ADVERTISEMENT

ಮಡಿಕೇರಿ: ಧರೆಗಿಳಿಯಲಿದು ಬೇಗೆ ತಣಿಸಲಿದೆಯೇ ಅಶ್ವಿನಿ’?

ಯುಗಾದಿಯ ನಂತರ ಮಳೆ ಬೀಳುವ ನಿರೀಕ್ಷೆ ಜನರಲ್ಲಿ

ಕೆ.ಎಸ್.ಗಿರೀಶ್
Published 12 ಏಪ್ರಿಲ್ 2024, 6:04 IST
Last Updated 12 ಏಪ್ರಿಲ್ 2024, 6:04 IST
ಮಳೆ ಸುರಿಯುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)
ಮಳೆ ಸುರಿಯುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)   

ಮಡಿಕೇರಿ: ಕೊಡಗಿನಲ್ಲಿಯೂ ರಣಬಿಸಿಲು ಎಲ್ಲೆಡೆ ವ್ಯಾಪಿಸಿದ್ದು, ಜನಮಾನಸವನ್ನು ಇನ್ನಿಲ್ಲದಂತೆ ಹಿಂಡುತ್ತಿದೆ. ರೈತರು, ಬೆಳೆಗಾರರು ಬಾಡುತ್ತಿರುವ ಬೆಳೆಗಳನ್ನು ಕಂಗಾಲಾಗಿದ್ದಾರೆ. ಎಲ್ಲೆಡೆ ಜನರು ಹದವಾದ ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಸಾಮಾನ್ಯವಾಗಿ ನೂತನ ಸಂವತ್ಸರದ ಮೊದಲ ಹಬ್ಬ ಯುಗಾದಿಯ ನಂತರ ಮಳೆ ಬಿದ್ದು, ಬಿಸಿಲಿನ ಬೇಗೆಯನ್ನು ತಣಿಸುತ್ತದೆ ಎಂಬುದು ಜನರ ಭಾವನೆ. ಅದರಂತೆ, ಈ ಸಂವತ್ಸರದಲ್ಲಿ ಹುಟ್ಟುವ ಮೊದಲ ಮಳೆ ಅಶ್ವಿನಿಯ ಮೇಲೆ ಭರಪೂರ ನಿರೀಕ್ಷೆಯನ್ನು ಕೃಷಿಕರು ಇಟ್ಟುಕೊಂಡಿದ್ದಾರೆ.

ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಇಂದಿಗೂ ಹೆಚ್ಚಿನ ಜನರು ಮಳೆ ನಕ್ಷತ್ರದ ಆಧಾರದ ಮೇಲೆಯೇ ಮಳೆಯನ್ನು ನಿರೀಕ್ಷಿಸುತ್ತಾರೆ. ಇಂತಿಂತಹ ಮಳೆಯು ಇಷ್ಟಿಷ್ಟು ಬರುತ್ತದೆ ಎಂಬುದನ್ನು ಮೊದಲೇ ಹೇಳುತ್ತಾರೆ. ಇದರ ಆಧಾರದ ಮೇಲೆಯೇ ಅನೇಕ ಗಾದೆ ಮಾತುಗಳೂ ಸೃಷ್ಟಿಯಾಗಿವೆ.

ADVERTISEMENT

ಈ ಹಿಂದೆ ಅಶ್ವಿನಿ ಮಳೆ ಜಿಲ್ಲೆಯ ಒಂದಿಷ್ಟು ಭಾಗದಲ್ಲಾದರೂ ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಬೀಳುತ್ತಿತ್ತು. ಗಾಳಿಯೂ ಜೋರಾಗಿ ಬೀಸುತ್ತಿತ್ತು. ಕಳೆದ ವರ್ಷವೂ ಅಶ್ವಿನಿ ಮಳೆ ರೈತರ ನಿರೀಕ್ಷೆಯನ್ನು ಹೆಚ್ಚಾಗಿ ಹುಸಿ ಮಾಡಿರಲಿಲ್ಲ. ಇದರ ಆಧಾರದ ಮೇಲೆ ಈಗಲೂ ರೈತರು ಅಶ್ವಿನಿ ಮಳೆಯ ಮೇಲೆ ಅಪಾರ ನಂಬಿಕೆ ಇರಿಸಿಕೊಂಡಿದ್ದಾರೆ.

ಅಶ್ವಿನಿ ಮಳೆ ಏ. 13ರಂದು ಆರಂಭವಾಗಲಿದ್ದು, 26ರವರೆಗೂ ಇರಲಿದೆ. ಈ ಅವಧಿಯಲ್ಲಿ ಮಳೆ ಬಂದು ಒಂದಷ್ಟು ಬಿಸಿಲಿನ ಬೇಗೆ ನಿವಾರಣೆಯಾಗುತ್ತದೆ ಎಂಬುದು ಬೆಳೆಗಾರರ ನಿರೀಕ್ಷೆ.

ಹವಾಮಾನ ಇಲಾಖೆ ಹೇಳುವುದೇನು?

ಮೈಸೂರಿನ ನಾಗನಹಳ್ಳಿಯಲ್ಲಿರುವ ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿ ಹವಾಮಾನ ಸೇವಾ ವಿಭಾಗವು ಏಪ್ರಿಲ್ 13ರವರೆಗೂ ಮಳೆ ಬರುವ ಸಂಭವ ಇಲ್ಲ ಎಂದು ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 35ರಿಂದ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19ರಿಂದ 20 ಡಿಗ್ರಿ ಸೆಲ್ಸಿಯಸ್‌ನಷ್ಟು ದಾಖಲಾಗುವ ಸಂಭವ ಇದೆ ಎಂದು ಮುನ್ಸೂಚನೆ ನೀಡಿದೆ.

ಇನ್ನಷ್ಟು ಮಾಹಿತಿಗೆ: ದೂ: 08212591267 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.