
ನಾಪೋಕ್ಲು: ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ಪಂದ್ಯದಲ್ಲಿ ಆತಿಥೇಯ ಕುಂಡ್ಯೋಳಂಡ ತಂಡ ಮುಂದಿನ ಸುತ್ತು ಪ್ರವೇಶಿಸುವಲ್ಲಿ ಯಶಸ್ವಿಯಾಯಿತು.
ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ ಆತಿಥೇಯ ಕುಂಡ್ಯೋಳಂಡ ತಂಡವೂ ಉತ್ತಮ ಪ್ರದರ್ಶನ ತೋರಿ 3–2ರ ಅಂತರದಿಂದ ಪುಚ್ಚಿಮಾಡ ವಿರುದ್ಧ ಗೆಲುವು ಸಾಧಿಸಿತು.
ಪಂದ್ಯ ಆರಂಭವಾದ ಕೇವಲ ಹತ್ತೇ ನಿಮಿಷದಲ್ಲಿ ಪುಚ್ಚಿಮಾಡ ಯಶ್ವಿನ್ ಅವರು ಗೋಲಿಸಿದರು. ಇದಕ್ಕೆ ತೀಷ್ಣವಾಗಿಯೇ ಪ್ರತ್ಯುತ್ತರ ತೋರಿದ ಆತಿಥೇಯ ತಂಡವು 13ನೇ ನಿಮಿಷದಲ್ಲಿ ಕುಂಡ್ಯೋಳಂಡ ಪೊನ್ನಪ್ಪ ಗಳಿಸಿದ ಗೋಲಿನಿಂದ ಸಮಬಲ ಸಾಧಿಸಿತು. ಇದಾದ ಮರು ನಿಮಿಷದಲ್ಲೇ ಕುಂಡ್ಯೋಳಂಡ ತಂಡದ ಭುವನ್ ಬೋಪಣ್ಣ ಅವರು ಮತ್ತೊಂದು ಗೋಲು ದಾಖಲಿಸಿ ಎದುರಾಳಿ ತಂಡಕ್ಕೆ ಸೆಡ್ಡು ಹೊಡೆದರು.
ಇದಕ್ಕೆ ಪ್ರತ್ಯುತ್ತರವಾಗಿ 23ನೇ ನಿಮಿಷದಲ್ಲಿ ಪುಚ್ಚಿಮಾಡ ಧೀರಜ್ ಅವರು ಗೋಲು ದಾಖಲಿಸಿ ಸಮಬಲ ಸಾಧಿಸಿದರು. ನಂತರ, ತೀವ್ರ ಜಿದ್ದಾಜಿದ್ದಿನ ಹಣಾಹಣಿಯಲ್ಲಿ 34ನೇ ನಿಮಿಷದಲ್ಲಿ ಕುಂಡ್ಯೋಳಂಡ ತಂಡದ ಪರ ಕಾರ್ಯಪ್ಪ ಗಳಿಸಿದ ಗೋಲು ಗೆಲುವಿಗೆ ಕಾರಣವಾಯಿತು.
ಇನ್ನುಳಿದಂತೆ, ಪಾಲಚಂಡ ತಂಡವು ಬಿಜ್ಜಂಡ ತಂಡದ ವಿರುದ್ಧ 6–0 ಗೋಲುಗಳ ಅಂತರದಿಂದ ಏಕಪಕ್ಷೀಯವಾದ ಗೆಲುವು ಸಾಧಿಸಿತು. ಎದುರಾಳಿ ತಂಡವನ್ನು ಪಾಲಚಂಡ ತಂಡದ ಆಟಗಾರರು ಒಂದೇ ಒಂದು ಗೋಲು ಗಳಿಸದಂತೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ನಂಬುಬುಡಮಂಡ ತಂಡ, ವಾಟೇರಿರ, ಪಾಲೆಯಡ, ಕಲ್ಲೆಂಗಡ, ಚೊಟ್ಟೇರ, ಬಾಚಮಂಡ, ಚೆರುವಾಳಂಡ, ಮುದ್ದಿಯಂಡ, ಮೊಣ್ಣಂಡ, ಕೂಪದಿರ, ಬೊಟ್ಟೋಳಂಡ, ಬೈರಟಿರ, ಕುಪ್ಪಣಮಾಡ, ಚೊಟ್ಟೆಕ್‌ಮಾಡ, ಅದೇಂಗಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.