ADVERTISEMENT

ಗೌಡ ಸಮಾಜ: ನವೀಕೃತ ಕಟ್ಟಡ ಉದ್ಘಾಟನೆ ಫೆ.4ಕ್ಕೆ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಭಾಗಿ

​ಪ್ರಜಾವಾಣಿ ವಾರ್ತೆ
Published 28 ಜನವರಿ 2021, 13:28 IST
Last Updated 28 ಜನವರಿ 2021, 13:28 IST

ಮಡಿಕೇರಿ: ನಗರದ ಕೊಡಗು ಗೌಡ ಸಮಾಜದ ನವೀಕೃತ ಕಟ್ಟಡ, ನೂತನ ಸಭಾಂಗಣ ಉದ್ಘಾಟನೆ ಫೆ.4ರಂದು ನೆರವೇರಲಿದೆ ಎಂದು ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ ತಿಳಿಸಿದರು.

ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1987ರಲ್ಲಿ ಹಲವರ ನೆರವಿನಿಂದ ಗೌಡ ಸಮಾಜದ ಕಟ್ಟಡ ನಿರ್ಮಿಸಲಾಗಿತ್ತು. ಕಟ್ಟಡ ನಿರ್ಮಾಣಗೊಂಡು ಹಲವು ಕರ್ಷ ಕಳೆದಿದ್ದರಿಂದ ಶಿಥಿಲಾವಸ್ಥೆಯಲ್ಲಿತ್ತು. ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ₹ 3 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ನೂತನ ಸಭಾಂಗಣ ಉದ್ಘಾಟಿಸಲಿದ್ದಾರೆ. ನೂತನ ಸಭಾಂಗಣದ ವೇದಿಕೆಯನ್ನು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣಗೌಡ, ನವೀಕೃತ ಸಭಾಂಗಣವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವರನ ಕೊಠಡಿಯನ್ನು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ವಧುವಿನ ಕೊಠಡಿಯನ್ನು ಸಂಸದ ಪ್ರತಾಪ ಸಿಂಹ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಶಾಸಕ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್‌ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ರಾಜ್ಯ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್, ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಒಕ್ಕಲಿಗ ಸಮಾಜದ ಅಧ್ಯಕ್ಷ ಎಸ್.ಎಂ.ಚಂಗಪ್ಪ, ಆರ್ಕಿಟೆಕ್ಟ್ ಮುಕ್ಕಾಟಿ ಮನೋಜ್ ಕುಮಾರ್ ಭಾಗವಹಿಸಲಿದ್ದಾರೆ ಎಂದರು.

ಉಪಾಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಮಾತನಾಡಿ, ನೂತನ ಕಟ್ಟಡದ ಮುಖ್ಯದ್ವಾರಕ್ಕೆ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಕೃತಿ ಸಾರುವ ವಿಚಾರಗಳನ್ನು ಭವನದಲ್ಲಿ ರೂಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕಾರ್ಯದರ್ಶಿ ಕೋಡಿ ಚಂದ್ರಶೇಖರ್, ಖಜಾಂಚಿ ಕುಯ್ಯಮುಡಿ ಕೆ.ವಸಂತ್, ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಎಂ.ಮನೋಹರ್, ನಿರ್ದೇಶಕ ಕೋಳುಮುಡಿಯನ ಆರ್.ಅನಂತ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.