ADVERTISEMENT

ಬಡವರಿಗೆ ಎಪಿಎಲ್‌ ಕಾರ್ಡ್; ಆಕ್ಷೇಪ

ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಸಭೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:13 IST
Last Updated 18 ನವೆಂಬರ್ 2025, 6:13 IST
ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ ಪೂರ್ವಸಿದ್ಧತೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು
ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಜಿಲ್ಲಾಮಟ್ಟದ ಗ್ಯಾರಂಟಿ ಸಮಾವೇಶ ಪೂರ್ವಸಿದ್ಧತೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು   

ಮಡಿಕೇರಿ: ಕೊಡಗು ಜಿಲ್ಲೆ ಮಲೆನಾಡು ಭಾಗವಾಗಿರುವುದರಿಂದ ಹೆಚ್ಚಿನ ಮಳೆ ಬೀಳುವ ಕಾರಣಕ್ಕೆ ಸಂಚಾರಕ್ಕಾಗಿ ಬಡ ಕುಟುಂಬಗಳು ಸಹ ಬೈಕ್, ಮತ್ತಿತ್ತರ ವಾಹನಗಳನ್ನು ಹೊಂದಿದ್ದಾರೆ. ಅಂತಹ ಕುಟುಂಬಗಳಿಗೂ ಬಿಪಿಎಲ್‌ ರದ್ದುಪಡಿಸಿ ಎಪಿಎಲ್ ಕಾರ್ಡ್ ನೀಡಲಾಗಿದೆ. ಈ ರೀತಿ ಆದರೆ ಕಡು ಬಡವರು ಬದುಕುವುದಾದರೂ ಹೇಗೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರು ಪ್ರಶ್ನಿಸುವ ಮೂಲಕ ಗಮನ ಸೆಳೆದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಮೇಲ್ವಿಚಾರಣೆ ಹಾಗೂ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶ ಪೂರ್ವಸಿದ್ಧತೆ ಸಂಬಂಧ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. 

ಪ್ರತಿಕ್ರಿಯಿಸಿದ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ‘ಜಿಲ್ಲೆಯ ಕೆಲವು ಕಡೆಗಳಲ್ಲಿ ಬಡವರಿಗೆ ಎಪಿಎಲ್ ಕಾರ್ಡ್ ದೊರೆತಿದ್ದು, ಇದನ್ನು ಸರಿಪಡಿಸಿ ಬಿಪಿಎಲ್ ಕಾರ್ಡ್ ನೀಡುವ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು. ಕಡು ಬಡವರಿಗೆ ಬಿಪಿಎಲ್ ಕಾರ್ಡ್ ದೊರೆಯಬೇಕು’ ಎಂದರು. 

ADVERTISEMENT

ಇದೇ ನ. 21ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ನ.22 ರಂದು ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕುರಿತು ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದ್ದು, ಅಧಿಕಾರಿಗಳು ಅಂಕಿ ಅಂಶಗಳ ಸಹಿತ ನಿಖರ ಮಾಹಿತಿ ಒದಗಿಸುವಂತೆಯೂ ಅವರು ನಿರ್ದೇಶನ ನೀಡಿದರು.

ಕಾರ್ಯಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದು, ಯೋಜನೆಯ ಫಲಾನುಭವಿಗಳನ್ನೂ ಆಹ್ವಾನಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಕೆಡಿಪಿ ಸಭೆಗೆ ಪಂಚ ಗ್ಯಾರಂಟಿ ಯೋಜನಾ ಅನುಷ್ಠಾನ ಅಧಿಕಾರಿಗಳು ನಿಖರ ಮಾಹಿತಿ ಒದಗಿಸುವುದರ ಜೊತೆಗೆ ಕಾರ್ಯಾಗಾರದ ದಿನದಂದು ಪಂಚ ಗ್ಯಾರಂಟಿ ಯೋಜನಾ ಇಲಾಖೆಗಳ ವಸ್ತು ಪ್ರದರ್ಶನದ ‘ಮಾಹಿತಿ ಮಳಿಗೆ’ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು. 

ಸಮಿತಿ ಉಪಾಧ್ಯಕ್ಷರಾದ ಕೆ.ಸಿ.ಭೀಮಯ್ಯ, ನಾಸೀರ್, ಪಿ.ಆರ್.ಪಂಕಜ, ಸದಸ್ಯರಾದ ಬಿ.ಒ.ಅಣ್ಣಯ್ಯ, ಸುಂದರ, ಕೆ.ಎಂ.ಬಶೀರ್, ಧನ್ಯ, ಕೆ.ಜಿ.ಫೀಟರ್, ಮಂದ್ರಿರ ಮೋಹನ್ ದಾಸ್ ಅವರು ಅನುಷ್ಠಾನ ಮತ್ತಿತರ ವಿಷಯಗಳನ್ನು ಪ್ರಸ್ತಾಪಿಸಿದರು.

Highlights - 22ರಂದು ಗ್ಯಾರಂಟಿ ಅನುಷ್ಠಾನ ಕುರಿತು ಕಾರ್ಯಾಗಾರ ‘ಮಾಹಿತಿ ಮಳಿಗೆ’ ನಿರ್ಮಾಣಕ್ಕೆ ಸಿಇಒ ಸೂಚನೆ ಅನುಷ್ಠಾನ, ಸಮಸ್ಯೆಗಳನ್ನು ಪ್ರಸ್ತಾಪಿಸಿದ ಸದಸ್ಯರು

ಪಂಚ ಗ್ಯಾರಂಟಿಗಳ ಸ್ಥಿತಿಗತಿ

156 ಮನೆಗಳಿಗಿಲ್ಲ ಗೃಹಜ್ಯೋತಿ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮಾತನಾಡಿ ‘156 ವಿದ್ಯುತ್ ಮೀಟರ್ ಹೊಂದಿರುವ ಮನೆಗಳಿಗೆ ಆಧಾರ್ ಸಂಖ್ಯೆ ಸರಿ ಹೊಂದದೇ ಇರುವ ಕಾರಣ ಗೃಹಜ್ಯೋತಿ ಯೋಜನೆಗೆ ಸೇರ್ಪಡೆ ಸಾಧ್ಯವಾಗಿಲ್ಲ. ಈಗ ಈ ಯೋಜನೆಯಡಿ ಶೇ 99.17ರಷ್ಟು ಪ್ರಗತಿ ಸಾಧಿಸಲಾಗಿದೆ. ಸುಮಾರು ₹ 73.50 ಕೋಟಿ ಸಹಾಯಧನ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.  ಗೃಹಲಕ್ಷ್ಮಿ ಯೋಜನೆ; ಶೇ 98ರಷ್ಟು ಸಾಧನೆ ಗೃಹಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ಪ್ರಸನ್ನ ಕುಮಾರ್ ‘ಜಿಲ್ಲೆಯಲ್ಲಿ ಪಡಿತರ ಚೀಟಿ ಆಧಾರದ ಮೇಲೆ 122323 ಗುರಿ ನಿಗದಿಪಡಿಸಲಾಗಿದ್ದು ಇದರಲ್ಲಿ 120872 ಮಂದಿ ನೋಂದಣಿಯಾಗಿ ಶೇ 98.81ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಹೇಳಿದರು. 

ದಿನವೂ ಸರಾಸರಿ 15921 ಪ್ರಯಾಣಿಕರು ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೆಎಸ್‍ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕ ಈರಸಪ್ಪ ‘ಇಲ್ಲಿಯವರೆಗೆ 1.35 ಕೋಟಿಗೂ ಹೆಚ್ಚು ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 321814 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಾರಿಗೆ ಸಂಸ್ಥೆ ವಾಹನದಲ್ಲಿ ಪ್ರಯಾಣಿಸಿದ್ದು ಶಕ್ತಿ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಸರಾಸರಿ ಪ್ರತೀ ದಿನ 15921 ಪ್ರಯಾಣಿಕರು ಪ್ರಯಾಣಿಸಿದ್ದಾರೆ’ ಎಂದು ಹೇಳಿದರು.  ಯುವನಿಧಿ: ₹ 39.1 ಕೋಟಿ ಪಾವತಿ ಯುವನಿಧಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಮಂಜುನಾಥ್ ‘ಅಕ್ಟೋಬರ್ ಅಂತ್ಯದವರೆಗೆ 1563 ಪದವೀಧರರು ಮತ್ತು 22 ಡಿಪ್ಲೋಮಾ ಪದವೀಧರರು ಒಟ್ಟು 1585 ಮಂದಿ ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿದ್ದು ಫಲಾನುಭವಿಗಳಿಗೆ ಡಿಬಿಟಿ ಮೂಲಕ ಅಕ್ಟೋಬರ್ ಅಂತ್ಯದವರೆಗೆ ₹ 39.1 ಕೋಟಿ ಪಾವತಿಯಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.