
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ನಡೆದ ದೇವರ ಕಾಡು ಕುರಿತ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರೊ.ಶಿವಕುಮಾರ್ ಉದ್ಘಾಟಿಸಿದರು. ಪ್ರೊ.ಕುಶಾಲಪ್ಪ, ಕೇಶವಕಾಮತ್, ಎಂ.ಜಿ.ನಾಗರಾಜು, ಟಿ.ಪಿ.ರಮೇಶ್ ಪಾಲ್ಗೊಂಡಿದ್ದರು
ಗೋಣಿಕೊಪ್ಪಲು: ಆಯಾ ಊರಿನ ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸಿಕೊಂಡು ಸಾಮರಸ್ಯ ಕಾಪಾಡುವ ವ್ಯವಸ್ಥೆ ದೇವರಕಾಡಿಗೆ ಇದೆ ಎಂದು ಕೊಡಗು ಮಾಡೆಲ್ ಫಾರೆಸ್ಟ್ ಅಧ್ಯಕ್ಷ ಪ್ರೊ.ಕುಶಾಲಪ್ಪ ಹೇಳಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕ ಹಾಗೂ ಕೊಡಗು ಮಾಡೆಲ್ ಫಾರೆಸ್ಟ್ ವತಿಯಿಂದ ಸುಲೋಚನಾ ಎಂ.ಜಿ.ನಾಗರಾಜು ದತ್ತಿ ಕಾರ್ಯಕ್ರಮದಲ್ಲಿ ಕೊಡಗಿನ ದೇವರ ಕಾಡುಗಳ ಸಂರಕ್ಷಣೆ ಕುರಿತ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಕೊಡಗಿನಲ್ಲಿ 1,215 ದೇವರಕಾಡುಗಳಿವೆ. ಇವುಗಳಲ್ಲಿ 165ಕ್ಕೂ ಹೆಚ್ಚು ದೇವರುಗಳಿವೆ. ಇವು ಒಂದು ಜನಾಂಗಕ್ಕೆ ಸೇರಿದವಲ್ಲ. ಕೊಡವ ಮಾಪಿಳ್ಳೆ ದೇವರ ಕಾಡುಗಳೂ ಇರುವುದು ಇದಕ್ಕೆ ನಿದರ್ಶನ ಎಂದು ಹೇಳಿದರು.
ದೇವರ ಕಾಡುಗಳಲ್ಲಿರುವ ಅಯ್ಯಪ್ಪ, ಭದ್ರಕಾಳಿ ಮೊದಲಾದ ದೇವರುಗಳಿಗೆ ಗುಡಿಗಳಿಲ್ಲ. ಅವು ತೆರೆದ ಬಯಲಿನಲ್ಲಿ ಇದ್ದು, ಆಕಾಶಕ್ಕೆ ಮುಖ ಮಾಡಿಕೊಂಡು ಮಳೆ ಕರೆಯುತ್ತಿವೆ. ಇವುಗಳ ಜತೆಯಲ್ಲಿಯೇ ಬೇಟೆ ನಾಯಿಗಳೂ ಇವೆ. ದೇವರ ಕಾಡುಗಳು ಧಾರ್ಮಿಕ ಸಂಪ್ರದಾಯ, ಸಂಸ್ಕೃತಿ ಉಳಿಸುವ ಜತೆಗೆ ಊರಿನ ನ್ಯಾಯ ಪಂಚಾಯಿತಿ ಮಾಡುವ ತಾಣಗಳಾಗಿವೆ. ನಮ್ಮ ಹಿರಿಯರು ದೇವರ ಕಾಡಿಗೆ ಚಪ್ಪಲಿ ಹಾಕಿ ಹೋಗುತ್ತಿರಲಿಲ್ಲ. ಹೇಸಿಗೆ ಮಾಡುವಂತಿರಲಿಲ್ಲ. ಅದೊಂದು ದೈವಿಕ ನೆಲೆಯಾಗಿದೆ. ಈ ಕಾರಣದಿಂದಲೇ ಇಡೀ ದೇಶದಲ್ಲಿಯೇ ಒಂದು ವಿಶಿಷ್ಟ ಮಾದರಿಯಾಗಿ ಕೊಡಗಿನಲ್ಲಿ ದೇವರ ಕಾಡುಗಳು ಉಳಿದಿವೆ ಎಂದು ಹೇಳಿದರು.
‘ವಿಶ್ವದಲ್ಲಿಯೇ ದೇವರ ಹೆಸರಿನಲ್ಲಿ ಉಳಿದಿರುವ ಈ ಕಾಡುಗಳ ವೈಶಿಷ್ಟ್ಯತೆ ಬಗ್ಗೆ 8 ರಾಷ್ಟ್ರಗಳ ಸಂಶೋಧಕರು ಬಂದು 4 ವರ್ಷಗಳ ಕಾಲ ಸಂಶೋಧನೆ ಮಾಡಿ ಹೋಗಿದ್ದಾರೆ. ಇಂಥ ದೇವರು ಕಾಡು ಇಂದು ಕ್ಷೀಣಿಸುವ ಆತಂಕ ಎದುರಾಗಿದೆ. ನಮ್ಮ ಮಕ್ಕಳಿಗೆ ದೇವರ ಕಾಡುಗಳು ಬಗ್ಗೆ ಇರುವ ಹಾಡುಗಳು, ಕಥೆಗಳನ್ನು ಹೇಳುವ ಮೂಲಕ ಕಾಡಿನ ಮಹತ್ವ ತಿಳಿಸಿಕೊಡಬೇಕಾಗಿದೆ. ಕಾನೂನಿನ ಮೂಲಕ ದೇವರ ಕಾಡು ಉಳಿಸಲು ಸಾಧ್ಯವಿಲ್ಲ. ಸಂಸ್ಕೃತಿ, ಸಂಪ್ರದಾಯಗಳ ಮೂಲಕ ದೇವರ ಕಾಡು ಉಳಿಸಬೇಕು’ ಎಂದು ಹೇಳಿದರು.
ಸಂಶೋಧಕ ಎಂ.ಜಿ.ನಾಗರಾಜು ದೇವರ ಕಾಡುಗಳ ಚಿತ್ರಣವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಾ ಕೊಡಗಿನ ದೇವರ ಕಾಡುಗಳು ಕೇವಲ ಹಿಂದು ಸಂಸ್ಕೃತಿಯಿಂದ ಕೂಡಿಲ್ಲ. ಇಲ್ಲಿ ಬೌದ್ಧ, ಜೈನ ಸಂಸ್ಕೃತಿಗೆ ಸೇರಿದ ದೇವರುಗಳಿವೆ. ಇಲ್ಲಿನ ತೇರದಾಳ (ತೆರೆದಹಾಳ) ಮಂಚಳ್ಳಿ (ಮಂಜುಶ್ರೀ) ಮೊದಲಾದ ಊರಿನ ಹೆಸರುಗಳು ಕೂಡ ಬೌದ್ಧನೆಲೆಯಲ್ಲಿದ್ದಂತೆ ಕಂಡು ಬರುತ್ತಿವೆ ಎಂದು ವಿವರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಅರಣ್ಯ ಮಹಾವಿದ್ಯಾಲಯದ ಡೀನ್ ಪ್ರೊ.ಶಿವಕುಮಾರ್ ಮಾತನಾಡಿ, ‘ಮಾನವನ ದುರಾಸೆಯಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ. ಪರಿಸರವನ್ನು ಕಾಪಾಡುತ್ತಿದ್ದ ದೇವರನ್ನೇ ಇಂದು ನಾವು ರಕ್ಷಿಸಬೇಕಾದ ದುಸ್ಥಿತಿಗೆ ಬಂದಿದ್ದೇವೆ’ ಎಂದು ಬದಲಾದ ವ್ಯವಸ್ಥೆ ಕುರಿತು ಕಳವಳ ವ್ಯಕ್ತಪಡಿಸಿದರು.
'20 ವರ್ಷದ ಹಿಂದೆ ಗೋಣಿಕೊಪ್ಪಲಿಗೆ ಬಂದಾಗ ಕೊಡಗಿನ ಕಿತ್ತಳೆ ಹಣ್ಣಿನ ಪರಿಮಳ ನಮ್ಮನ್ನು ಸ್ವಾಗತಿಸುತ್ತಿತ್ತು. ಇಂದು ಕಾಣದಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಇರುವ ವಿಶಿಷ್ಟವಾದ ಪರಿಸರ ನಾವು ಉಳಿಸಿಕೊಳ್ಳಬೇಕಾಗಿದೆ. ದೈವ ಎಂಬ ಭಯದಿಂದಲಾದರೂ ಕೊಡಗಿನಲ್ಲಿ ದೇವರಕಾಡುಗಳು ಉಳಿದಿರುವುದು ಶ್ಲಾಘನೀಯ ಎಂದರು.
ಪೊನ್ನಂಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಳೆರ ದಯಾ ಚಂಗಪ್ಪ, ಹೋಬಳಿ ಘಟಕದ ಅದ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ. ಶೀಲಾಬೋಪಣ್ಣ, ಟಿ.ಆರ್.ವಿನೋದ್, ರಾಮಕೃಷ್ಣ,ಸಹನಾ ಕಾಂತಬೈಲು ಹಾಜರಿದ್ದರು.
ದೇವರ ಹೆಸರಿನಲ್ಲಿ ನಮ್ಮ ಹಿರಿಯರು ಕಾಡನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ. 1873ರಲ್ಲಿ ಮೊದಲ ಬಾರಿಗೆ ಬ್ರಿಟಿಷರು ದೇವರ ಕಾಡನ್ನು ಉಳಿಸಲು ಕಾನೂನು ರೂಪಿಸಿದರುಟಿ.ಪಿ.ರಮೇಶ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ
ವಿಶ್ವಕ್ಕೆ ಮಾದರಿಯಾಗಿರುವ ದೇವರಕಾಡಿಗೆ ಒಂದು ಸಂಸ್ಕೃತಿ ಇರುವಂತೆಯೇ ಸಾಸ್ಥಿಕ ರೂಪವೂ ಇದೆಡಾ.ಎಂ.ಜಿ.ಚಂದ್ರಕಾಂತ್ ಬೆಂಗಳೂರಿನ ನಿವೃತ್ತ ಕೃಷಿ ವಿಜ್ಞಾನಿ.
ಶಾಲಾ ಕಾಲೇಜಿನ ವಿದ್ಯಾರ್ಥಿಗಳನ್ನು ಒಂದು ದಿನದಮಟ್ಟಿಗೆ ದೇವರಕಾಡಿಗೆ ಕರೆದುಕೊಂಡು ಹೋಗಿ ಅದರ ಬಗ್ಗೆ ಮಾಹಿತಿ ಕೊಡುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಿಕ್ಷಕರು ಮಾಡಬೇಕುಎಂ.ಪಿ.ಕೇಶವಕಾಮತ್ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ
ಕೊಡಗಿನಲ್ಲಿ ಹಿಂದೆ 11 ಸಾವಿರ ಎಕರೆ ದೇವರ ಕಾಡಿತ್ತು. ಇಂದು 9 ಸಾವಿರ ಎಕರೆ ಮಾತ್ರ ಉಳಿದಿದೆ. ರಕ್ಷಕರೇ ದೇವರಕಾಡಿನ ಭಕ್ಷಕರಾಗಿದ್ದಾರೆ-ಗಿಣಿ ಗಣಪತಿ ಅಧ್ಯಕ್ಷ ವನಭದ್ರಕಾಳಿ ದೇವಸ್ಥಾನ ಸಮಿತಿ ಹಾತೂರು.
ಕೊಡಗಿನಲ್ಲಿ ಶೇ33 ರಷ್ಟು ಅರಣ್ಯ ಇರಬೇಕು ಎಂದು ಬ್ರಟಿಷರೇ ಕಾಯ್ದೆ ರೂಪಿಸಿದ್ದರು. ಅಷ್ಟು ಅರಣ್ಯವನ್ನು ನಾವು ರಕ್ಷಿಸಬೇಕಿದೆಕೋಡಿರ ಲೋಕೇಶ್ ನಿವೃತ್ತ ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.