ADVERTISEMENT

ಕೊಡಗು ಜಿಲ್ಲೆಯಲ್ಲಿ ತಗ್ಗಿದ ಮಳೆ, ಶೀತವಿಡಿದ ಇಳೆ

ಇಳೆಗೊರಗುತ್ತಿವೆ ಮನೆಗಳ ಗೋಡೆಗಳು, ಶಿಥಿಲ ಮನೆಗಳಲ್ಲಿರುವವರಿಗೆ ಕಡಿಮೆಯಾಗದ ಆತಂಕ

​ಪ್ರಜಾವಾಣಿ ವಾರ್ತೆ
Published 29 ಮೇ 2025, 14:43 IST
Last Updated 29 ಮೇ 2025, 14:43 IST
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಭಾಗಮಂಡಲ ಹೋಬಳಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.
ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ ಅವರು ಭಾಗಮಂಡಲ ಹೋಬಳಿ ವ್ಯಾಪ್ತಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಗುರುವಾರ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದ್ದರೂ ಭಾರಿ ಮಳೆ ಸುರಿಯಲಿಲ್ಲ. ಆದರೆ, ನಿರಂತರವಾಗಿ ಬಿದ್ದ ಮಳೆ, ಬೀಸಿದ ಶೀತಮಾರುತದಿಂದ ಜನರು ಅಕ್ಷರಶಃ ನಡುಗಿದರು. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಮನೆಗಳು ಹಾನಿಗೀಡಾಗುವುದು ಮುಂದುವರಿದಿದೆ. ಶಿಥಿಲಗೊಂಡ ಮನೆಗಳಲ್ಲಿ ವಾಸಿಸುತ್ತಿರುವವರು ಆತಂಕದಲ್ಲೇ ದಿನಗಳನ್ನು ಕಳೆಯಬೇಕಾದ ಸ್ಥಿತಿ ಇದೆ.

ಉಪವಿಭಾಗಾಧಿಕಾರಿ ವಿನಾಯಕ ನಾರ್ವಡೆ ಅವರು ಗುರುವಾರ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಪರಿಸ್ಥಿತಿ ಪರಾಮರ್ಶಿಸಿದರು. ಮುಖ್ಯವಾಗಿ ಅವರು, ಭಾಗಮಂಡಲ ಹೋಬಳಿಯ ಪ್ರವಾಹ ಬರುವ ಬೆಂಗೂರು ಗ್ರಾಮದ ದೋಣಿ ಕಾಡು ಪ್ರದೇಶವನ್ನು ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮವನ್ನು ಪರಿಶೀಲಿಸಿದರು. ಪದಕಲ್ಲು ಗ್ರಾಮದ ಹಾನಿಗೊಳಗಾಗಿರುವ ಭಾಸ್ಕರ್ ಎಂಬುವರ ಮನೆಯನ್ನು ಪರಿಶೀಲಿಸಿದರು. ಮಳೆಗಾಲದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಕಾಯ್ದಿರಿಸಿದ ಚೇರಂಬಾಣೆ ಗ್ರಾಮದ ಬಾಲಕರ ಭವನ ಭಾಗಮಂಡಲ ಗ್ರಾಮದ ಐಟಿಐ ಕಾಲೇಜು ಹಾಗೂ ಭಾಗಮಂಡಲ ಗ್ರಾಮದ ಕಾಶಿ ಮಠದಲ್ಲಿನ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.

ಸೋಮವಾರಪೇಟೆ ತಾಲ್ಲೂಕು ಶನಿವಾರಸಂತೆ ಹೋಬಳಿಯ ದೊಡ್ಡಹನಕೋಡು ಗ್ರಾಮದ ನಿವಾಸಿ ಈರಮ್ಮ ಮತ್ತು ಪಾರ್ವತಿ ಅವರ ಮನೆ ಮಳೆಯಿಂದ ಹಾನಿಯಾಗಿದ್ದು, ಸೋಮವಾರಪೇಟೆ ತಹಶೀಲ್ದಾರ್  ಆಹಾರ ಪೊಟ್ಟಣ ವಿತರಿಸಿದರು. ಶಾಂತಳ್ಳಿ ಹೋಬಳಿ ತಳ್ತಾರೆ ಶೆಟ್ಟಳ್ಳಿ ಗ್ರಾಮದ ನಿವಾಸಿ ಸುಶೀಲಾ ಅವರ ಮನೆ ಭಾರಿ ಮಳೆಗಾಳಿಯಿಂದ ಹಾನಿಯಾಗಿದ್ದು ಅವರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು.

ADVERTISEMENT

ಅಮ್ಮತ್ತಿ ಹೋಬಳಿ ಚೆನ್ನಯ್ಯನ ಕೋಟೆ ಗ್ರಾಮದ ಎಚ್.ಸಿ.ಚಂದ್ರ ಅವರ ವಾಸದ ಮನೆಯ ಹಿಂಬದಿಯ ಗೋಡೆ ಮಳೆಯಿಂದ ಕುಸಿದಿದೆ. ಶನಿವಾರಸಂತೆ ಹೋಬಳಿ ದೊಡ್ಡಹಣಕೊಡು ಗ್ರಾಮದ ನಿವಾಸಿ ಸುಬ್ಬಯ್ಯ ಅವರ ಮನೆಯ ಶೇ 50ರಷ್ಟು ಭಾಗ ಮಳೆ, ಗಾಳಿಯಿಂದ ಹಾನಿಯಾಗಿದೆ.

ಮರ ಬಿದ್ದು ಈಚೆಗೆ ಮೃತಪಟ್ಟ ಬಾಡಗ ಬಾಣಂಗಾಲ ಗ್ರಾಮದ ಪಿ.ಸಿ.ಬೆಳ್ಳಿಯಪ್ಪ ಅವರಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ₹ 5 ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ನೀಡಿದರು.

ಅಮ್ಮತ್ತಿ ಹೋಬಳಿ ಚೆನ್ನಯ್ಯನ ಕೋಟೆ ಗ್ರಾಮದ ಎಚ್.ಸಿ.ಚಂದ್ರ ಅವರ ವಾಸದ ಮನೆಯ ಹಿಂಬದಿಯ ಗೋಡೆ  ಮಳೆಯಿಂದಾಗಿ ಕುಸಿದು ಹಾನಿಯಾಗಿದೆ

ಮಳೆ ಕಡಿಮೆಯಾಗುವ ನಿರೀಕ್ಷೆ

ವಿವಿಧ ಹವಾಮಾನ ಸೇವಾ ಸಂಸ್ಥೆಗಳ ಮಾಹಿತಿ ಪ್ರಕಾರ ಮುಂಬರುವ ದಿನಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಗಳಿವೆ. ಭಾರತೀಯ ಹವಾಮಾನ ಇಲಾಖೆಯು ಇದುವರೆಗೂ ಜಿಲ್ಲೆಗೆ ನೀಡಿದ್ದ ರೆಡ್‌ ಅಲರ್ಟ್‌ ಅನ್ನು ವಾಪಸ್ ಪಡೆದಿದೆ. ಮೇ 30ರಂದು ಬೆಳಿಗ್ಗೆ 8.30ರ ನಂತರ ಯೆಲ್ಲೊ ಅಲರ್ಟ್ ನೀಡಿದೆ. ವಾಯುಭಾರ ಕುಸಿತ ದುರ್ಬಲಗೊಳ್ಳುವ ಸಾಧ್ಯತೆಗಳಿದ್ದು ಅರಬ್ಬೀ ಸಮುದ್ರದಿಂದ ಬರುತ್ತಿರುವ ಮೋಡಗಳೂ ಕಡಿಮೆಯಾಗುವ ಸಂಭವವಿದೆ. ಜೂನ್ 3ನೇ ವಾರದಲ್ಲಿ ಮತ್ತೆ ಮುಂಗಾರು ಪ್ರಬಲಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.