ಸೋಮವಾರಪೇಟೆ: ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯಲು ಪೂರಕ ಹವಾಮಾನ ಇದ್ದು, ಇಲ್ಲಿಯ ಕಾಫಿ ಸ್ವಾದಿಷ್ಟವಾಗಿದ್ದು, ಎಲ್ಲೆಡೆ ಹೆಸರುಗಳಿಸಿದೆ ಎಂದು ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಬಿಸ್ವಾಸ್ ಹೇಳಿದರು.
ಕೊಡಗು ವಿಮೆನ್ಸ್ ಕಾಫೀ ಅವೇರ್ನೆಸ್ ಸಂಸ್ಥೆಯ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದಲ್ಲಿ ಚಿಕ್ಕಬಸಪ್ಪ ಕ್ಲಬ್ ಮುಂಭಾಗದಲ್ಲಿ ಶನಿವಾರ ನಡೆದ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡಗು ಕಾಫಿ ಬೆಳೆಯಲು ಉತ್ತಮ ಪರಿಸರ ಹೊಂದಿದ್ದು, ನೆರಳಿನಲ್ಲಿ ಬೆಳೆಯುವ ಕಾಫಿ ಉತ್ತಮ ಸ್ವಾದದೊಂದಿಗೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಬೆಳಿಗ್ಗೆ ಮತ್ತು ಸಂಜೆ ಕಾಫಿ ಸೇವನೆಯಿಂದ ಯಾವುದೇ ಅರೋಗ್ಯ ಸಮಸ್ಯೆಯಾಗದು. ಮೊದಲು ಕಾಫಿಯನ್ನು ದೇಶದಲ್ಲಿ ಬಳಕೆ ಹೆಚ್ಚಿಸಿದಲ್ಲಿ ಮಾತ್ರ ಬೆಳೆಗಾರರಿಗೆ ಅನುಕೂಲವಾಗುವುದು ಎಂದರು.
ಸಂಸ್ಥೆಯ ಜಂಟಿ ಕಾರ್ಯದರ್ಶಿ ರಾಣಿ ನರೇಂದ್ರ ಮಾತನಾಡಿ, ಭಾರತದ ಕಾಫಿಗೆ ಮೊದಲು ಸ್ಥಳೀಯವಾಗಿ ಮನ್ನಣೆ ದೊರಕಿಸುವ ಮೂಲಕ ಬಳಕೆದಾರರನ್ನು ಹೆಚ್ಚಿಸುವ, ಕಾಫಿ ಸೇವನೆಯನ್ನು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಚಿಕ್ಕಬಸಪ್ಪ ಕ್ಲಬ್ ಅಧ್ಯಕ್ಷ ಮಹೇಶ್ ಚಾಲನೆ ನೀಡಿದರು. ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ, ಪೊಲೀಸ್ ಠಾಣೆ, ಆಟೊ ನಿಲ್ದಾಣ ಸೇರಿದಂತೆ ಸಾರ್ವಜನಿಕರಿಗೆ ಸಂಸ್ಥೆಯ ಮಹಿಳಾ ಕಾಫಿ ಬೆಳೆಗಾರರು 750 ಕಪ್ ಕಾಫಿಯನ್ನು ಉಚಿತವಾಗಿ ವಿತರಿಸಿದರು.
ಈ ಸಂದರ್ಭ ಮಡಿಕೇರಿಯ ಕಾಫಿ ಬೆಳೆಗಾರರ ಸಂಘದ ಶ್ಯಾಮ್ ಪೊನ್ನಪ್ಪ, ಅನುರಾಧ ವಿಕ್ರಂ, ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ತನ್ಮಯಿ ಪ್ರವೀಣ್ ಮತ್ತು ಪದಾಧಿಕಾರಿಗಳು, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಾರ್ಯದರ್ಶಿದ ಜ್ಯೋತಿ ಶುಭಾಕರ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.