ADVERTISEMENT

ಮಡಿಕೇರಿ | ಇನ್‌ಸ್ಟಾಗ್ರಾಂನಲ್ಲಿ ಅನುಚಿತ ಸಂದೇಶ: ಆರೋಪಿ ಬಂಧನ

ಕೊಡಗು ಜಿಲ್ಲಾ ಪೊಲೀಸ್ ಘಟಕದ ಸಾಮಾಜಿಕ ಜಾಲತಾಣ ನಿರ್ವಹಣೆ ಮತ್ತು ಕಣ್ಗಾವಲು ತಂಡದಿಂದ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 4:28 IST
Last Updated 31 ಆಗಸ್ಟ್ 2025, 4:28 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮಡಿಕೇರಿ: ಇನ್‌ಸ್ಟಾಗ್ರಾಂನಲ್ಲಿ ಅನುಚಿತ ಸಂದೇಶ ಹಾಕಿದ್ದ ಆರೋಪದ ಮೇರೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ನಾಗಪ‍್ಪ ಹನುಮಂತ ಲಮಾಣಿ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಈತ ಸುಲಭದಲ್ಲಿ ಹಣ ಸಂಪಾದಿಸುವ ಉದ್ದೇಶದಿಂದ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಮಡಿಕೇರಿಯಲ್ಲಿ ಹುಡುಗಿ, ಆಂಟಿ ಜೊತೆ ಡೇಟಿಂಗ್ ಮಾಡಲಿಕ್ಕೆ ಸರ್ವೀಸ್ ಬೇಕಾದರೆ ಕರೆ ಮಾಡಿ’ ಎಂದು ತನ್ನ ಮೊಬೈಲ್ ಸಂಖ್ಯೆ ನೀಡಿದ್ದ. ಇದಕ್ಕೆ ಮಡಿಕೇರಿ ಬಸ್‌ನಿಲ್ದಾಣದ ವಿಡಿಯೊ ಬಳಸಿಕೊಂಡಿದ್ದ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಆಕ್ಷೇಪಗಳು ಹರಿದಾಡಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಪ್ರಕರಣದ ಸಂಬಂಧ ಪೊಲೀಸರೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ಡಿವೈಎಸ್‌ಪಿ ಸೂರಜ್, ಸಿಪಿಐ ಪಿ.ಕೆ.ರಾಜು, ಪಿಎಸ್‌ಐ ಎಸ್.ಎಸ್.ಅನ್ನಪೂರ್ಣ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದರು ಎಂದು ಅವರು ಹೇಳಿದರು.

ಆರೋಪಿ ಪತ್ತೆಯಾಗಿದ್ದು ಹೇಗೆ?: ಈತ ಮೂಲತಃ ಬಾಗಲಕೋಟೆ ಜಿಲ್ಲೆಯವ. ಮಡಿಕೇರಿ ಮಾತ್ರವಲ್ಲ ರಾಜ್ಯದ ಇತರೆ ಜಿಲ್ಲೆಗಳ ಕುರಿತೂ ಈ ರೀತಿ ವಿಡಿಯೊ ಹಾಕಿ, ಸಂದೇಶ ಹಾಕಿದ್ದ. ಮೊಬೈಲ್‌ಗೆ ಕರೆ ಮಾಡಿದವರಿಂದ ಹಣ ಸ್ವೀಕರಿಸಿ ಸುಮ್ಮನಾಗುತ್ತಿದ್ದ. ಈ ಬಗೆಯಲ್ಲಿ ಈತ ವಂಚನೆ ಮಾಡುತ್ತಿದ್ದ. ಈ ಮೊದಲು ಈತ ಈ ತರಹ ಇತರೆ ಜಾಹೀರಾತುಗಳಿಗೂ ಹಣ ಹಾಕಿ ಮೋಸ ಹೋಗಿದ್ದ. ಈ ಬಗೆಯಲ್ಲಿ ತಾನೂ ಮಾಡಿದರೆ ಸುಲಭದಲ್ಲಿ ಹಣ ಸಂಪಾದಿಸಬಹುದು ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದ. ಬೇರೆ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿರಲಿಲ್ಲ. ಮಡಿಕೇರಿಯಲ್ಲಿ ಮಾತ್ರವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈತ ತನ್ನದೇ ಮೊಬೈಲ್ ಸಂಖ್ಯೆ ನೀಡಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಮೊಬೈಲ್‌ ಸಂಖ್ಯೆಯ ಜಾಡು ಹಿಡಿದರು. ಅದು ಆರೋಪಿಯ ಹೆಸರಲ್ಲೇ ಇತ್ತು. ಆತನ ಮೊಬೈಲ್ ಸಂಖ್ಯೆಯ ಲೊಕೇಶನ್ ಆಧರಿಸಿ ನೇರ ಗ್ರಾಮಕ್ಕೆ ಲಗ್ಗೆ ಇಟ್ಟರು. ತಕ್ಷಣ ಆರೋಪಿಯನ್ನು ಹಾಗೂ ಆತನ ಮೊಬೈಲ್‌ ಅನ್ನು ವಶಕ್ಕೆ ಪಡೆದು ಕರೆ ತಂದರು. ಈತ ಒಮ್ಮೆ ಮಾತ್ರ ಮಡಿಕೇರಿಗೆ ಬಂದಿದ್ದ ಎಂದು ಮೂಲಗಳು ಹೇಳಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.