ADVERTISEMENT

ಬಜೆಟ್‌: ಕೊಡಗಿನಲ್ಲಿ ಗರಿಗೆದರಿದ ನಿರೀಕ್ಷೆ

‘ಕೊಡವ ಹಾಕಿ ಉತ್ಸವ’ಕ್ಕೆ ಸಿಗುವುದೇ ಪ್ರತ್ಯೇಕ ಅನುದಾನ?, ಘೋಷಣೆ ಆಗುವುದೇ ‘ಕ್ರೀಡಾ ವಿ.ವಿ’?

ಅದಿತ್ಯ ಕೆ.ಎ.
Published 8 ಮಾರ್ಚ್ 2021, 5:28 IST
Last Updated 8 ಮಾರ್ಚ್ 2021, 5:28 IST
ಅರಳಿರುವ ಕಾಫಿ ಹೂವು
ಅರಳಿರುವ ಕಾಫಿ ಹೂವು   

ಮಡಿಕೇರಿ: ನಾಲ್ಕು ವರ್ಷಗಳಿಂದ ಒಂದಲ್ಲಾ ಒಂದು ಕಾರಣಕ್ಕೆ, ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ‘ಕಾಫಿ ನಾಡು’ ಕೊಡಗು ಜಿಲ್ಲೆಗೆ ಈ ಬಾರಿಯಾದರೂ ಬಂಪರ್‌ ಕೊಡುಗೆ ಸಿಗುವುದೇ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ. ಮಾರ್ಚ್‌ 8ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ಬಜೆಟ್‌ ಮಂಡಿಸುತ್ತಿದ್ದು ನಿರೀಕ್ಷೆಗಳು ಗರಿಗೆದರಿವೆ. ಜಿಲ್ಲೆಯ ಸಮಸ್ಯೆಗಳಿಗೆ ಬಜೆಟ್‌ನಲ್ಲಿ ಪರಿಹಾರ ಕಲ್ಪಿಸುತ್ತಾರೆಯೇ ನೋಡಬೇಕಿದೆ.

2018ರ ಬಳಿಕ ಸತತವಾಗಿ ಭೂಕುಸಿತ, ಪ್ರವಾಹದ ಸಂಕಷ್ಟಕ್ಕೆ ಸಿಲುತ್ತಿರುವ ಜಿಲ್ಲೆಯೂ ಇನ್ನೂ ಮೊದಲಿನ ಸ್ಥಿತಿಗೆ ಮರಳಲು ಸಾಧ್ಯವಾಗಿಲ್ಲ. ಅದರಲ್ಲೂ ಕಾಫಿ ಬೆಳೆಗಾರರೂ ಸಮಸ್ಯೆ ಸುಳಿಯಲ್ಲಿದ್ದು, ಪ್ಯಾಕೇಜ್‌, ಸಾಲಮನ್ನಾ, ಉಚಿತ ವಿದ್ಯುತ್‌, ವಿದ್ಯುತ್‌ ಬಿಲ್‌ ಮನ್ನಾ ಮಾಡುವ ನಿರೀಕ್ಷೆಯಲ್ಲಿದ್ಧಾರೆ.

ಕೇಂದ್ರದ ಬಜೆಟ್‌ನಲ್ಲಿ ಕಾಫಿ ಬೆಳೆಗಾರರಿಗೆ ಯಾವುದೇ ‘ಪ್ಯಾಕೇಜ್‌ ಘೋಷಣೆ’ ಆಗಲಿಲ್ಲ. ಇದರಿಂದ ಬೆಳೆಗಾರರು ನಿರಾಸೆಗೆ ಒಳಗಾಗಿದ್ದಾರೆ. ಇದೀಗ ರಾಜ್ಯ ಬಜೆಟ್‌ ಮೇಲೆ, ಎಲ್ಲರ ಚಿತ್ತ ಹರಿದಿದ್ದು ಮುಖ್ಯಮಂತ್ರಿ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಜಿಲ್ಲೆಯ ಕಾಫಿ ಬೆಳೆಗಾರರ ನಿಯೋಗವು ಇತ್ತೀಚೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬಜೆಟ್‌ನಲ್ಲಿ ನೆರವು ಘೋಷಣೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಜತೆಗೆ, ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಲೆನಾಡು ಭಾಗದ ಶಾಸಕರು ಅಡಿಕೆ ಬೆಳೆಗಾರರಿಗೆ ಪ್ಯಾಕೇಜ್‌ ಘೋಷಣೆ ಮಾಡುವಂತೆ ಕೋರಿಕೊಂಡಿದ್ದಾರೆ. ಅದಕ್ಕೂ ಈ ಬಜೆಟ್‌ನಲ್ಲಿ ಮನ್ನಣೆ ಸಿಕ್ಕರೆ ಜಿಲ್ಲೆಯ ಕೆಲವು ಭಾಗದಲ್ಲಿ ಅಡಿಕೆ ಬೆಳೆಯುವ ಕೃಷಿಕರಿಗೆ ಅನುಕೂಲ ಆಗಲಿದೆ.

ADVERTISEMENT

ಕ್ರೀಡಾ ವಿ.ವಿ?:
ಕೊಡಗು ಕ್ರೀಡಾ ಕಲಿಗಳ ತವರು. ಹಾಕಿ, ಕ್ರಿಕೆಟ್‌, ಬ್ಯಾಡ್ಮಿಂಟನ್‌... ಹೀಗೆ ನಾನಾ ಕ್ರೀಡೆಗಳಲ್ಲಿ ಮಿಂಚುತ್ತಿದ್ದಾರೆ. ಜಿಲ್ಲೆಯ ಪ್ರತಿಯೊಬ್ಬರಲ್ಲೂ ಕ್ರೀಡಾ ಉತ್ಸಾಹವಿದೆ. ಆದರೆ, ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮತ್ತು ಸ್ಫೂರ್ತಿ ತುಂಬಬಹುದಾದ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಸೂಕ್ತ ಕ್ರೀಡಾಂಗಣ ಕೊರತೆಯಿದೆ. ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ‘ಕ್ರೀಡಾ ವಿಶ್ವವಿದ್ಯಾಲಯ’ವೊಂದನ್ನು ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಸ್ಥಾಪಿಸಬೇಕು ಎಂದು ಬೆಂಗಳೂರು ಕೊಡವ ಸಮಾಜದ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿಕೊಂಡಿದೆ. ಅದನ್ನು ಬಜೆಟ್‌ನಲ್ಲಿ ಬಿಎಸ್‌ವೈ ಘೋಷಣೆ ಮಾಡುತ್ತಾರೆಯೇ ಎಂಬುದನ್ನು ನೋಡಬೇಕಿದೆ.

ಇನ್ನು ಪ್ರತಿವರ್ಷ ಜಿಲ್ಲೆಯಲ್ಲಿ ನಡೆಯುವ ಕೊಡವ ಹಾಕಿ ಹಬ್ಬಕ್ಕೆ, ಬಜೆಟ್‌ನಲ್ಲಿ ₹ 5 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿ, ಬೆಂಗಳೂರು ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜಗಳ ನಿಯೋಗವು ಸಿ.ಎಂ ಭೇಟಿ ಮಾಡಿ ಆಗ್ರಹಿಸಿದೆ. ಅದಕ್ಕೂ ಪ್ರಾಶಸ್ತ್ಯ ಸಿಕ್ಕೀತೇ ನೋಡಬೇಕಿದೆ.

ಆರೋಗ್ಯ ಕ್ಷೇತ್ರ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೂ ಅನುದಾನ ನೀಡಿದರೆ ಅನುಕೂಲ. ಮುಖ್ಯರಸ್ತೆಗಳು ಮಾತ್ರ ಅಭಿವೃದ್ಧಿ ಆಗಿವೆ. ಗ್ರಾಮೀಣ ರಸ್ತೆಗಳ ಪಾಡು ಹೇಳತೀರದು. ಕಾವೇರಿ ನದಿ ಹೊರತು ಪಡಿಸಿ ಬೇರೆ ಯಾವ ಹಳ್ಳ, ಉಪ ನದಿಗಳಲ್ಲೂ ಹೊಳೆತ್ತುವ ಕಾಮಗಾರಿ ನಡೆಯುತ್ತಿಲ್ಲ. ಅದಕ್ಕೂ ಅನುದಾನ ಮೀಸಲಿಡಬೇಕು ಎಂದು ಹೇಳುತ್ತಾರೆ ಮಡಿಕೇರಿಯ ಜಗದೀಶ್‌.

ವನ್ಯಜೀವಿ ಉಪಟಳ– ಪರಿಹಾರ ಕಲ್ಪಿಸುತ್ತಾರೆಯೇ?:
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ವನ್ಯಜೀವಿ ಹಾಗೂ ಮಾನವ ಸಂಘರ್ಷ ಮಿತಿಮೀರುತ್ತಿದೆ. ಕಾಡಾನೆ ಹಾಗೂ ಹುಲಿಗಳು ನಾಡಿಗೆ ಲಗ್ಗೆಯಿಡುತ್ತಿದ್ದು, ಕಾಫಿ ತೋಟದಲ್ಲಿ ಕೆಲಸವನ್ನೇ ಸ್ಥಗಿತಗೊಳ್ಳಿಸುವ ಸ್ಥಿತಿಯಿದೆ. ದಕ್ಷಿಣ ಕೊಡಗಿನಲ್ಲಿ ಹುಲಿ ಸೆರೆ ಕಾರ್ಯಾಚರಣೆಯು, ಯಶಸ್ವಿಯಾಗಿಲ್ಲ. ವನ್ಯಜೀವಿ ಉಪಟಳ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಬೇಡಿಕೆಯೂ ಇದೆ. ಅದಕ್ಕೆ ಬಜೆಟ್‌ನಲ್ಲಿ ಯಾವ ರೀತಿಯಲ್ಲಿ ಪರಿಹಾರ ಕಲ್ಪಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.