ADVERTISEMENT

ಏದುಸಿರು ಬಿಡುತ್ತಿವೆ ಕನ್ನಡ ಶಾಲೆಗಳು

ಈ ವರ್ಷ 6 ಕನ್ನಡ ಶಾಲೆಗಳಲ್ಲಿ ಶೂನ್ಯ ದಾಖಲಾತಿ

ಕೆ.ಎಸ್.ಗಿರೀಶ್
Published 1 ನವೆಂಬರ್ 2025, 5:02 IST
Last Updated 1 ನವೆಂಬರ್ 2025, 5:02 IST

ಮಡಿಕೇರಿ: ಕನ್ನಡ ಶಾಲೆಗಳು ಕೊಡಗು ಜಿಲ್ಲೆಯಲ್ಲಿ ಉಳಿವಿಗಾಗಿ ಏದುಸಿರು ಬಿಡುತ್ತಿವೆ. ಹೆಚ್ಚುತ್ತಿರುವ ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಶಾಲೆಗಳು ಅವನತಿಯ ಹಾದಿಯತ್ತ ಸಾಗುತ್ತಿವೆ.

ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳೂ ವಿದ್ಯಾರ್ಥಿ ಕೊರತೆಯನ್ನು ಎದುರಿಸುತ್ತಿದ್ದು, ಉಳಿವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ‘ಈಗಾಗಲೇ 12ಕ್ಕೂ ಹೆಚ್ಚು ಕನ್ನಡ ಅನುದಾನಿತ ಶಾಲೆಗಳೂ ಮುಚ್ಚಿವೆ’ ಎಂದು ಕೊಡಗು ಜಿಲ್ಲಾ ಅನುದಾನಿತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ನಾಗರಾಜ ಹೇಳುತ್ತಾರೆ.

ಗುಡ್ಡಗಾಡು ಪ್ರದೇಶವಾಗಿರುವ, ವಲಸೆ ಕಾರ್ಮಿಕರ ಸಂಖ್ಯೆಯೇ ಅತ್ಯಧಿಕವಾಗಿರುವ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಕೊಡಗು ಜಿಲ್ಲೆ ಕೇರಳ ಗಡಿ ಭಾಗದಲ್ಲಿದೆ. ಇಲ್ಲಿ ಕನ್ನಡವಲ್ಲದೇ ಇತರೆ ಭಾಷೆಗಳೂ ಅಷ್ಟೇ ಪ್ರಾಮುಖ್ಯತೆಯನ್ನೂ ಗಳಿಸಿವೆ. ಇಂತಹ ಜಿಲ್ಲೆಯಲ್ಲಿ ಕನ್ನಡ ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ.

ADVERTISEMENT

2014ರಿಂದ ಇಲ್ಲಿಯವರೆಗೆ ಒಟ್ಟು 46 ಸರ್ಕಾರಿ ಕನ್ನಡ ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ಸರ್ಕಾರಿ ಶಾಲೆಗಳ ಉಳಿವಿಗೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಮತ್ತಷ್ಟು ಶಾಲೆಗಳು ಶಾಶ್ವತವಾಗಿಯೇ ಬಾಗಿಲು ಹಾಕುವ ಆತಂಕ ಎದುರಾಗಿದೆ.

ಕಳೆದ 5 ವರ್ಷಗಳಲ್ಲಿ ಒಟ್ಟು 25 ಶಾಲೆಗಳಲ್ಲಿ ಶೂನ್ಯ ದಾಖಲಾಗಿದೆ. ಶಾಲೆಗಳು ಉಳಿಯುವುದೇ ಮುಂದೆ ಕಷ್ಟಕರವಾಗಿ ಪರಿಣಮಿಸುವ ಸಾಧ್ಯತೆಗಳಿವೆ.

ಈಗ ಸರ್ಕಾರಿ ಶಾಲೆಗಳ ಉಳಿವಿಗೆ ಎಲ್‌ಕೆಜಿ, ಯುಕೆಜಿಗಳನ್ನೂ ಆರಂಭಿಸಲಾಗುತ್ತಿದೆ. ಒಟ್ಟು 409 ಶಾಲೆಗಳ ಪೈಕಿ  47 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.