ADVERTISEMENT

ಮಡಿಕೇರಿ: ದಸರೆಗೆ ತೋರಣ ಕಟ್ಟಿದ ಕರಗೋತ್ಸವ

ಮಡಿಕೇರಿಯ ಸಾಂಪ್ರದಾಯಿಕ ನಾಲ್ಕು ಕರಗಗಳ ವೀಕ್ಷಣೆಗೆ ಅಪಾರ ಸಂಖ್ಯೆ ಜನರು ಭಾಗಿ

ಕೆ.ಎಸ್.ಗಿರೀಶ್
Published 23 ಸೆಪ್ಟೆಂಬರ್ 2025, 5:33 IST
Last Updated 23 ಸೆಪ್ಟೆಂಬರ್ 2025, 5:33 IST
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ಕರಗ ಹೊತ್ತ ಕರಗಧಾರಿಗಳು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ಕರಗ ಹೊತ್ತ ಕರಗಧಾರಿಗಳು   

ಮಡಿಕೇರಿ: ಮೋಡಗಳ ಒಳಗೆ ಅವಿತ್ತಿದ್ದ ಸೂರ್ಯ ಪಡುವಣದತ್ತ ಜಾರಿ ಮಬ್ಬುಗತ್ತಲು ಆವರಿಸುತ್ತಿದ್ದಂತೆ ಇಲ್ಲಿನ ಪಂಪಿನ ಕೆರೆ ಆವರಣದಲ್ಲಿ ಸಾಂಪ್ರದಾಯಿಕ ಐತಿಹಾಸಿಕ ಕರಗೋತ್ಸವಕ್ಕೆ ಚಾಲನೆ ದೊರೆಯಿತು. ಈ ಮೂಲಕ ‘ಬೆಳಕಿನ ದಸರೆ’ಯೂ ಆರಂಭಗೊಂಡಿತು.

ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿದ್ದ ಕರಗಗಳನ್ನು ಹೊತ್ತ ಕರಗಧಾರಿಗಳು ಹೆಜ್ಜೆ ಹಾಕುತ್ತಿದ್ದಂತೆ ಗುಂಪುಗೂಡಿದ್ದ ಜನಸಮೂಹ ದಾರಿ ಬಿಟ್ಟಿತು. ತಲೆಯ ಮೇಲೆ ಕರಗವಿದ್ದರೂ ಚಾಕಚಕ್ಯತೆಯಿಂದ ಹಾಕಿದ ಅವರ ಹೆಜ್ಜೆಗಳಿಗೆ ಮಂಗಳವಾದ್ಯವೂ ಜೊತೆಯಾಗಿ, ಇಡೀ ಪರಿಸರ ಭಕ್ತಿಪರವಶವಾಯಿತು. ಭಕ್ತರು ಜಯಘೋಷಗಳನ್ನು ಮೊಳಗಿಸಿದರು.

ಈ ಎಲ್ಲ ದೃಶ್ಯಗಳು ಇಲ್ಲಿನ ಮಹದೇವಪೇಟೆಯ ಪಂಪಿನ ಕೆರೆಯಲ್ಲಿ ಸೋಮವಾರ ಸಂಜೆ ನಗರದ ಶಕ್ತಿ ದೇವತೆಗಳಾದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳಿಗೆ ಚಾಲನೆ ಸಿಕ್ಕ ಬಳಿಕ ಕಂಡು ಬಂತು.

ADVERTISEMENT

ದಾರಿಯುದ್ಧಕ್ಕೂ ಬಗೆಬಗೆಯ ರಂಗವಲ್ಲಿಗಳು ಸೂಜಿಗಲ್ಲಿನಂತೆ ಸೆಳೆದವು. ವರ್ಣರಂಜಿತ ದೀಪಾಲಂಕಾರಗಳು ನೋಡುಗರ ಹೃನ್ಮನಗಳನ್ನು ಗೆದ್ದವು. ಕರಗಧಾರಿಗಳಿಗೆ ಹೆಜ್ಜೆ ಹೆಜ್ಜೆಗೂ ಹೂಮಳೆಯ ಸ್ವಾಗತ ದೊರಕಿತು.

ದಾರಿಯಲ್ಲಿದ್ದ ಎಲ್ಲ ಮನೆಗಳಲ್ಲೂ ಭಕ್ತಿಭಾವದ ವಾತಾವರಣ ಕಂಡು ಬಂತು. ಮನೆಗಳ ಮುಂದೆ ದೀಪ ಹೊತ್ತಿಸಿ, ರಂಗೋಲಿ ಬಿಡಿಸಿ, ತೋರಣಗಳನ್ನು ಕಟ್ಟಿ ಭಕ್ತಿಭಾವದಿಂದ ಭಕ್ತರು ಕರಗಗಳನ್ನು ಬರಮಾಡಿಕೊಂಡರು.

ಕೆಲವರು ಈಡುಗಾಯಿ ಒಡೆದರೆ, ಮತ್ತೆ ಕೆಲವರು ತೆಂಗಿನಕಾಯಿ, ಬಾಳೆಹಣ್ಣು ಪೂಜೆ ಸಲ್ಲಿಸಿ, ಮಂಗಳಾರತಿ ಬೆಳಗಿದರು. ಕರಗಧಾರಿಗಳ ಕಾಲಿಗೆರಗಿ ಆಶೀರ್ವಾದ ಪಡೆದರು.

ಕರಗಧಾರಿಗಳ ಹಾದಿಯಲ್ಲಿ ದಸರಾ ದಶಮಂಟಪಗಳ ಸಮಿತಿ ವತಿಯಿಂದ ಗಣಪತಿ ಮೂರ್ತಿಯನ್ನಿರಿಸಿದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಮಂಟಪ ಗಮನ ಸೆಳೆಯಿತು.

ಕೋಟೆ ಮಾರಿಯಮ್ಮ ಕರಗವನ್ನು ಪಿ.ಬಿ.ಅನೀಶ್ ಕುಮಾರ್, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ ಕರಗವನ್ನು ಪಿ.ಪಿ.ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಉಮೇಶ್ ಪೂಜಾರಿ ಹಾಗೂ ಕಂಚಿ ಕಾಮಾಕ್ಷಮ್ಮ ಕರಗವನ್ನು ಪಿ.ಸಿ.ಉಮೇಶ್ ಹೊತ್ತಿದ್ದರು.

ಕರಗ ಹೊರುವ ಸಂಪ್ರದಾಯ ಮಡಿಕೇರಿಯಲ್ಲಿ ಹಾಲೇರಿ ಅರಸರ ಕಾಲದಲ್ಲಿ ಆರಂಭವಾಯಿತು. ಮಾರಕ ರೋಗವೊಂದು ಸ್ಥಳೀಯರನ್ನು ಕಾಡಿ, ಸಾವು, ನೋವುಗಳಾದಾಗ ಶಕ್ತಿ ದೇವತೆಗಳಾದ ಶ್ರೀ ಕೋಟೆ ಮಾರಿಯಮ್ಮ, ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿ ಕಾಮಾಕ್ಷಿ ಕರಗವನ್ನು ಹೊರುವ ಸಂಪ್ರದಾಯ ಆರಂಭವಾಯಿತು ಎನ್ನುತ್ತಾರೆ ಹಿರಿಯರು.

ಈ ಬಾರಿ ದಸರೆಗೆ ರಘು ದೀಕ್ಷಿತ್

ಕರಗಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರೆಗೆ ಚಾಲನೆ ನೀಡಿ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ‘ನಗರದ ಶಕ್ತಿ ದೇವತೆಗಳಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಕರಗ ಉತ್ಸವದೊಂದಿಗೆ ಮಡಿಕೇರಿ ದಸರಾಗೆ ಚಾಲನೆ ನೀಡಲಾಗಿದೆ’ ಎಂದರು. ಜನರೂ ಭಕ್ತಿಭಾವದಿಂದ ಕರಗ ಉತ್ಸವದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ತಿಳಿಸಿದರು. ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಸರ್ಕಾರ ಮಡಿಕೇರಿ ದಸರಾ ಉತ್ಸವಕ್ಕೆ ₹ 1.50 ಕೋಟಿ  ಬಿಡುಗಡೆಗೆ ಆದೇಶ ಮಾಡಿದೆ. ಈ ಬಾರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಘು ದೀಕ್ಷಿತ್ ಅವರನ್ನು ಆಹ್ವಾನಿಸಲಾಗುವುದು’ ಎಂದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ ಜಿಲ್ಲಾಧಿಕಾರಿ ವೆಂಕಟ್ ರಾಜಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಡಿವೈಎಸ್ಪಿ ಸೂರಜ್ ಪೌರಾಯುಕ್ತ ಎಚ್.ಆರ್.‌ರಮೇಶ್ ತಹಶೀಲ್ದಾರ್ ಶ್ರೀಧರ ನಗರ ದಸರಾ ಸಮಿತಿ ಅಧ್ಯಕ್ಷ ಬಿ.ಕೆ.ಅರುಣ್ ಕುಮಾರ್ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ಕರಗ ಹೊತ್ತ ಕರಗಧಾರಿಯೊಬ್ಬರು ನರ್ತಿಸಿದರು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ಕರಗ ಹೊತ್ತ ಕರಗಧಾರಿಯೊಬ್ಬರು ಹೆಜ್ಜೆ ಹಾಕಿದರು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ಕರಗ ಹೊತ್ತ ಕರಗಧಾರಿಯೊಬ್ಬರು ದಂಡವಿಡಿದು ಹೆಜ್ಜೆ ಹಾಕಿದರು
ಮಡಿಕೇರಿ ಸೋಮವಾರ ನಡೆದ ಕರಗೋತ್ಸವದಲ್ಲಿ ದಸರಾ ದಶಮಂಟಪಗಳ ಸಮಿತಿಯ ಗಣಪತಿ ಮೂರ್ತಿ ಹೊತ್ತ ಮಂಟಪ ಗಮನ ಸೆಳೆಯಿತು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ದಾರಿಯುದ್ದಕ್ಕೂ ರಂಗೋಲಿಗಳನ್ನು ಬಿಡಿಸಿದ್ದು ಗಮನ ಸೆಳೆಯಿತು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದ ನಿಮಿತ್ತ ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ದೀಪಾಲಂಕಾರ ಮಾಡಲಾಗಿತ್ತು
ಮಡಿಕೇರಿಯಲ್ಲಿ ಸೋಮವಾರ ನಡೆದ ಕರಗೋತ್ಸವದಲ್ಲಿ ದಾರಿಯುದ್ದಕ್ಕೂ ರಂಗೋಲಿಗಳನ್ನು ಬಿಡಿಸಿದ್ದು ಗಮನ ಸೆಳೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.