ಸೋಮವಾರಪೇಟೆ: ‘ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬೆಳಿಗ್ಗೆ 7ರಿಂದಲೇ ಅಕ್ರಮವಾಗಿ ಮದ್ಯ ಮಾರಾಟವನ್ನು ಖಾಸಗಿ ಅಂಗಡಿ ಮತ್ತು ಮನೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ಗಮನಕ್ಕೆ ತಂದರೂ ನಿಯಂತ್ರಣ ಸಾಧ್ಯವಾಗಿಲ್ಲ’ ಎಂಬ ಆರೋಪ ಇಲ್ಲಿನ ಕುಂದು–ಕೊರತೆ ಸಭೆಯಲ್ಲಿ ಕೇಳಿಬಂತು.
ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಮುದ್ದು ಮಾದೇವ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು-ಕೊರತೆ ಸಭೆಯಲ್ಲಿ ‘ಪಟ್ಟಣದ ಖಾಸಗಿ ಬಸ್ ನಿಲ್ದಾಣ, ಬಜೆಗುಂಡಿ, ಬಾಣಾವಾರ, ಅಬ್ಬೂರುಕಟ್ಟೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಮದ್ಯ ಮಾರಾಟ ಹೆಚ್ಚಾಗಿದೆ. ಪರಿಶಿಷ್ಟ ಪಂಗಡದವರೇ ಇರುವ ಸ್ಥಳಗಳಲ್ಲಿ ಹೆಚ್ಚು ಮದ್ಯ ಮಾರಾಟವಾಗುತ್ತಿದೆ. ಗಾಂಧಿನಗರದಲ್ಲಿ ರಾತ್ರಿ 10ರ ನಂತರ ಹೆಚ್ಚು ಮದ್ಯವನ್ನು ಸ್ಥಳೀಯರು ಮತ್ತು ಹೊರಗಿನ ಯುವಕರು ತಂದು ಮಾರಾಟ ಮಾಡುತ್ತಿದ್ದಾರೆ. ಕೂಡಲೇ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಚೌಡ್ಲು ಗ್ರಾಮದ ಪ್ರತಾಪ್ ಮನವಿ ಮಾಡಿದರು.
‘ಪಟ್ಟಣದ ಜೂನಿಯರ್ ಕಾಲೇಜು ಬಳಿ ಮದ್ಯ ಮತ್ತು ಗಾಂಜಾ ಮಾರಾಟ ಮಾಡಲಾಗುತ್ತಿದೆ. ಸಂಜೆಯಾಗುತ್ತಲೇ ಯುವಕರ ಗುಂಪೇ ಅಲ್ಲಿರುತ್ತೆ. ಪೊಲೀಸರು ಇದನ್ನು ನಿಯಂತ್ರಿಸಬೇಕು’ ಎಂದು ಹಣಕೋಡು ಗ್ರಾಮದ ಮಹೇಶ್ ಆಗ್ರಹಿಸಿದರು.
‘ಬಾಣಾವಾರ, ಎರಪಾರೆ ಗ್ರಾಮ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಹಾಡಿ ಮತ್ತು ಪರಿಶಿಷ್ಟರ ಕಾಲೊನಿಗಳ ಬಳಿಯೇ ಮದ್ಯ ಅಕ್ರಮ ಮಾರಾಟ ನಡೆಯುತ್ತಿದ್ದು, ಬೆಳಿಗ್ಗೆಯಿಂದಲೇ ಮದ್ಯ ಸಿಗುತ್ತಿದ್ದು, ಮೊದಲು ಇಲ್ಲಿ ನಿಯಂತ್ರಿಸಬೇಕಿದೆ’ ಎಂದು ಬೋವಿ ಸಮಾಜದ ಜಿಲ್ಲಾಧ್ಯಕ್ಷ ಸುಜಿತ್ ತಿಳಿಸಿದರು.
‘ಈಗಾಗಲೇ 25 ಕಡೆ ಇಲಾಖೆ ದಾಳಿ ನಡೆಸಿದ್ದು, ಕುಡಿದು ವಾಹನ ಚಾಲನೆ ಮಾಡಿದ 75 ಜನರ ವಿರುದ್ಧ ದೂರು ದಾಖಲಿಸಲಾಗಿದೆ. ಮದ್ಯ ಮಾರಾಟ ಮತ್ತು ಮಾರಲು ಸರಬರಾಜು ಮಾಡಿದ ಇಬ್ಬರ ಮೇಲೂ ದೂರುಗಳನ್ನು ದಾಖಲಿಸಲಾಗುತ್ತಿದೆ. ಈಗಾಗಲೇ ಮದ್ಯ ಸರಬರಾಜು ಮಾಡಿದ ಅಂಗಡಿ ಮಾಲೀಕರು, ಮಾರಾಟ ಮಾಡಿದವರ ಮೇಲೂ ದೂರು ದಾಖಲಾಗಿದೆ. ಅಂಗಡಿಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುವುದು ಕಾನೂನುಬಾಹಿರ. ಎಲ್ಲೆಡೆ ಸಾರ್ವಜನಿಕರು ನಮ್ಮೊಂದಿಗೆ ಕೈ ಜೋಡಿಸದ ಹೊರತು, ಯಾವುದೇ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಅಸಾಧ್ಯ’ ಎಂದು ಇನ್‌ಸ್ಪೆಕ್ಟರ್ ಮುದ್ದು ಮಾದೇವ ತಿಳಿಸಿದರು.
ಪಟ್ಟಣದಲ್ಲಿ ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಯಾಗುತ್ತಿದೆ. ಗೂಡ್ಸ್ ವಾಹನಗಳು ಮತ್ತು ಆಟೊಗಳನ್ನು ತಾಲ್ಲೂಕು ಕಚೇರಿ ಬಳಿಯಲ್ಲಿ ಅಡ್ಡಾದಿಡ್ಡಿ ನಿಲ್ಲಿಸುತ್ತಿದ್ದು, ವ್ಯವಸ್ಥಿತವಾಗಿ ವಾಹನಗಳನ್ನು ನಿಲ್ಲಿಸಲು ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ವಕೀಲ ಬಿ.ಈ. ಜಯೇಂದ್ರ ಆಗ್ರಹಿಸಿದರು.
‘ಕರ್ಕಳ್ಳಿಯಲ್ಲಿ ರಾತ್ರಿ 10ರ ನಂತರ ಮದ್ಯಪಾನ ಮಾಡಿ ಗಲಾಟೆಗಳು ಹೆಚ್ಚಾಗುತ್ತಿವೆ. ಎಲ್ಲೆಡೆ ಇಲಾಖೆಯ 112 ವಾಹನವನ್ನು ಗಸ್ತು ವ್ಯವಸ್ಥೆ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ಗಲಾಟೆಗಳನ್ನು ನಿಯಂತ್ರಿಸಲು ಸಾಧ್ಯ’ ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮೋಹಿನಿ ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಎಚ್.ಎ. ನಾಗರಾಜು, ಚೌಡ್ಲು ಗ್ರಾಮದ ಚಿಂತು, ಮಂಜುನಾಥ್, ಶಾಂತಳ್ಳಿ ಪ್ರತಾಪ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.