ADVERTISEMENT

ಗೋಣಿಕೊಪ್ಪಲು | ಕಾವೇರಿ ತೀರ್ಥ ಪ್ರೋಕ್ಷಣೆ ಇಂದು

ಕುಂದಾ ಬೆಟ್ಟದಲ್ಲಿ ಕೊಡಗಿನ ಮೊದಲ ಬೋಡ್‌ನಮ್ಮೆಗೆ ವಿಧ್ಯುಕ್ತ ಚಾಲನೆ

ಜೆ.ಸೋಮಣ್ಣ
Published 18 ಅಕ್ಟೋಬರ್ 2025, 5:12 IST
Last Updated 18 ಅಕ್ಟೋಬರ್ 2025, 5:12 IST
ಗೋಣಿಕೊಪ್ಪಲು ಬಳಿಯ ಕುಂದ ಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲಿಸಲಾಯಿತು.
ಗೋಣಿಕೊಪ್ಪಲು ಬಳಿಯ ಕುಂದ ಬೆಟ್ಟದ ಮೇಲಿನ ಈಶ್ವರ ದೇವಸ್ಥಾನದಲ್ಲಿ ಪೂಜೆ ಸಲಿಸಲಾಯಿತು.   

ಗೋಣಿಕೊಪ್ಪಲು:  ಪ್ರಸಿದ್ಧ ಕುಂದಾ ಬೆಟ್ಟದಲ್ಲಿ ಕೊಡಗಿನ ಮೊದಲ ‘ಬೋಡ್ ನಮ್ಮೆ’ಗೆ ಶನಿವಾರ ಚಾಲನೆ ದೊರಕಿತು. ಶನಿವಾರ ಕಾವೇರಿ ತೀರ್ಥ ಪ್ರೋಕ್ಷಣೆ ನಡೆಯಲಿದೆ.

ಪೊನ್ನಂಪೇಟೆ ತಾಲ್ಲೂಕಿನ ಬೊಟ್ಟಿಯತ್‌ನಾಡ್ ಕುಂದಾ ಹಾಗೂ ಮುಗುಟಿಗೇರಿ ಗ್ರಾಮಕ್ಕೆ ಸೇರಿದ ಕುಂದ ಬೆಟ್ಟದಲ್ಲಿರುವ ಈಶ್ವರ ದೇವಸ್ಥಾನದ ಅಂಬಲದಲ್ಲಿ ಕಟ್ಟ್ ಹಾಕುವ ಮೂಲಕ ವರ್ಷದ ಮೊದಲ ಬೋಡ್ ನಮ್ಮೆಗೆ ಶುಕ್ರವಾರ ಚಾಲನೆ ನೀಡಲಾಯಿತು. ‘ಕುಂದತ್ ಬೊಟ್ಟ್‌ಲ್‌ ನೇಂದಾ ಕುದುರೆ... ಪಾರಣ ಮಾನಿಲ್ ಅಳ್ಂಜ ಕುದುರೆ..’ ಎಂಬ ಬೋಡ್ ನಮ್ಮೆಯ ಜನಪದ ಹಾಡಿನಂತೆ ಬೊಟ್ಟಿಯತ್ ನಾಡಿನ ಬೋಡ್ ನಮ್ಮೆಗೆ ಕಟ್ಟುಪಾಡು ಬಿದ್ದಿತು.

ಸಣ್ಣುವಂಡ ಹಾಗೂ ಮನೆಯಪಂಡ ಕುಟುಂಬದ ನೇತೃತ್ವದಲ್ಲಿ (ತಕ್ಕಾಮೆಯಲ್ಲಿ) ನಡೆಯುವ ಈ ಹಬ್ಬಕ್ಕೆ ಸಾಂಪ್ರದಾಯಿಕ ಹಾಡು ಹೇಳುತ್ತಾ ಡೋಲು ಬಾರಿಸುವ ಮೂಲಕ ಅಂಬಲದಲ್ಲಿ ಕುಳಿತು ಹಬ್ಬದಲ್ಲಿ ನಡೆದುಕೊಳ್ಳಬೇಕಾದ ನಿಯಮಗಳ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಪ್ರತಿ ವರ್ಷ ಕಾವೇರಿ ತೀರ್ಥೋದ್ಭವದಂದು ಹಾಗೂ ಮರು ದಿವಸ ಕುಂದ ಬೆಟ್ಟದಲ್ಲಿ ಬೋಡ್ ನಮ್ಮೆ ನಡೆಯುವ ಪದ್ಧತಿಯಂತೆ  ಶುಕ್ರವಾರ ಸಾಂಪ್ರದಾಯಿಕ ಮನೆಕಳಿ ನಡೆಯಿತು. ಶನಿವಾರ ಕುದುರೆ ಹಬ್ಬ ಹಾಗೂ ಬೆಟ್ಟ ಹತ್ತುವ ಕಾರ್ಯ ಜರುಗಲಿದೆ. ಕಾವೇರಿ ತೀರ್ಥ ತಂದು ಬೆಟ್ಟದ ಮೇಲಿರುವ ಬೊಟ್ಲಪ್ಪನಿಗೆ ಅರ್ಪಿಸುವ ಆಚರಣೆಗಳು ನಡೆಯಲಿವೆ.

ಮನೆಯಪಂಡ ಹಾಗೂ ಸಣ್ಣುವಂಡ ಕುಟುಂಬದ ಬಲ್ಯಮನೆಯಿಂದ ತಲಾ ಒಂದು ಕೃತಕ ಕುದುರೆಗಳನ್ನು ಸಿಂಗರಿಸಿ ಅವುಗಳ ಮೂಲಕ ಮಧ್ಯಾಹ್ನ 1 ಗಂಟೆಗೆ ಇಲ್ಲಿನ ಈಶ್ವರ ದೇವಸ್ಥಾನದ ಸಮೀಪದ ಅಂಬದಲ್ಲಿ ಸೇರಿ ಕುಂದಾ ಬೆಟ್ಟವನ್ನು ಹತ್ತಲು ಪ್ರಾರಂಭಿಸುತ್ತಾರೆ. ಕಡಿದಾದ ಬೆಟ್ಟವನ್ನು ಏರಿ ಅಲ್ಲಿ ಬೊಟ್ಲಪ್ಪ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ,  ಹಬ್ಬವನ್ನು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಕುಂದ ಬೆಟ್ಟದ ಮೇಲಿನ ಭೀಮನ ಕಲ್ಲು.
ಬೆಟ್ಟದ ಮೇಲಿಂದ ಕಂಡಬರುವ ಸುಂದರ ಪಾಕೃತಿಕ ಪರಿಸರ
ಬೆಟ್ಟಕ್ಕೆ ಪಾಂಡವರ ನಂಟು
ಕುಂದಾ ಬೆಟ್ಟದ ಮೇಲಿನ ಬೊಟ್ಲಪ್ಪ ದೇವಸ್ಥಾನಕ್ಕೆ ಪಾಂಡವರ ಕಾಲದ ಇತಿಹಾಸವಿದೆ. ಅಜ್ಞಾತ ವಾಸದಲ್ಲಿದ್ದ ಪಾಂಡವರು ಇಲ್ಲಿ ತಲೆಮರೆಸಿಕೊಂಡಿದ್ದರು ಎಂಬ ಐತಿಹ್ಯವಿದ್ದು ಅರ್ಜುನನ ಕುದುರೆ ಇಲ್ಲಿಂದ ಹಾತೂರಿನ ವನಭದ್ರಕಾಳಿ ದೇವಸ್ಥಾನದ ಹತ್ತಿರದ ಕಲ್ಲಿನ ಮೇಲೆ ಜಿಗಿಯಿತು. ಇದರ ಗುರುತನ್ನು ಈಗಲೂ ಹಾತೂರಿನಲ್ಲಿರುವ ಕಲ್ಲಿನಲ್ಲಿ ಕಾಣಬಹುದು. ಇದರಿಂದ ಈ ಕಲ್ಲಿಗೆ ಕುದುರೆಮೊಟ್ಟೆ ಎಂದು ಕರೆಯಲಾಗುತ್ತದೆ. ಕುಂದಾ ಬೆಟ್ಟದ ಮೇಲಿನ ಬೊಟ್ಲಪ್ಪ (ಈಶ್ವರ)ದೇವಾಲಯವನ್ನು ಪಾಂಡವರೇ ನಿರ್ಮಿಸಿದರು ಎಂಬ ಪ್ರತೀತಿಯಿದೆ. ಒಂದೇ ರಾತ್ರಿಯಲ್ಲಿ ಕಲ್ಲಿನಿಂದ ಕೆತ್ತಿ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಇಲ್ಲಿನ ಕಲ್ಲಿನಲ್ಲಿ ಇಂದಿಗೂ ಭೀಮನ ಪಾದದ ಮತ್ತು ಬೆರಳುಗಳ ಗುರುತನ್ನು ಕಾಣಬಹುದು. ಇಲ್ಲಿನ ದೇರಟೆ ಕಲ್ಲಿಗೆ ವಿಶೇಷ ಶಕ್ತಿ ಇದೆ ಎಂದು ನಂಬಲಾಗಿದೆ. ಬೆಟ್ಟದ ತುದಿಯ ಒಂದು ಮೂಲೆಯಲ್ಲಿರುವ ದೇರಟೆ ಕಲ್ಲು ಅಂಗೈ ಅಗಲದಷ್ಟಿದ್ದು ಇದರ ಮೇಲೆ ನಿಂತು ಮೂರು ಸುತ್ತು ಸುತ್ತಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುತ್ತಾರೆ ಹಿರಿಯರು. ಬೆಟ್ಟದ ಕಲ್ಲಿನ ಗುಹೆಯಲ್ಲಿ ಹುಲಿಗಳು ವಾಸಿಸುತ್ತಿದ್ದು ಹಬ್ಬ ನಡೆಯುವ ಒಂದು ವಾರದ ಮುಂಚೆ ಅವುಗಳು ಬೇರೆಡೆಗೆ ತೆರಳಿ ಹಬ್ಬ ನಡೆಸಲು ಅವಕಾಶ ಮಾಡಿಕೊಡುತ್ತಿದ್ದವು ಎಂದು ಹಿರಿಯರು ಹೇಳುತ್ತಾರೆ. ಆದರೆ ಈಗ ಅಂಥ ಪ್ರಾಣಿಗಳಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.