ADVERTISEMENT

ಕೊಡವ ಮಕ್ಕಡ ಕೂಟದ 117ನೇ ಕೃತಿ ‘ಕೊಡಗ್‌ಲ್ ಆನೆ-ಮಾಲವ ಪಣಂಗಲ್’ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2025, 4:18 IST
Last Updated 18 ಆಗಸ್ಟ್ 2025, 4:18 IST
ಮಡಿಕೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ಕೊಡವ ಮಕ್ಕಡ ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರ ‘ಕೊಡಗ್‌ಲ್ ಆನೆ-ಮಾಲವ ಪಣಂಗಲ್’ ಎಂಬ ಕೃತಿಯನ್ನು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಲೋಕಾರ್ಪಣೆ ಮಾಡಿದರು
ಮಡಿಕೇರಿಯ ಪತ್ರಿಕಾ ಭವನದಲ್ಲಿ ಭಾನುವಾರ ಕೊಡವ ಮಕ್ಕಡ ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರ ‘ಕೊಡಗ್‌ಲ್ ಆನೆ-ಮಾಲವ ಪಣಂಗಲ್’ ಎಂಬ ಕೃತಿಯನ್ನು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಲೋಕಾರ್ಪಣೆ ಮಾಡಿದರು   

ಮಡಿಕೇರಿ: ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಮಧ್ಯೆ ‘ಕೊಡಗ್‌ಲ್ ಆನೆ-ಮಾಲವ ಪಣಂಗಲ್’ ಎಂಬ ಕೃತಿಯನ್ನು ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಲೋಕಾರ್ಪಣೆ ಮಾಡಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಕೊಡವ ಮಕ್ಕಡ ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ಬರಹಗಾರ್ತಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಅವರ ಈ ಕೃತಿ ಕೊಡಗು ಮಾತ್ರವಲ್ಲ ರಾಜ್ಯ ಮತ್ತು ದೇಶದಲ್ಲೇ ಹೆಚ್ಚಾಗುತ್ತಿರುವ ಕಾಡಾನೆ– ಮಾನವ ಸಂಘರ್ಷದ  ಕುರಿತು ಅನೇಕ ಹೊಳಹುಗಳನ್ನು ಸಾಹಿತ್ಯಸಕ್ತರ ಮುಂದೆ ತೆರೆದಿಟ್ಟಿತು.

ಲೇಖಕಿ ಚೀಯಕಪೂವಂಡ ಶ್ವೇತನ್ ಚಂಗಪ್ಪ ಮಾತನಾಡಿ, ‘ಕಾಡಾನೆಗಳು ನಾಡಿಗೆ ಬರುತ್ತಿವೆ ಎನ್ನುವ ಮಾತು ತಪ್ಪು, ಆನೆಗಳ ಜಾಗ ಮತ್ತು ಮಾರ್ಗವನ್ನು ಮಾನವನೇ ಅತಿಕ್ರಮಣ ಮಾಡಿಕೊಂಡಿದ್ದಾನೆ. ಇದರಿಂದ ಅವುಗಳು ದಾರಿ ತಪ್ಪುತ್ತಿವೆ’ ಎಂದು ಪ್ರತಿಪಾದಿಸಿದರು.

ADVERTISEMENT

ಆನೆಯು ಅತಿ ಬುದ್ದಿವಂತ ಮಾತ್ರವಲ್ಲ ಅದು ಅತಿ ಒಳ್ಳೆಯ ಗುಣಗಳಿರುವ ಪ್ರಾಣಿ. ಅದು ನಡೆಯುವ ಹಾದಿಯಲ್ಲಿ ಕಾಡುಕುರಿ ಸೇರಿದಂತೆ ಇತರೆ ಪ್ರಾಣಿಗಳ ಸಾಗಿ ಆಹಾರ ಸೇವಿಸುತ್ತವೆ. ತಾನು ಸೇವಿಸುವ ಆಹಾರದಲ್ಲಿ ಸಣ್ಣಪುಟ್ಟ ಪ್ರಾಣಿ, ಪಕ್ಷಿಗಳಿಗೆ ಉಳಿಸಿ ಹೋಗುವ ಗುಣವಿದೆ ಎಂದು ಹೇಳಿದರು.

ಜ್ಞಾನೋದಯ ಶಾಲೆಯ ಸಂಯೋಜಕ ಹಾಗೂ ಸಮಾಜಸೇವಕ ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ‘ಶ್ವೇತನ್ ಚಂಗಪ್ಪ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು, ಆನೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಕ್ಷೇತ್ರ ಕಾರ್ಯ ನಡೆಸಿ ಈ ಕೃತಿ ರಚಿಸಿದ್ದಾರೆ. ಕೊಡವ ಬರಹಗಾರರನ್ನು ಉಳಿಸಲು ಕೊಡವ ಮಕ್ಕಡ ಕೂಟ ಅಪಾರ ಶ್ರಮ ವಹಿಸಿದೆ‌. ಸರಾಸರಿ 35 ದಿನಕ್ಕೆ ಒಂದು ಪುಸ್ತಕದಂತೆ ಪ್ರಕಟಿಸಿದೆ. ಈ ಸಂಘಟನೆ ಕೊಡವ ಸಂಸ್ಕೃತಿಯಲ್ಲಿ ದಾಖಲೆಯಾಗಬೇಕು’ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ‘ಇಂದು ಪರಿಸರ ದುರ್ಬಳಕೆಯಾಗುತ್ತಿದ್ದು, ಮಾನವನ ದುರಾಸೆಯೇ ಕಾಡಾನೆ ದಾಳಿಗೆ ಕಾರಣ’ ಎಂದು ಅಭಿಪ್ರಾಯಪಟ್ಟರು.

ಹಿಂದೆ ಕೊಡಗಿನಲ್ಲಿ ದೇವರಕಾಡು, ಗೋಮಾಳಗಳ ಮೂಲಕ ಕಾಡುಗಳನ್ನು ರಕ್ಷಿಸಲಾಗುತ್ತಿತ್ತು. ಕಕ್ಕಡ, ಕೈಲ್ ಪೊಳ್ದ್, ಪುತ್ತರಿ, ಕಾವೇರಿ ತೀರ್ಥೋದ್ಭವ ಸೇರಿದಂತೆ ಕೊಡಗಿನ ಹಬ್ಬಗಳೆಲ್ಲವೂ ಪರಿಸರಕ್ಕೆ ಪೂರಕವಾಗಿದೆ. ಹಿರಿಯರು ಪರಿಸರವನ್ನು ಪೂಜಿಸುತ್ತಿದ್ದರು, ಆದರೆ ಇಂದು ಮಾನವನ ದುರಾಸೆ ಹೆಚ್ಚಾಗಿ, ಪರಿಸರದ ಮೇಲೆ ಆಕ್ರಮಣವಾಗುತ್ತಿದೆ. ರೆಸಾರ್ಟ್, ಹೋಂಸ್ಟೇ, ಲೇಔಟ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮನುಷ್ಯ ಮಾಡುತ್ತಿರುವ ತಪ್ಪಿನಿಂದಲೇ ಕಾಡಾನೆಗಳ ದಾಳಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಪುಸ್ತಕವನ್ನು ರೈತರಿಗೆ, ಗ್ರಂಥಾಲಯಗಳಿಗೆ ನೀಡಲಾಗುವುದು. ಭಾಷಾಂತರ ಮಾಡುವುದಕ್ಕೂ ಸಿದ್ಧವಿದ್ದು, ಆಸಕ್ತರು ಸಂಪರ್ಕಿಸಬಹುದು’ ಎಂದರು.

ಪಟ್ಟಣ ಸಹಕಾರ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ಇಟ್ಟಿರ ಸರೋಜಿನಿ ಪೂವಯ್ಯ ಭಾಗವಹಿಸಿದ್ದರು.

ಯುವ ಜನರಲ್ಲಿ ಜಾಗೃತಿ ಮೂಡಿಸಬೇಕು; ಮೇಜರ್ ಬಿ.ರಾಘವ

ಕಾಡಾನೆ– ಮಾನವ ಸಂಘರ್ಷ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ.ಬಿ.ರಾಘವ ಅಭಿಪ್ರಾಯಪಟ್ಟರು. ಅರಣ್ಯ ನಾಶ ಟಿಂಬರ್ ಲಾಬಿ ಪ್ರಾಣಿಗಳಿಗೆ ಆಹಾರದ ಕೊರತೆ ಮಾನವನ ಅತಿಕ್ರಮಣ ಮಿತಿ ಮೀರುತ್ತಿರುವ ಪ್ರವಾಸಿಗರ ಸಂಖ್ಯೆ ಅತಿಯಾದ ತ್ಯಾಜ್ಯ ಎಂಬಿತ್ಯಾದಿ ವಿಚಾರಗಳು ಕಾಡಾನೆಗಳ ದಾಳಿಗೆ ಕಾರಣವಾಗುತ್ತಿದೆಯೇ ಎನ್ನುವ ಕುರಿತೂ ಚಿಂತನೆ ನಡೆಯಬೇಕಿದೆ. ಯುವ ಸಮೂಹ ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಕಾಳಜಿ ತೋರಬೇಕು ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಕೊಡವ ಎಂ.ಎ ಪದವಿ ಪಡೆದ 9 ವಿದ್ಯಾರ್ಥಿಗಳು ಸಾಹಿತಿಗಳಾಗಿದ್ದಾರೆ. ಈ ಪರಂಪರೆ ಮುಂದುವರಿಯಬೇಕಿದ್ದು ಕೊಡವ ಸ್ನಾತಕೋತ್ತರ ಪದವಿಗೆ ನಾಗರಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.

ಇದೊಂದು ಸಂಶೋಧನಾತ್ಮಕ ಪುಸ್ತಕ

ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ ‘ಕೊಡಗ್‌ಲ್ ಆನೆ-ಮಾಲವ ಪಣಂಗಲ್’ ಪುಸ್ತಕ ಸಂಶೋಧನಾತ್ಮಕ ಕೃತಿ.  ಆನೆಯ ವಿಚಾರವನ್ನು ಬರಹಗಾರರು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿ ಪರಿಸರ ಪ್ರೇಮಿಗಳು ಪ್ರಾಣಿ ಪ್ರಿಯರು ಈ ಕೃತಿಯನ್ನು ಓದಲೇ ಬೇಕು ಎಂದು ತಿಳಿಸಿದರು. ಓದುಗರು ಪುಸ್ತಕಗಳನ್ನು ಓದಿದರೆ ಸಾಲದು ಅದರಲ್ಲಿರುವ ಸರಿ ತಪ್ಪುಗಳನ್ನು ವಿಶ್ಲೇಷಣೆ ಮಾಡಬೇಕು ಮತ್ತು ಬರಹಗಾರರ ಗಮನಕ್ಕೆ ತರಬೇಕು. ಈ ರೀತಿ ಮಾಡುವುದರಿಂದ ಬರಹಗಾರರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಬರಹಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗುತ್ತದೆ ಎಂದರು. ಪುಸ್ತಕಗಳನ್ನು ಮುದ್ರಣಕ್ಕೆ ನೀಡುವ ಮೊದಲು ಅಕ್ಷರದಲ್ಲಿನ ತಪ್ಪುಗಳನ್ನು ಪರಿಗಣಿಸಬೇಕು ಯಾವುದೇ ವಿಷಯಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಕಿವಿಮಾತೂ ಹೇಳಿದರು.

ಪುಸ್ತಕದ ಹೆಸರು: ಕೊಡಗ್‌ಲ್‌ ಆನೆ–ಮಾಲವ ಪಣಂಗಲ್

ಭಾಷೆ: ಕೊಡವ

ಲೇಖಕಿ: ಚೀಯಕಪೂವಂಡ ಶ್ವೇತನ್ ಚಂಗಪ್ಪ

ಪ್ರಕಾಶನ: ಕೊಡವ ಮಕ್ಕಡ ಕೂಟ

ಪುಟಗಳ ಸಂಖ್ಯೆ: 120

ಬೆಲೆ:₹ 200

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.