ಶನಿವಾರಸಂತೆ: ಇಲ್ಲಿನ ಗುಡುಗಳಲೆ ಜಯದೇವ ಜಾನುವಾರು ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ₹2.5 ಲಕ್ಷದ ಹಳ್ಳಿಕಾರ್ ತಳಿಯ ಎತ್ತುಗಳು. ಕೃಷಿ ಉತ್ಪನ್ನ ಪ್ರದರ್ಶನದಲ್ಲಿ 7 ಕೆ.ಜಿ. ತೂಕದ ಶುಂಠಿ ಗೆಡ್ಡೆ ಎಲ್ಲರ ಗಮನ ಸೆಳೆದವು.
ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಆಗಮಿಸಿದ್ದು, ಸಾರ್ವಜನಿಕರು ಇವುಗಳನ್ನು ವೀಕ್ಷಿಸಿ ಸಂಭ್ರಮಿಸಿದರು. ಬಾಣಾವರ ಗ್ರಾಮದ ಬಿ.ಕೆ.ಮಲ್ಲಿಕಾರ್ಜುನ ತಮ್ಮೇಗೌಡ, ರಘು ಸೇರಿ 2 ಹಳ್ಳಿಕಾರ್ ಎತ್ತುಗಳನ್ನು ಜಾತ್ರಾ ಮೈದಾನಕ್ಕೆ ತಂದಿದ್ದರು. ಹಾಸನ ಜಿಲ್ಲೆಯ ನಾಗನಹಳ್ಳಿ ಉಚ್ಚಂಗಿ ಗ್ರಾಮದ ಅಶೋಕ್ 2 ಎಮ್ಮೆ , ಕೋಣ, ಯಸಳೂರು ನಾಗರಾಜ್, ಕುಮಾರ್, ಹನಸೆ ಗ್ರಾಮದ ಮಂಜುನಾಥ್ ತಮ್ಮ ಮನೆಗಳಿಂದ ದನಗಳನ್ನು ತಂದು ಜಾತ್ರಾ ಮೈದಾನದಲ್ಲಿ ತಂದಿದ್ದರು. ಒಟ್ಟು 17 ಜಾನುವಾರುಗಳು ಜಾತ್ರೆಯ ಬೆರಗನ್ನು ಹೆಚ್ಚಿಸಿದವು.
ಶನಿವಾರಸಂತೆಯ ಕೆರೆಹಳ್ಳಿ ಗ್ರಾಮದ ಮಹೇಂದ್ರ ಅವರ ಎಚ್.ಎಸ್.ಹೈಬ್ರೀಡ್ ತಳಿಯ 2 ವರ್ಷದ ಹೋರಿ ಜಾತ್ರೆಯಲ್ಲಿ ಆಕರ್ಷಣೆ ಎನಿಸಿದ್ದವು. ಬಾಣವಾರದ ರಘು ಅವರ ಹಳ್ಳಿಕಾರ್ ಎತ್ತುಗಳಿಗೆ ₹ 2.5 ಲಕ್ಷ ಮಾರಾಟ ಬೆಲೆ ಇಟ್ಟಿದ್ದರು.
ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ.ಸತೀಶ್, ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರಾದ ಎಸ್.ಪಿ.ಧರ್ಮರಾಜ್ ಪಶು ವೈದ್ಯಕೀಯ ಪರಿವೀಕ್ಷಕ ಮೊಹಮ್ಮದ್ ಸರ್ದಾರ್ ಪಾಷಾ ಜಾನುವಾರುಗಳನ್ನು ಪರೀಕ್ಷಿಸಿದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಚನ್ನರಾಯಪಟ್ಟಣದ ಸ್ವಯಂ ಪ್ರೇರಿತ ರಕ್ತ ಕೇಂದ್ರ ಆಯೋಜಿಸಿತ್ತು. ವೈದ್ಯಾಧಿಕಾರಿಗಳು ರಕ್ತದೊತ್ತಡ, ಮಧುಮೇಹ ಪರೀಕ್ಷೆ, ನೇತ್ರ ತಪಾಸಣೆ ಮೊದಲಾದ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ವೈದ್ಯಾಧಿಕಾರಿಗಳಾದ ಡಾ.ಬಿ.ಸಾಕ್ಷಿ, ಡಾ.ಉಮಾರ್ ಫಾರೂರ್, ಸಿಬ್ಬಂದಿ ಭರತ್, ಚೈತ್ರಾ, ಹೇಮಾ, ಭುವನ ರೋಗಿಗಳ ತಪಾಸಣೆ ನಡೆಸಿದರು.
7 ಕೆ.ಜಿ. ಶುಂಠಿ!
ಜಾತ್ರಾ ದಿನದ ಅಂಗವಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಪ್ರದರ್ಶನಕ್ಕಿರಿಸಿದ್ದರು. ಭರತ್ ಅವರು ಇಟ್ಟಿದ್ದ 7 ಕೆ.ಜಿ. ತೂಕದ ಶುಂಠಿ ಆಕರ್ಷಣೀಯವಾಗಿತ್ತು. ಸುವರ್ಣ ಗೆಡ್ಡೆ ಬೃಹತ್ ಗಾತ್ರದ ಹಲಸಿನಕಾಯಿ ನೇಂದ್ರ ಬಾಳೆಗಳನ್ನು ನೋಡಿ ಸಾರ್ವಜನಿಕರು ಸಂತಸಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.