ADVERTISEMENT

ಅಕ್ರಮವಾಗಿ ಮರ ಕಡಿದು ಸಾಗಣೆ: ಆರೋಪಿ ಬಂಧನ

ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿಗೆ ಯತ್ನ: ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:57 IST
Last Updated 18 ಡಿಸೆಂಬರ್ 2025, 5:57 IST
ಮೀಸಲು ಅರಣ್ಯದಲ್ಲಿ ಕಳವು ಮಾಡಿದ್ದ ತೇಗದ ನಾಟಗಳು ಮತ್ತು ವಾಹನ ವಶಪಡಿಸಿಕೊಂಡಿರುವ ಸೋಮವಾರಪೇಟೆ ವಲಯ ಅರಣ್ಯ ಸಿಬ್ಬಂದಿ
ಮೀಸಲು ಅರಣ್ಯದಲ್ಲಿ ಕಳವು ಮಾಡಿದ್ದ ತೇಗದ ನಾಟಗಳು ಮತ್ತು ವಾಹನ ವಶಪಡಿಸಿಕೊಂಡಿರುವ ಸೋಮವಾರಪೇಟೆ ವಲಯ ಅರಣ್ಯ ಸಿಬ್ಬಂದಿ   

ಸೋಮವಾರಪೇಟೆ: ತಾಲ್ಲೂಕಿನ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ತೇಗ ಸೇರಿದಂತೆ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸುತ್ತಿದ್ದ ಮರಗಳ್ಳರ ತಂಡವನ್ನು ಪತ್ತೆಹಚ್ಚುವಲ್ಲಿ ವಲಯ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಸೋಮವಾರಪೇಟೆ ವಲಯದ ಹುದುಗೂರು ಶಾಖಾ ವ್ಯಾಪ್ತಿಯ ಐಗೂರು ಗ್ರಾಮದ ಕಾಜೂರು ಅರಣ್ಯ ಪ್ರದೇಶದಲ್ಲಿ ತೇಗದ ಮರಗಳನ್ನು ಕಡಿದು ನಾಟಗಳಾನ್ನಾಗಿ ಪರಿವರ್ತಿಸಿ ಸಾಗಿಸಲು ಬೊಲೆರೋ ಪಿಕಪ್ ವಾಹನಕ್ಕೆ ತುಂಬಿಸುತ್ತಿದ್ದ ಸಂದರ್ಭ ಅರಣ್ಯ ಅಧಿಕಾರಿಗಳು ಈಚೆಗೆ ದಾಳಿ ನಡೆಸಿದ್ದಾರೆ.

ಅರೋಪಿಗಳು ಅರಣ್ಯ ಸಿಬ್ಬಂದಿ ಮೇಲೆ ದಾಳಿಗೆ ಪ್ರಯತ್ನಿಸಿದ ಸಂದರ್ಭ, ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ, ಯಡವಾರೆ ಗ್ರಾಮದ ಬಿ.ಜೆ.ಸಂತೋಷ್ ಎಂಬ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿದ್ದಾರೆ. ಉಳಿದ ಅರೋಪಿಗಳಾದ ಯಡವಾರೆ ಗ್ರಾಮದ ಬಿ.ಆರ್.ಆಶ್ವಥ್, ಬಿ.ವಿ.ನಿತೀನ್, ಕೊಡ್ಲಿಪೇಟೆ ಅರಕನಹಳ್ಳಿಯ ಸಯ್ಯದ್ ಜಹೀರ್, ಕುಶಾಲನಗರ ರಸಲ್ಪುರದ ವಿ.ಎಂ.ಷರೀಪ್, ಐಗೂರು ಗ್ರಾಮದ ಅಕ್ಷಯ್ ನಾಪತ್ತೆಯಾಗಿದ್ದಾರೆ. ಮರ ಸಾಗಾಟ ಮಾಡಿದ ವಾಹನದೊಂದಿಗೆ ತೇಗದ ನಾಟಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ತಲೆಮರೆಸಿಕೊಂಡಿರುವ ಅರೋಪಿಗಳನ್ನು ಬಂಧಿಸಲು ಆರ್‌ಎಫ್‌ಒ ಶೈಲೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿದೆ.

ಬುಧವಾರ ಘಟನಾ ಸ್ಥಳಕ್ಕೆ ಸಿಸಿಎಫ್ ಸೋನಾಲ್, ಡಿಎಫ್ಒ ಅಭಿಷೇಕ್, ಎಸಿಎಫ್ ಎ.ಎ.ಗೋಪಾಲ್, ಅರಣ್ಯ ಸಂಚಾರಿ ದಳದ ಎಸಿಎಫ್ ಗಾನಶ್ರೀ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಯಚರಣೆಯಲ್ಲಿ ಆರ್‌ಎಫ್ಒ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಒ ಚಂದ್ರೇಶ್, ಸಿಬ್ಬಂದಿ ಚಂದ್ರಶೇಖರ್, ರವಿ ಕುಮಾರ್, ಅಂತೋಣಿ, ದಿವಾಕರ್, ಸಚಿನ್, ಅಯ್ಯಪ್ಪ, ಜೀವನ್, ಪ್ರಜ್ವಲ್, ಆನೆ ಕಾರ್ಯಪಡೆಯ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.