹೈ ಫ್ಲೈಯರ್ಸ್ ಹಾಕಿ ಟೂರ್ನಿಗೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನವನ್ನು ಸಜ್ಜುಗೊಳಿಸಲಾಗಿದೆ
ಗೋಣಿಕೊಪ್ಪಲು ಬಳಿಯ ವಿಬಾಡಗದಲ್ಲಿ ನಡೆಯಲಿರುವ ಹೈ ಫ್ಲೈಯರ್ಸ್ ಹಾಕಿ ಟೂರ್ನಿಗೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನವನ್ನು ಸಜ್ಜುಗೊಳಿಸಲಾಗಿದೆ   

ಗೋಣಿಕೊಪ್ಪಲು: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಐದು ದಿನಗಳ ಕಾಲ ವಿ ಬಾಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ವಿರಾಜಪೇಟೆ ತಾಲ್ಲೂಕಿನ 3 ನಾಡುಗಳ ವ್ಯಾಪ್ತಿಯ ಕೊಡವ ಕೌಟುಂಬಿಕ ಹಾಕಿ ಟೂರ್ನಿ ನ.28ರಂದು ಆರಂಭವಾಗಲಿದೆ.

ಟೂರ್ನಿ ಯಶಸ್ಸಿಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ವಿರಾಜಪೇಟೆ ತಾಲ್ಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬ ತಂಡಗಳಿಗಾಗಿ ನಡೆಯಲಿರುವ ಟೂರ್ನಿಯಲ್ಲಿ ವಿವಿಧ ಅತಿಥಿ ಆಟಗಾರರನ್ನು ಒಳಗೊಂಡಂತೆ 19 ಕುಟುಂಬ ತಂಡಗಳು ಭಾಗವಹಿಸಲಿವೆ.

28ರಂದು ಬೆಳಿಗ್ಗೆ 9 ಗಂಟೆಗೆ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಕೆ. ಬೋಪಣ್ಣ ಟೂರ್ನಿ ಉದ್ಘಾಟಿಸಲಿದ್ದಾರೆ. ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕ್ರಾಮದಲ್ಲಿ ಮುಖ್ಯ ಅತಿಥಿಗಳಾಗಿ ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಅಂತರರಾಷ್ಟ್ರೀಯ ಅಥ್ಲೆಟಿಕ್ ಮತ್ತು ಏಕಲವ್ಯ ಪ್ರಶಸ್ತಿ ವಿಜೇತ ತೀತಮಾಡ ಅರ್ಜುನ್ ದೇವಯ್ಯ, ಹಾಕಿ ಕೂರ್ಗ್ ಸಂಸ್ಥೆ ಅಧ್ಯಕ್ಷ ಪಳಂಗಂಡ ಲವಕುಮಾರ್, ಕಾಫಿ ಬೆಳಗಾರ ಕೊಲ್ಲಿರ ಬೋಪಣ್ಣ, ಸ್ಥಳಿಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಂಜಿತಂಡ ಗಿಣಿ ಮೊಣ್ಣಪ್ಪ, ವಿ.ಬಾಡಗ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆ.ಸಿ.ಗೀತಾಂಜಲಿ ಭಾಗವಹಿಸಲಿದ್ದಾರೆ.

ADVERTISEMENT

ಹೈ ಫ್ಲೈಯರ್ಸ್ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷ ಮಳವಂಡ ಗಿರೀಶ್ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಡಿ. 2ರಂದು ಮಧ್ಯಾಹ್ನದ ನಂತರ ನಡೆಯಲಿರುವ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಉದ್ಯಮಿ ನಂಬುಡುಮಾಡ ಎಸ್.ನರೇಂದ್ರ, ಬೆಂಗಳೂರಿನ ಕೈಗಾರಿಕೋದ್ಯಮಿ ಪಿ.ವಿ.ಮಂಜುನಾಥ್ ಬಾಬು. ವಿ. ಬಾಡಗ ಹೈ ಫ್ಲೈಯರ್ಸ್ ಸಂಸ್ಥೆ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ, ಕಾಫಿ ಬೆಳೆಗಾರರಾದ ಚೇಮಿರ ಸದಾ ರಾಮಚ್ಚ, ಮಳವಂಡ ಬೋಜಮ್ಮ ಅಚ್ಚಪ್ಪ, ಚೇಮಿರ ಜಿ. ಪೂವಯ್ಯ ಭಾಗವಹಿಸಲಿದ್ದಾರೆ.

ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮಯ್ಯ, ಅಂತರರಾಷ್ಟ್ರೀಯ ಹಾಕಿ ಆಟಗಾರ ಒಲಂಪಿಯನ್ ಚೇಂದಂಡ ನಿಕ್ಕಿನ್ ತಿಮ್ಮಯ್ಯ ಮತ್ತು ಉದ್ಯೋನ್ಮುಖ ಅಥ್ಲೆಟಿಕ್ ತಾರೆ ಬೊಳ್ಳಂಡ ಉನ್ನತಿ ಅಯ್ಯಪ್ಪ ಅವರನ್ನು ಸನ್ಮಾನಿಸಲಾಗುವುದು ಎಂದು ಕ್ರೀಡಾ ಸಮಿತಿ ಅಧ್ಯಕ್ಷ ಕುಪ್ಪಂಡ ದಿಲನ್ ಬೋಪಣ್ಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.