ADVERTISEMENT

ಹಾಕಿ ಪಂದ್ಯಾವಳಿ: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

​ಪ್ರಜಾವಾಣಿ ವಾರ್ತೆ
Published 6 ಜನವರಿ 2024, 6:02 IST
Last Updated 6 ಜನವರಿ 2024, 6:02 IST
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಶುಕ್ರವಾರ ನಡೆದ 67ನೇ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆಲುವ ಪಡೆದ ಜಾರ್ಖಾಂಡ್ ತಂಡ.
ಕುಶಾಲನಗರ ಸಮೀಪದ ಕೂಡಿಗೆಯಲ್ಲಿ ಶುಕ್ರವಾರ ನಡೆದ 67ನೇ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಗೆಲುವ ಪಡೆದ ಜಾರ್ಖಾಂಡ್ ತಂಡ.   

ಮಡಿಕೇರಿ: ಕೊಡಗಿನಲ್ಲಿ ನಡೆಯುತ್ತಿರುವ 67ನೇ ರಾಷ್ಟ್ರಮಟ್ಟದ 17ರ ವಯೋಮಿತಿಯ ಬಾಲಕಿಯರ (ಶಾಲೆಗಳ) ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರ ಕರ್ನಾಟಕ ತಂಡ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿತು. ಶನಿವಾರ ಸೋಮವಾರಪೇಟೆಯಲ್ಲಿ ನಡೆಯಲಿರುವ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕವು ಚಂಡೀಗಡವನ್ನು ಎದುರಿಸಲಿದೆ.

ಮಡಿಕೇರಿಯ ಭಾರತೀಯ ಕ್ರೀಡಾ ಪ್ರಾಧಿಕಾರದ ಹಾಕಿ ಮೈದಾನದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಕರ್ನಾಟಕದ ಆಟಗಾರರು ಗೋಲುಗಳ ಸುರಿಮಳೆಗರೆದರು. ಎರಡು ಪಂದ್ಯಗಳಿಂದ ರಾಜ್ಯವು ಒಟ್ಟು 17 ಗೋಲುಗಳನ್ನು ಕಲೆ ಹಾಕಿದ್ದು ವಿಶೇಷ ಎನಿಸಿತು.

ದಿನದ ಮೊದಲಿಗೆ ನಡೆದ ಲೀಗ್ ಪಂದ್ಯದಲ್ಲಿ ಮುಖಾಮುಖಿಯಾದ ಕೆವಿಎಸ್ (ಕೇಂದ್ರಿಯ ವಿದ್ಯಾಲಯ ಸಂಘಟನೆ) ತಂಡವನ್ನು 11–0 ಗೋಲಿನಿಂದ ಮಣಿಸಿ ಗೆಲುವಿನ ನಗೆ ಬೀರಿತು. ರಾಜ್ಯದ ಪರ ಅಕ್ಷರಾ ತಿಮ್ಮಯ್ಯ ಅವರು ಬರೋಬರಿ 5 ಗೋಲುಗಳನ್ನು ದಾಖಲಿಸಿದರೆ, ವಿ.ಬಿ.ಪ್ರತೀಕಾ 2 ಹಾಗೂ ಚೈತನ್ಯಾ, ಎಸ್.ಆರ್.ಪುಣ್ಯಾ, ಆರ್.ದೀಪಿಕಾ, ಪ್ರಿನಿಕಾ ಅಗ್ನೇಶ್ ಅವರು ತಲಾ ಒಂದೊಂದು ಗೋಲು ಗಳಿಸಿದರು.

ADVERTISEMENT

ಸಂಜೆ ಸೂರ್ಯಾಸ್ತಕ್ಕೂ ಮುನ್ನ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕವು ಛತ್ತೀಸ್‌ಗಡ ತಂಡವನ್ನು 6–0 ಗೋಲಿನಿಂದ ಮಣಿಸಿ, ಕ್ವಾರ್ಟರ್‌ ಫೈನಲ್ ಪ್ರವೇಶಿಸಿತು. ರಾಜ್ಯದ ಪರ ವಿ.ಬಿ.ಪ್ರತೀಕಾ 2, ಪ್ರಿನಿಕಾ ಅಗ್ನೇಶ್, ಬಿ.ಅಕ್ಷರಾ, ಡಿ.ಯು.ಚೈತನ್ಯಾ, ಎಸ್.ಕೆ.ದೇಚಕ್ಕ ಅವರು ತಲಾ ಒಂದೊಂದು ಗೋಲು ಗಳಿಸಿದರು.

ಇನ್ನುಳಿದಂತೆ, ಜಿಲ್ಲೆಯ ವಿವಿಧೆಡೆ ನಡೆದ ಪಂದ್ಯಗಳಲ್ಲಿ ಪಂಜಾಬ್ ತಂಡವು ಮಹಾರಾಷ್ಟ್ರ ತಂಡವ‌ನ್ನು 3–0ಯಿಂದ, ಮಣಿಪುರ ತಂಡವು ಹರ್ಯಾಣ ತಂಡವನ್ನು 3–1, ಮಧ್ಯಪ್ರದೇಶ ತಂಡವು ಹಿಮಾಚಲ ಪ್ರದೇಶವನ್ನು 8–0, ಚಂಡೀಗಡ ಉತ್ತರಪ್ರದೇಶವನ್ನು 6–1, ಕೇರಳ ತಂಡವು ರಾಜಾಸ್ತಾನ ತಂಡವನ್ನು 3–0, ಜಾರ್ಖಾಂಡ್ ಬಿಹಾರ ತಂಡವನ್ನು 8–0, ಒಡಿಸ್ಸಾ ತಂಡವು ದೆಹಲಿ ತಂಡವನ್ನು 5–0 ಅಂತರದಿಂದ ಮಣಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದವು.

ಸೋಮವಾರಪೇಟೆ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯದಲ್ಲಿ ಉತ್ತರ ಪ್ರದೇಶ ಮತ್ತು ಚಂಡೀಗಡ ತಂಡದ ಆಟಗಾರರು ಗೆಲುವಿಗಾಗಿ ಸೆಣಸಾಟ ನಡೆಸಿದರು
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಾಕಿ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ ಹರ್ಯಾಣ ತಂಡದ ವಿರುದ್ಧ ಜಯ ಗಳಿಸಿದ ಮಣಿಪುರ ತಂಡದ ಆಟಗಾರರು ಮೈದಾನದಲ್ಲಿ ಒಟ್ಟಿಗೆ ಕುಳಿತು ಗೆಲುವಿನ ನಗೆ ಬೀರಿದರು.
5 ಗೋಲುಗಳನ್ನು ದಾಖಲಿಸಿದ ರಾಜ್ಯದ ಅಕ್ಷರಾ ತಿಮ್ಮಯ್ಯ ಕರ್ನಾಟಕ ಆಡಿದ ಎರಡೂ ಪಂದ್ಯಗಳಲ್ಲಿ ಗೆಲುವು ಇಂದು ಕರ್ನಾಟಕ– ಚಂಡೀಗಡ ನಡುವೆ ಕ್ವಾರ್ಟರ್ ಫೈನಲ್‌  ಪಂದ್ಯ
ಇಂದು ಎಲ್ಲ ಕ್ವಾರ್ಟರ್‌ಫೈನಲ್‌ ಪಂದ್ಯಗಳು ಸೋಮವಾರಪೇಟೆಯಲ್ಲಿ
ಸೋಮವಾರಪೇಟೆಯ ನೂತನ ಹಾಕಿ ಕ್ರೀಡಾಂಗಣದಲ್ಲಿ ಜ. 6ರಂದು ಎಲ್ಲ 4 ಕ್ವಾರ್ಟರ್ ಫೈನಲ್‌ ಪಂದ್ಯಗಳು ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಜಾರ್ಖಾಂಡ್ ಮತ್ತು ಒಡಿಸ್ಸಾ 11.30ಕ್ಕೆ ಕೇರಳ ಮತ್ತು ಮಣಿಪುರ ಮಧ್ಯಾಹ್ನ 1.30ಕ್ಕೆ ಪಂಜಾಬ್ ಮತ್ತು ಮಧ್ಯಪ್ರದೇಶ ಹಾಗೂ 3 ಗಂಟೆ ಕರ್ನಾಟಕ ಚಂಡೀಗಡ ತಂಡಗಳ ನಡುವೆ ಪಂದ್ಯಗಳು ನಿಗದಿಯಾಗಿವೆ.
ಕೇರಳ ಜಾರ್ಖಂಡ್ ತಂಡಗಳಿಗೆ ಜಯ
ಕುಶಾಲನಗರ: ಇಲ್ಲಿನ ಕೂಡಿಗೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕೇರಳ ಹಾಗೂ ಜಾರ್ಖಾಂಡ್ ತಂಡಗಳು ಜಯ ಗಳಿಸಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದವು. ಕೇರಳ ತಂಡವು ರಾಜಸ್ಥಾನದ ವಿರುದ್ಧ 3-0 ಗೋಲಿನಿಂದ ಹಾಗೂ ಜಾರ್ಖಂಡ್ ತಂಡವು 7-0 ಅಂತರದಿಂದ ಬಿಹಾರ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶ ಪಡೆದವು. ಜಾರ್ಖಂಡ್ ತಂಡದ ಜಮುನಾ 5 ರೀನು ಕುಲ್ಲು ಹಾಗೂ ಸಫಿನಾ ಲುಕ್ರಾ ತಲಾ ಒಂದು ಗೋಲು ಪಡೆದರು. ಕೇರಳ ತಂಡದ ಶನುಷಾ ಲಕ್ಷ್ಮಿ ಹಾಗೂ ಪಚುಲಾ ತಲಾ ಒಂದು ಗೋಲು ಪಡೆದರು. ಇದಕ್ಕೂ ಮುನ್ನ ನಡೆದ ಲೀಗ ಪಂದ್ಯಾವಳಿಯಲ್ಲಿ ಕೇರಳ ತಂಡವು ಆಂಧ್ರ ಪ್ರದೇಶವನ್ನು 3-0 ರಾಜಸ್ಥಾನ ತಂಡವು ಜಮ್ಮು ಮತ್ತು ಕಾಶ್ಮೀರ ತಂಡವನ್ನು 2-1  ಜಾರ್ಖಂಡ್ ತಂಡವು ಜಮ್ಮು ಮತ್ತು ಕಾಶ್ಮೀರ ತಂಡವನ್ನು 11-0 ಗೋಲಿನಿಂದ ಮಣಿಸಿದವು. ತೀರ್ಪುಗಾರರಾಗಿ ಡ್ಯಾನಿ ದೇವಯ್ಯ ಡ್ಯಾನಿ ಈರಪ್ಪ ಬಿ.ಎಂ.ನಾಣಯ್ಯ ಅರುಣ್ ಪಂದ್ಯಾಟಗಳ ತಾಂತ್ರಿಕ ಸಮಿತಿ ಮುಖ್ಯಸ್ಥರಾಗಿ ನಂದ ಕಾರ್ಯನಿರ್ವಹಿಸಿದರು. ಕ್ರೀಡಾಕೂಟದ ಸಂಚಾಲಕ ಸದಾಶಿವಯ್ಯ ಎಸ್ ಪಲ್ಲೇದ್ ಇದ್ದರು.
ಮದ್ಯಪ್ರದೇಶ ಚಂಡೀಗಡಗಳ ಜಯಭೇರಿ
ಸೋಮವಾರಪೇಟೆ: ಇಲ್ಲಿನ ಪದವಿಪೂರ್ವ ಕಾಲೇಜಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಶುಕ್ರವಾರ ಮದ್ಯಪ್ರದೇಶ ಮತ್ತು ಚಂಡೀಗಡ ತಂಡಗಳು ಉತ್ತಮ ಪ್ರದರ್ಶನ ತೋರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ಮಧ್ಯಪ್ರದೇಶ ತಂಡವು ಚಂಡೀಗಡ ತಂಡವನ್ನು 1–0 ತೆಲಂಗಾಣ ತಂಡವು ವಿದ್ಯಾಭಾರತಿ ಮಥುರಾ ತಂಡವನ್ನು 7–0 ಅಂತರದಿಂದ ಮಣಿಸಿದರೆ ಉತ್ತರ ಪ್ರದೇಶ ತಂಡ ಮತ್ತು ಹಿಮಾಚಲ ಪ್ರದೇಶ ತಂಡಗಳು ಸಮಬಲ ಸಾಧಿಸಿದವು. ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ ತಂಡದ ನಡುವೆ ನಡೆದ ಮೊದಲ ಫ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮದ್ಯಪ್ರದೇಶ ತಂಡವು ಹಿಮಾಚಲಪ್ರದೇಶ ವಿರುದ್ದ 8 ಗೋಲುಗಳನ್ನು ದಾಖಲಿಸಿ ಜಯಿಸಿದರೆ ದಿನದ ಕೊನೆಯ ಫ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚಂಡೀಗಡ ತಂಡವು 6-1 ಅಂತರದಿಂದ ಉತ್ತರಪ್ರದೇಶವನ್ನು ಮಣಿಸಿತು.
ಮಣಿಪುರ ಒಡಿಸ್ಸಾ ತಂಡಗಳಿಗೆ ಗೆಲುವು
ಗೋಣಿಕೊಪ್ಪಲು: ಇಲ್ಲಿಗೆ ಸಮೀಪದ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಟರ್ಫ್ ಮೈದಾನದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮಣಿಪುರ ಹಾಗೂ ಒಡಿಸ್ಸಾ ತಂಡಗಳು ಪ್ರೀಕ್ವಾರ್ಟರ್‌ ಫೈನಲ್‌ನಲ್ಲಿ ಜಯಗಳಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದವು. ಒಡಿಸ್ಸಾ ತಂಡ ತಮಿಳುನಾಡು ತಂಡದ ಎದುರು 3-1 ಗೋಲುಗಳಿಂದ ಜಯಗಳಿಸಿತು. ಪಂದ್ಯದ ಆರಂಭದಿಂದಲೂ ಉತ್ತಮವಾಗಿ ಆಡಿದ ಒಡಿಸ್ಸಾ ತಂಡದ ಆಟಗಾರರು ಸಾಂಘಿಕ ಹೋರಾಟ ನಡೆಸಿ ಗೆಲುವು ದಾಖಲಿಸಿದರು. ಒಡಿಸ್ಸಾ ತಂಡದ ಆಶಿಕ್ ಸಮ್ಮದ್ 2 ಗೋಲು ಗಳಿಸಿದರೆ ಅಮನಾ ಲಕ್ಷ 1 ಗೋಲು ಗಳಿಸಿ ತಂಡದ ಗೆಲುವಿನ ರೂವಾರಿಯಾದರು. ತಮಿಳುನಾಡು ತಂಡದ ಪರಿಯದರ್ಶಿನಿ ಏಕೈಕ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಮಣಿಪುರ ತಂಡವು ಹರಿಯಾಣ ತಂಡದ ವಿರುದ್ಧ 3-1 ಗೋಲುಗಳಿಂದ ಜಯಗಳಿಸಿತು. ಮಣಿಪುರ ತಂಡದ ಬಿಂದ್ಯಲಕ್ಷ್ಮಿ 2 ಕಮಲಾ 1 ಗೋಲು ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಹರಿಯಾಣ ತಂಡದ ಶಶಿ 1 ಗೋಲು ಗಳಿಸಿದರು. ಇದಕ್ಕೂ ಮುನ್ನ ನಡೆದ ಲೀಗ್ ಪಂದ್ಯದಲ್ಲಿ ಒಡಿಸ್ಸಾ ತಂಡವು ದೆಹಲಿಯನ್ನು 5–0ಯಿಂದ ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.