ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ಹೃದ್ರೋಗ ಚಿಕಿತ್ಸಾ ಕೇಂದ್ರ ‘ಕ್ಯಾತ್ ಲ್ಯಾಬ್’ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ₹ 10.89 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಗುರುವಾರ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಮೂಲಕ ಬಹು ವರ್ಷಗಳ ಜಿಲ್ಲೆಯ ಜನರ ಬೇಡಿಕೆಯೊಂದು ಈಡೇರುವ ದಿನಗಳು ಸಮೀಪಿಸಿದಂತಾಗಿವೆ.
ಈ ವಿಷಯ ತಿಳಿಯುತ್ತಲೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಲೋಕೇಶ್ ಅವರು ಗುರುವಾರವೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಈ ಕುರಿತು ಉನ್ನತ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ.
ಎಲ್ಲವೂ ವೇಗವಾಗಿ ನಡೆದರೆ ಮುಂದಿನ 2 ತಿಂಗಳಿನಲ್ಲಿ ಸುಸಜ್ಜಿತವಾದ ‘ಕ್ಯಾತ್ ಲ್ಯಾಬ್’ ಇಲ್ಲಿ ಸಿದ್ಧವಾಗಲಿದೆ. ಈಗಾಗಲೇ ರಾಜ್ಯದ ಗದಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ ಕ್ಯಾತ್ ಲ್ಯಾಬ್ ಆರಂಭವಾಗಿದೆ. ಅಲ್ಲಿನ ಆಸ್ಪತ್ರೆಯ ವೈದ್ಯಾಧಿಕಾರಿಗಳು ಎದುರಿಸಿದ ಸವಾಲುಗಳನ್ನು ಕುರಿತು ಈಗಾಗಲೇ ಇಲ್ಲಿನ ವೈದ್ಯರ ತಂಡ ಹೋಗಿ ಅಧ್ಯಯನ ಮಾಡಿ ಬಂದಿದೆ. ಹಾಗಾಗಿ, ಯಾವುದೇ ಸವಾಲುಗಳಿಲ್ಲದೇ ಕ್ಯಾತ್‌ಲ್ಯಾಬ್ ಸ್ಥಾಪನೆಯಾಗುವ ಸಾಧ್ಯತೆಗಳಿವೆ.
ಇದಕ್ಕಾಗಿ ಟೆಂಡರ್ ಕರೆಯಬೇಕೇ, ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಮಾಡಬೇಕೇ ಎನ್ನುವುದು ಸಹ ಇನ್ನೂ ಅಂತಿಮಗೊಂಡಿಲ್ಲ. ಚರ್ಚೆಯ ನಂತರ ಈ ಕುರಿತು ಅಂತಿಮವಾಗಲಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಲೋಕೇಶ್, ‘ಸಂಪುಟದ ನಿರ್ಧಾರ ಖುಷಿ ತರಿಸಿದೆ. ಬೆಂಗಳೂರಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಇನ್ನಷ್ಟು ವಿವರ ನೀಡುವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.