
ನಾಪೋಕ್ಲು: ‘ಕೆಡ್ಡಸ ಹಬ್ಬವು ಪ್ರಕೃತಿ ಹಾಗೂ ಭೂಮಿ ತಾಯಿಗೆ ಗೌರವ ಸೂಚಿಸುವ ಹಬ್ಬವಾಗಿದೆ’ ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.
ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡ್ಡಸ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ರೈತರು ಕೃಷಿ ಕಾರ್ಯದಿಂದ ಕೊಂಚ ವಿರಾಮ ಪಡೆಯುವ ಹಬ್ಬ ಇದಾಗಿದ್ದು, ಸೊರಗಿದ ಗಿಡ ಮರಗಳಲ್ಲಿ ಚಿಗುರು ಹೂವು, ಮೊಗ್ಗು ಕಾಣಿಸಿಕೊಳ್ಳುತ್ತದೆ. ಜೇನು ಹುಳಗಳ ಹಾರಾಟದಿಂದ ಪ್ರಕೃತಿ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಂಡು ಮುಂದಿನ ಫಲ ನೀಡಲು ಸುಸಮಯವಾಗಿದೆ. ಇಂತಹ ಸಮಯದಲ್ಲಿ ಪ್ರಕೃತಿಗೆ ಹಾನಿಯಾಗುವ ಯಾವುದೇ ಕಾರ್ಯಗಳನ್ನು ಮಾಡಿದಲ್ಲಿ ಫಲ ಹಾನಿಯಾಗುತ್ತದೆ ಎಂಬುದು ವೈಜ್ಞಾನಿಕ ಅಂಶವಾಗಿದೆ’ ಎಂದರು.
‘ಭೂಮಿಯ ಮೇಲಿರುವ ನೈಸರ್ಗಿಕ ಸಂಪತ್ತು ನೆಲದೇವಿಯ ಕೊಡುಗೆ. ಹೀಗಿರುವಾಗ ಭೂತಾಯಿ ಋತುಮತಿಯಾಗಿ ಫಲವತಿಯಾಗುವ ಎಲ್ಲಾ ಲಕ್ಷಣಗಳಿರುವುದರಿಂದ ಅವಳಿಗೆ ವಿಶ್ರಾಂತಿ ನೀಡಲು ಪರಿಸರಕ್ಕೆ ಹಾನಿಯಾಗುವ ಯಾವುದೇ ಕೃಷಿ ಕೆಲಸಗಳನ್ನು ಮಾಡಬಾರದು ಎಂಬ ಸಾಂಪ್ರದಾಯಿಕ ವಿಚಾರಕ್ಕೆ ಮಹತ್ವ ನೀಡಬೇಕಿದೆ’ ಎಂದರು.
‘ಬೇಟೆಯ ಹಬ್ಬವೂ ಇದಾಗಿದ್ದು, ವಿರಾಮದ ಕಾಲವಾದ್ದರಿಂದ ಹಿಂದೆಲ್ಲ ಹೊಳೆಗಳಲ್ಲಿ ಮೀನು ಹಿಡಿಯುತ್ತಿದ್ದರು. ಹಾಗೆಯೇ ಕಾಡುಪ್ರಾಣಿಗಳಿಗೆ ಈ ಸಮಯದಲ್ಲಿ ಕಾಲುನೋವು ಬರುವುದರಿಂದ ಸುಲಭವಾಗಿ ಬೇಟೆಯಾಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯಿಂದ ಮಹಿಳೆಯರೂ ಒನಕೆ ಹಿಡಿದು ಬೇಟೆಯಾಡುತ್ತಿದ್ದರು’ ಎಂದರು.
ಒಕ್ಕೂಟದ ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ ಮಾತನಾಡಿ, ‘ಕೆಡ್ಡಸ ಹಬ್ಬವನ್ನು ಕೊಡಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಆಚರಿಸುತ್ತಿದ್ದು, ಅದರಲ್ಲೂ ಪಾಂತ್ಯವಾರು ಆಚರಣೆಯಲ್ಲಿ ವ್ಯತ್ಯಾಸಗಳಿರುತ್ತವೆ. ಪೂರ್ವಪದ್ಧತಿಯಂತೆ ನಮಗೆ ತಿಳಿದಷ್ಟು ಮಟ್ಟಿಗೆ ಇಂತಹ ಅಪರೂಪದ ಹಬ್ಬಗಳನ್ನು ಆಚರಿಸುವುದರಿಂದ ಮುಂದಿನ ಪೀಳಿಗೆಗೆ ನಮ್ಮ ಸಾಂಪ್ರದಾಯಿಕ ಆಚರಣೆಗಳು ತಿಳಿಯುವುದಲ್ಲದೆ ಅದರ ಪೋಷಣೆಯೂ ಆಗುತ್ತದೆ. ಅಲ್ಲದೆ ನಮ್ಮಸಮುದಾಯದ ಆಚರಣೆಗಳ ಪರಿಚಯವೂ ಆಗುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಸದಸ್ಯರು ಭೂಮಿತಾಯಿಗೆ ಭತ್ತಕ್ಕೆ ಕಲ್ಲು ಮುಳ್ಳು ಹೇರಿ ಭೂಮಿ ತಾಯಿಗೆ ಶಾಸ್ತ್ರೋಕ್ತವಾಗಿ ಎಣ್ಣೆ ಬಿಟ್ಟು ಸಾಂಕೇತಿಕವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಒಕ್ಕೂಟದ ಉಪಾಧ್ಯಕ್ಷೆ ಕೂರನ ಸುಶೀಲ ಅಪ್ಪಾಜಿ, ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.