ADVERTISEMENT

20ರಂದು ಕೊಡಗಿನಲ್ಲಿ ಹುತ್ತರಿ ಆಚರಣೆ

ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆ ಕಟ್ಟುವುದು, ಕದಿರು ತೆಗೆಯುವುದಕ್ಕೆ ಸಮಯ ನಿಗದಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2021, 12:08 IST
Last Updated 6 ನವೆಂಬರ್ 2021, 12:08 IST
ನಾಪೋಕ್ಲು ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ಪುತ್ತರಿ ಹಬ್ಬ ಆಚರಣೆಯ ದಿನವನ್ನು ನಿಶ್ಚಯಿಸಲಾಯಿತು.
ನಾಪೋಕ್ಲು ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಶುಕ್ರವಾರ ಪುತ್ತರಿ ಹಬ್ಬ ಆಚರಣೆಯ ದಿನವನ್ನು ನಿಶ್ಚಯಿಸಲಾಯಿತು.   

ನಾಪೋಕ್ಲು: ಕೊಡಗಿನಲ್ಲಿ ನ.20ರ ಶನಿವಾರ ಹುತ್ತರಿ ಆಚರಣೆ ನಡೆಯಲಿದೆ. ಕೊಡಗಿನ ಕುಲದೈವ ಕಕ್ಕಬ್ಬೆ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲಾಡ್ಚ ಹಬ್ಬ, ಹುತ್ತರಿ ಹಬ್ಬದ ಶುಭ ದಿನ ಹಾಗೂ ಘಳಿಗೆಯನ್ನು ದೇವಾಲಯದ ಜೋತಿಷಿ ಅಮ್ಮಂಗೇರಿ ಕಣಿಯರ ಶಶಿಕುಮಾರ್ ನಿಗದಿಪಡಿಸಿದರು.

20ರಂದು ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಕಲಾಡ್ಚ ಹಬ್ಬ ನಡೆಯಲಿದೆ. ಅಂದೇ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ಹುತ್ತರಿ ಹಬ್ಬ ನಡೆಯಲಿದ್ದು, ದೇವಾಲಯದಲ್ಲಿ ರಾತ್ರಿ 7.05ಕ್ಕೆ ನೆರೆ ಕಟ್ಟುವುದು, 8.05ಕ್ಕೆ ಕದಿರು ತೆಗೆಯುವುದು ಮತ್ತು 9.05ಕ್ಕೆ ಪ್ರಸಾದ ಭೋಜನಕ್ಕೆ ಸಮಯ ನಿಗದಿಪಡಿಸಲಾಗಿದೆ.

ಸಾರ್ವಜನಿಕರಿಗೆ (ನಾಡ್ ಪೋದ್) ಸಂಜೆ 7.35ಕ್ಕೆ ನೆರೆ ಕಟ್ಟುವುದು, 8.35ಕ್ಕೆ ಕದಿರು ತೆಗೆಯುವುದು ಮತ್ತು 9.35ಕ್ಕೆ ಸಹ ಭೋಜನಕ್ಕೆ ವೇಳೆ ನಿಗದಿಪಡಿಸಲಾಗಿದೆ.‌

ದೇವಾಲಯದ ದೇವತಕ್ಕ ಪರದಂಡ ಡಾಲಿ ಮಾತನಾಡಿ, ‘ಇಗ್ಗುತ್ತಪ್ಪ ದೇವರ ಆದಿ ಸ್ಥಳ ಮಲ್ಮದಲ್ಲಿ ತಕ್ಕ ಮುಖ್ಯಸ್ಥರೊಂದಿಗೆ ಸೇರಿ ದೇಶ ಕಟ್ಟು ವಿಧಿಸಲಾಗಿದೆ. ನ.19ರಂದು ದೇವಾಲಯದಲ್ಲಿ ಕಲಾಡ್ಚ ಹಬ್ಬ ನಡೆದು ಎತ್ತೇರಾಟ, ದೇವರ ಮೂರ್ತಿಯೊಂದಿಗೆ ಆದಿ ಸ್ಥಳ ಮಲ್ಮಕ್ಕೆ ತೆರಳಿ ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಕಟ್ಟು ಸಡಿಲಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಈ ಸಮಯದಲ್ಲಿ ಹಸಿರು ಮರ ಕಡಿಯುವುದು, ರಕ್ತಪಾತ, ಪ್ರಾಣಿ ಹಿಂಸೆ, ಮಧು ಮಾಂಸ ಸೇವನೆ, ಸಭೆ–ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಭಕ್ತರು ದೇವರ ಕಟ್ಟು ಕಟ್ಟಳೆಗಳನ್ನು ಸರಿಯಾಗಿ ಪಾಲಿಸಬೇಕು’ ಅವರು ಮನವಿ ಮಾಡಿದರು.

‘ಎಲ್ಲಾ ಭಕ್ತರು ದೇವರ ಕಟ್ಟು ಕಟ್ಟಳೆಗಳನ್ನು ಸರಿಯಾಗಿ ಪಾಲಿಸಬೇಕು. ಕಲಾಡ್ಚ ಹಬ್ಬಕ್ಕೆ ಎಲ್ಲರೂ ಸಾಂಪ್ರದಾಯಿಕ ಉಡುಪು ಧರಿಸಬೇಕು’ ಎಂದು ಮನವಿ ಮಾಡಿದರು.

ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ, ಖಜಾಂಚಿ ನಂಬಡಮಂಡ ಸುಬ್ರಮಣಿ, ತಕ್ಕ ಮುಖ್ಯಸ್ಥರಾದ ಪರದಂಡ ವಿಠಲ, ಸದಾ ನಾಣಯ್ಯ, ನಂಬಡಮಂಡ ಶಂಭು ನಂಜಪ್ಪ, ಕೇಟೋಳಿರ ಕುಟ್ಟಪ್ಪ, ಕೇಟೋಳಿರ ಶಮ್ಮಿ, ಬಾಚಮಂಡ ಲವ ಚಿಣ್ಣಪ್ಪ, ಕುಟ್ಟಂಜೆಟ್ಟಿರ ಶ್ಯಾಮ್, ಕೇಟೋಳಿರ ಗಪ್ಪು ಗಣಪತಿ, ಉದಿಯಂಡ ಕುಟ್ಟಪ್ಪ, ಪಾಂಡಂಡ ನರೇಶ್, ಕಣಿಯರ ನಾಣಯ್ಯ, ಹರೀಶ್, ಪಾರುಪತ್ತೆಗಾರ ಪರದಂಡ ತಮ್ಮಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.