ವಿರಾಜಪೇಟೆ: ಜನಪರ ಕಾಳಜಿಯಿಂದ ಜಾರಿಗೊಳಿಸಿದ ಯೋಜನೆಗಳು ಜನತೆಯ ಮನದಲ್ಲಿ ಶಾಶ್ವತವಾಗಿ ನೆಲೆಗೊಳ್ಳುತ್ತವೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.
ಸಮೀಪದ ಕೆದಮುಳ್ಳೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಎ.ಎಸ್. ಪೊನ್ನಣ್ಣ ಅವರ ಜನ್ಮದಿನದ ಅಂಗವಾಗಿ ಗ್ರಾಮದ ಸಮುದಾಯ ಭವನದಲ್ಲಿ ಬುಧವಾರ ನಡೆದ ಅಂಗವಿಕಲರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕುಡಿಯುವ ನೀರು, ರಸ್ತೆ, ವಿದ್ಯುತ್, ನಿವೇಶನ ಮತ್ತು ಹಕ್ಕುಪತ್ರ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ತಕ್ಷಣದಲ್ಲೇ ಇವೆಲ್ಲಕ್ಕು ಪರಿಹಾರವೊದಗಿಸುವುದು ಕಷ್ಟ. ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಹಂತಹಂತವಾಗಿ ಪರಿಹರಿಸಲಾಗುವುದು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಅನುದಾನಗಳನ್ನು ಬಿಡುಗಡೆ ಮಾಡಿದ್ದು ಮಳೆಯ ನಂತರದಲ್ಲಿ ರಸ್ತೆ ಮತ್ತು ಇನ್ನಿತರ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ವಿಧಾನಸಭಾ ಕ್ಷೇತ್ರದಲ್ಲಿ ವಸತಿ ರಹಿತರು ಮತ್ತು ಹಕ್ಕುಪತ್ರದಿಂದ ವಂಚಿತರಿಗಾಗಿ ವಿಶೇಷ ಅಭಿಯಾನ ಆರಂಭಿಸಲಾಗಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ದಿಗೆ ಶಾಸಕರು ಶಕ್ತಿಮೀರಿ ಪ್ರಯತ್ನಿಸುತ್ತಿದ್ದಾರೆ. ಕಾರ್ಯಕರ್ತರು ಅಭಿವೃದ್ದಿ ಕಾರ್ಯಗಳ ಮಾಹಿತಿಯನ್ನು ಜಿಲ್ಲೆಯ ಮನಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಬೇಕು ಎಂದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರು ಸಭೆಯಲ್ಲಿ ಮಾತನಾಡಿದರು. ಕೆದಮುಳ್ಳೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಡಿಕೇರಿಯಂಡ ಮಹೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಸುಮಾರು 82 ಮಂದಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಳೇಟಿರ ಜೆಫ್ರಿ ಉತ್ತಪ್ಪ, ಸದಸ್ಯರಾದ ಎಂ.ಎಂ. ಇಸ್ಮಾಯಿಲ್, ಪವಿತ್ರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹನೀಫ್, ಬ್ಲಾಕ್ ಅಧ್ಯಕ್ಷ ಕೊಳಮಂಡ ರಫಿಕ್, ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಮಿಟ್ಟು ಅಯ್ಯಪ್ಪ, ಜಿತನ್, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.