
ಬಜೆಟ್ ನಿರೀಕ್ಷೆ
ಮಡಿಕೇರಿ: ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ 4 ಸಂಶೋಧನಾ ಕೇಂದ್ರಗಳು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳನ್ನು ಬಲಪಡಿಸಲು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ವಿಶೇಷ ಅನುದಾನಗಳನ್ನು ನೀಡಬೇಕಿದೆ ಎಂಬ ಒತ್ತಾಯ ಕೇಳಿ ಬಂದಿದೆ.
ಚೆಟ್ಟಳ್ಳಿಯಲ್ಲಿರುವ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ, ಭಾರತೀಯ ಕಾಫಿ ಸಂಶೋಧನಾ ಉಪಕೇಂದ್ರ, ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅಪ್ಪಂಗಲದ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರಗಳು ಸಿಬ್ಬಂದಿ ಕೊರತೆ ಹಾಗೂ ಕೃಷಿ ಕಾರ್ಮಿಕರ ಕೊರತೆಗಳಿಂದ ಅಕ್ಷರಶಃ ಬಸವಳಿದಿವೆ.
ಮುಖ್ಯವಾಗಿ, ಭಾರತೀಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ಕೇವಲ ಮೂರು ಮಂದಿಯಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಫಿಮಂಡಳಿಯ ಕಚೇರಿಗಳಲ್ಲೂ ಸಿಬ್ಬಂದಿ ಕೊರತೆ ಢಾಳಾಗಿಯೇ ಇದೆ. ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶೇ 50ರಷ್ಟು ತಾಂತ್ರಿಕ ಹುದ್ದೆಗಳು, ಶೇ 70ರಷ್ಟು ಕೌಶಲ ಆಧಾರಿತ ಸಿಬ್ಬಂದಿಯ ಕೊರತೆ ಇದೆ. ಕಳೆದ ಐದು ವರ್ಷಗಳಿಂದ ಸಿಬ್ಬಂದಿ ಕೊರತೆಯಿಂದ ಹೈರಣಾಗಿದ್ದ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈ ವರ್ಷ ಸಿಬ್ಬಂದಿ ಸೂಚನೆಯ ಸುಳಿವು ಸಿಕ್ಕಿದೆ.
ಈ ಎಲ್ಲ ಸಂಶೋಧನಾ ಕೇಂದ್ರದಲ್ಲಿರುವ ಎಲ್ಲ ಹುದ್ದೆಗಳನ್ನೂ ಕೇಂದ್ರ ಸರ್ಕಾರ ತುಂಬಬೇಕಿದೆ. ಮಾತ್ರವಲ್ಲ, ಅಗತ್ಯ ಇರುವ ಹುದ್ದೆಗಳನ್ನು ಸೃಜನೆ ಮಾಡಿ ಹಣಕಾಸು ಇಲಾಖೆಯಿಂದ ಮಂಜೂರಾತಿ ಕೊಡಿಸಬೇಕಿದೆ. ಈ ಅಂಶವನ್ನು ಎಲ್ಲ ಸಂಶೋಧನಾ ಕೇಂದ್ರದ ಸಿಬ್ಬಂದಿ ಒತ್ತಾಯಿಸುತ್ತಾರೆ.
ಮತ್ತೊಂದೆಡೆ, ಕೃಷಿ ಕಾರ್ಮಿಕರ ಕೊರತೆಯನ್ನು ಈ ಎಲ್ಲ ಸಂಶೋಧನಾ ಕೇಂದ್ರಗಳೂ ಅನುಭವಿಸುತ್ತಿವೆ. ಅಖಿಲ ಭಾರತೀಯ ಮಟ್ಟದಲ್ಲಿ ಒಂದೇ ಕೂಲಿಯನ್ನು ಕಾರ್ಮಿಕರಿಗೆ ನೀಡಲಾಗುತ್ತಿದೆ. ಆದರೆ, ಕೊಡಗಿನಲ್ಲಿ ಇದಕ್ಕಿಂತ ಹೆಚ್ಚಿನ ಕೂಲಿ ತೋಟಗಳಲ್ಲಿ ಸಿಗುತ್ತಿದೆ. ಹಾಗಾಗಿ, ಕೃಷಿ ಕಾರ್ಮಿಕರು ಸಂಶೋಧನಾ ಕೇಂದ್ರಗಳತ್ತ ಬರುತ್ತಿಲ್ಲ.
ಕೃಷಿ ಕಾರ್ಮಿಕರು ಇಲ್ಲದೇ ಯಾವುದೇ ಸಂಶೋಧನಾ ಕೆಲಸಗಳೂ ಆಗುವುದಿಲ್ಲ. ಆಗುವ ಕೆಲಸಗಳೂ ಮಂದಗತಿಯಲ್ಲಿ ತೆವಳುತ್ತಿವೆ. ಹಾಗಾಗಿ, ಗುಡ್ಡಗಾಡು ಪ್ರದೇಶಗಳಲ್ಲಿ ಕೃಷಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ನೀಡಿದರೆ, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಈ ಸಂಶೋಧನಾ ಕೇಂದ್ರಗಳತ್ತ ಬರುತ್ತಾರೆ. ಈ ಬಗೆಯ ವಿಶೇಷ ಪ್ರಯತ್ನಗಳನ್ನು ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ಪ್ರಕಟಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.