
ಸೋಮವಾರಪೇಟೆ: ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ರೈತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಕಾಫಿ ಬೆಳೆಗಾರರ ಸಂಘದ ಸದಸ್ಯರು ಸೋಮವಾರ ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಒತ್ತಾಯಿಸಿದರು.
ಜೇಸಿ ವೇದಿಕೆಯಲ್ಲಿ ರೈತ ಜಾಗೃತಿ ಸಮಾವೇಶ ನಡೆಸಿ ಕೃಷಿಭೂಮಿಯನ್ನು ಅರಣ್ಯ ಇಲಾಖೆ ಕಸಿದುಕೊಳ್ಳಲು ಪ್ರಯತ್ನಿಸಿದರೆ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಪ್ರತಿನಿಧಿ ಮಂಜುಕಿರಣ್ ಮಾತನಾಡಿ, ‘ಬೆಂಗಳೂರಿನ ದೇವನಹಳ್ಳಿಯಲ್ಲಿ 1,771 ಎಕರೆ ಜಾಗವನ್ನು ಸರ್ಕಾರ ವಶಕ್ಕೆ ಪಡೆಯಲ್ಲಿ ತಂತ್ರ ಮಾಡಿತು, ಮೂರು ವರ್ಷಗಳ ಹೋರಾಟದ ಫಲವಾಗಿ ರೈತರ ಭೂಮಿ ರೈತರಿಗೆ ಸಿಕ್ಕಿತು. ಕೊಡಗಿನಲ್ಲಿಯೂ ಸಿ ಆ್ಯಂಡ್ ಡಿ ಭೂಮಿಯನ್ನು ರೈತರ ಪಡೆಯುವ ಹೋರಾಟ ಸ್ವಾಭಿಮಾನದ ಹೋರಾಟವಾಗಬೇಕು’ ಎಂದರು.
‘2019ರಲ್ಲಿ ದೆಹಲಿಯಲ್ಲಿ ರೈತರ ಮರಣಶಾಸನ ಎಂದು ಕರೆಸಿಕೊಂಡಿದ್ದ ಮೂರು ಕಾಯ್ದೆಗಳನ್ನು ವಿರೋಧಿಸಿ ವರ್ಷಗಳ ಕಾಲ ರೈತರು ಹೋರಾಟ ಮಾಡಿದರು. ಅಂದಿನ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತರಿಗೆ ಹಿಂಸೆ ನೀಡಿತು. 700 ಮಂದಿ ರೈತ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದರು. ಮೂರು ವರ್ಷಗಳ ನಂತರ ಕಾಯ್ದೆಗಳನ್ನು ಸರ್ಕಾರ ವಾಪಾಸ್ಸು ಪಡೆಯಿತು. ಇದೇ ಮಾದರಿಯ ಒಗ್ಗಟ್ಟು ಅಗತ್ಯ’ ಎಂದರು.
ರೈತ ಸಂಘದ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ‘ಭೂಮಿ ರೈತರ ತಾಯಿ ಇದ್ದ ಹಾಗೆ, ಅದನ್ನು ಪ್ರಾಣ ಕೊಟ್ಟಾದರೂ ಉಳಿಸಿಕೊಳ್ಳಬೇಕು. ರೈತದ್ರೋಹಿಗಳನ್ನು ರೈತರು ಯಾವತ್ತೂ ಕ್ಷಮಿಸಬಾರದು. ರೈತರು ತಮ್ಮ ಹಕ್ಕನ್ನು ಪ್ರತಿಪಾದಿಸದಿದ್ದರೆ ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದರು.
ರೈತ ಹೋರಾಟ ಸಮಿತಿಯ ಅಧ್ಯಕ್ಷ ಸುರೇಶ್ ಚಕ್ರವರ್ತಿ ಮಾತನಾಡಿ, ‘ರೈತರು ಹಲವು ದಶಕಗಳಿಂದ ಕೃಷಿ ಮಾಡುತ್ತಿರುವ ಭೂಮಿಯನ್ನು ಉಳಿಸಲು ಹೋರಾಟ ರೂಪಿಸಬೇಕಾಗತ್ತದೆ’ ಎಂದು ಎಚ್ಚರಿಸಿದರು.
ಸಮಾವೇಶದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ, ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಎಂ.ಲವ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್, ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ರೈತ ಮುಖಂಡರಾದ ಕೆ.ಎಂ.ಲೋಕೇಶ್, ಬಿ.ಜೆ.ದೀಪಕ್, ಕೂತಿ ದಿವಾಕರ್ ಹಾಜರಿದ್ದರು.
ರೈತರ ಕೃಷಿ ಭೂಮಿ ಕಿತ್ತುಕೊಳ್ಳಲು ಪ್ರಯತ್ನಿಸಿದರೆ ಸರ್ಕಾರ ಹಾಗೂ ಅದರ ಅಂಗ ಸಂಸ್ಥೆಗಳೇ ನಾಶವಾಗುತ್ತವೆಹೊನ್ನೂರು ಪ್ರಕಾಶ್ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.