ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ: 11 ನಿರ್ಣಯ

ಜೀವ ನದಿ ಕಾವೇರಿ ಉಳಿಸಲು ವಿಶೇಷ ಕಾನೂನು ರೂಪಿಸಿ: ಸಮ್ಮೇಳನದಲ್ಲಿ ಒಕ್ಕೊರಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 14:17 IST
Last Updated 30 ಜನವರಿ 2021, 14:17 IST
ಸಮ್ಮೇಳನದಲ್ಲಿ ನೃತ್ಯದ ಸೊಬಗು
ಸಮ್ಮೇಳನದಲ್ಲಿ ನೃತ್ಯದ ಸೊಬಗು   

ಎಂ.ಮುತ್ತಣ್ಣ ವೇದಿಕೆ (ಮಡಿಕೇರಿ): ಇಲ್ಲಿನ ಕಾವೇರಿ ಹಾಲ್‌ನಲ್ಲಿ ಎರಡು ದಿನ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸುವರ್ಣ ಸಂಭ್ರಮಕ್ಕೆ ಶನಿವಾರ ರಾತ್ರಿ ಸಂಭ್ರಮದ ತೆರೆ ಬಿತ್ತು.

ಇದಕ್ಕೂ ಮೊದಲು ನಡೆದ ಬಹಿರಂಗ ಅಧಿವೇಶನಲ್ಲಿ ಒಟ್ಟು 11 ನಿರ್ಣಯ ಮಂಡಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕೋಶಾಧ್ಯಕ್ಷ ಎಸ್‌.ಎ.ಮುರಳೀಧರ್‌ ನಿರ್ಣಯ ಮಂಡನೆ ಮಾಡಿದರು. ಕಸಪಾ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್‌ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯಾಭಿಮಾನಿಗಳು ನಿರ್ಣಯ ಅಂಗೀಕರಿಸಿದರು.

ಏನೆಲ್ಲಾ ನಿರ್ಣಯ?

ADVERTISEMENT

* ಪ್ರಾಕೃತಿಕ ವಿಕೋಪ ಹಾಗೂ ಕೊರೊನಾದಿಂದ ನಲುಗಿ ಹೋಗಿರುವ ಕಾಫಿ ಬೆಳೆಗಾರರ ಸಂಕಷ್ಟವನ್ನು ಮನಗಂಡು ಸರ್ಕಾರವು ಕೂಡಲೇ ಬೆಂಬಲ ಬೆಲೆ ಘೋಷಿಸಬೇಕು.

* ಅಖಂಡ ಭಾರತದ ಸೇನಾ ಪಿತಾಮಹ, ಭೂಸೇನೆ, ವಾಯುಸೇನೆ ಮತ್ತು ನೌಕಾ ದಳದ ಮೂರೂ ವಿಭಾಗಗಳ ದಂಡನಾಯಕರಾಗಿ ಸೇವೆ ಸಲ್ಲಿಸಿದ ಕೊಡಗಿನ ಹೆಮ್ಮೆಯ ಪುತ್ರ ಫೀಲ್ಡ್ ಮಾರ್ಷಲ್ ಕೊಡಂದೇರ ಮಾದಪ್ಪ ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವ ಮೂಲಕ ಕೊಡಗಿನ ಹಾಗೂ ದೇಶದ ಸೇನೆ ಮತ್ತು ಎಲ್ಲಾ ಸೈನಿಕರಿಗೆ ಗೌರವ ಸಲ್ಲಿಸಬೇಕು.

* ಗಡಿ ಭಾಗಗಳಲ್ಲಿ ಕನ್ನಡೇತರರು ಹೆಚ್ಚುತ್ತಿರುವುದರಿಂದ ಆ ಪ್ರದೇಶಗಳಲ್ಲಿ ಕನ್ನಡಕ್ಕೆ ಹೆಚ್ಚು ಒತ್ತು ನೀಡಿ ಸರ್ಕಾರವೇ ಕಾರ್ಯಕ್ರಮ ನಡೆಸಲು ಮುಂದಾಗಬೇಕು.

* ಸತತ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿರುವ ಕೊಡಗು ಜಿಲ್ಲೆ ಎಲ್ಲ ರೀತಿಯಿಂದಲೂ ಸಂಕಷ್ಟಕ್ಕೆ ಒಳಗಾಗಿದೆ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ವಿಶೇಷ ಅನುದಾನ ನೀಡಬೇಕು.

* ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರನ್ನು ನೇಮಕಗೊಳಿಸಿ ಸರ್ಕಾರ ಆದೇಶ ನೀಡಬೇಕು.

* ಕನ್ನಡ ನಾಡಿನ ಜೀವ ನದಿ ಕಾವೇರಿ ಮಲೀನಗೊಳ್ಳುತ್ತಿದ್ದು, ಕಾವೇರಿ ನದಿಯ ಉಳಿವಿಗಾಗಿ ವಿಶೇಷ ಕಾನೂನು ರಚಿಸಿ, ದಿಟ್ಟ ಕ್ರಮ ಕೈಗೊಳ್ಳಬೇಕು.

* ಕ್ರೀಡಾ ತವರೂರಾದ ಕೊಡಗಿನ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಒದಗಿಸುವ ಮೂಲಕ ಪ್ರೋತ್ಸಾಹ ನೀಡಬೇಕು.

* ದೇಶ ರಕ್ಷಣೆಗೆ ಅತ್ಯಮೂಲ್ಯ ಕೊಡುಗೆ ನೀಡುವ ಮೂಲಕ ಜೀವನವನ್ನು ಮುಡಿಪಾಗಿಟ್ಟು ಸೇವೆ ಸಲ್ಲಿಸಿದ ಯೋಧರಿಗೆ ನಿವೇಶನ ಸೇರಿದಂತೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ದೇಶ ಸೇವೆಯನ್ನು ಪರಿಗಣಿಸಿ ದೇಶ ರಕ್ಷಕರಿಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಬೇಕು.

* 10ನೇ ತರಗತಿ ತನಕ ಕನ್ನಡವನ್ನು ಒಂದು ಭಾಷೆಯಾಗಿ ಅಭ್ಯಸಿಸುವ ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಹಂತದಲ್ಲಿ ವಿಶೇಷವಾಗಿ ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಪರಿಗಣಿಸಬೇಕು.

* ಕೊಡಗಿನಲ್ಲಿ ಕಾಡಾನೆ, ಚಿರತೆ ಸೇರಿದಂತೆ ವನ್ಯಪ್ರಾಣಿ ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಸರ್ಕಾರವು ಕೂಡಲೇ ಸೂಕ್ತ ಪರಿಹಾರ ಒದಗಿಸುವಲ್ಲಿ ಕಾರ್ಯ ಪ್ರವೃತ್ತವಾಗಬೇಕು.

* ಪ್ರವಾಸೋದ್ಯಮ ಅಭಿವೃದ್ಧಿಯಿಂದ ಮಡಿಕೇರಿ ನಗರದಲ್ಲಿ ಜನಸಂಖ್ಯೆ ಮತ್ತು ವಾಹನ ದಟ್ಟಣೆ ಹೆಚ್ಚುತ್ತಿದ್ದು, ವಾಹನ ನಿಲುಗಡೆಗೆ ಸ್ಥಳವಾಕಾಶವೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರವು ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.