ADVERTISEMENT

ಕೊಡಗು: ನೆರವು ನೀಡಿದವರಿಗೂ ತಪ್ಪದ ಸಂಕಷ್ಟ, 3 ಎಕರೆ ಜಮೀನು ಕಳೆದುಕೊಂಡ ಗಣೇಶ್‌

ಭೂಕುಸಿತ

ಅದಿತ್ಯ ಕೆ.ಎ.
Published 17 ಸೆಪ್ಟೆಂಬರ್ 2018, 14:19 IST
Last Updated 17 ಸೆಪ್ಟೆಂಬರ್ 2018, 14:19 IST
ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಮದೆನಾಡು ಬಳಿ ಭೂಕುಸಿತ ಆಗಿರುವ ದೃಶ್ಯ
ಮಡಿಕೇರಿ– ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಮದೆನಾಡು ಬಳಿ ಭೂಕುಸಿತ ಆಗಿರುವ ದೃಶ್ಯ   

ಮಡಿಕೇರಿ: ಕೊಡಗಿನಲ್ಲಿ ಸುರಿದ ಮಹಾಮಳೆ ಹಾಗೂ ಭೂಕುಸಿತದ ನೋವುಬಹುತೇಕರಿಗೆ ತಟ್ಟಿದೆ. ಅದರಲ್ಲೂ ನಿರಾಶ್ರಿತರಿಗೆ ನೆರವು ನೀಡಿದ್ದ ವ್ಯಕ್ತಿಗೂ ಸಂಕಷ್ಟ ಎದುರಾಗಿದೆ!

ಆ. 16ರಂದು ಜಿಲ್ಲೆಯಲ್ಲಿ ಭೂಕುಸಿತದಿಂದ ನೂರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾದರು. ರಾತ್ರೋರಾತ್ರಿ ಮನೆ ಬಿಟ್ಟು, ಉಟ್ಟ ಬಟ್ಟೆಯಲ್ಲಿ ಓಡಿಬಂದು ಪರಿಹಾರ ಕೇಂದ್ರ ಸೇರಿಕೊಂಡಿದ್ದರು. ಅಂದು ತಕ್ಷಣವೇ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಕೆ.ಎಂ.ಬಿ. ಗಣೇಶ್‌ ಅವರು 135 ಮಂದಿಗೆ ಆಶ್ರಯ ಕಲ್ಪಿಸುವ ನಿರ್ಧಾರಕ್ಕೆ ಬಂದರು. ಆಡಳಿತ ಮಂಡಳಿ ಸದಸ್ಯರೂ ಅದಕ್ಕೆ ಕೈಜೋಡಿಸಿದ್ದರು.

ಅಂದಿನಿಂದ ಸೆ. 15ರ ತನಕ ಅಷ್ಟೂ ಮಂದಿಗೆ ತಮ್ಮ ಸಭಾಂಗಣದಲ್ಲಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೆ. 16ರಂದು ಎಲ್ಲರಿಗೂ ಬೀಳ್ಕೊಡುಗೆ ನೀಡಿ, ಜಿಲ್ಲಾಡಳಿತ ನಡೆಸುತ್ತಿರುವ ಮೈತ್ರಿ ಸಭಾಂಗಣಕ್ಕೆ ವರ್ಗಾಯಿಸಲಾಗಿತ್ತು. ಒಂದು ತಿಂಗಳ ಯಶಸ್ವಿಯಾಗಿ ನೆರವು ಕಲ್ಪಿಸಿ ಮರು ದಿವಸ ನೋಡಿದರೆ ತಮ್ಮದೇ ಮೂರು ಎಕರೆ ಜಮೀನೂ ಭೂಕುಸಿತಕ್ಕೆ ಸಿಲುಕಿರುವುದು ಗೊತ್ತಾಗಿದೆ.

ADVERTISEMENT

ಮಡಿಕೇರಿ ಹಾಗೂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಬಳಿ ಗಣೇಶ್ ಅವರು ತೋಟ ನಿರ್ಮಿಸಲು 2013ರಲ್ಲಿ ಮೂರು ಎಕರೆ ಜಮೀನು ಖರೀದಿಸಿದ್ದರು. ಭೂಮಿ ಬೆಟ್ಟದ ಮೇಲಿದ್ದರೂ ಕುಸಿತದ ಭೀತಿಯೇನು ಇರಲಿಲ್ಲ. ಹೀಗಾಗಿ, ಧೈರ್ಯದಲ್ಲಿದ್ದರು.

ಅಲ್ಲಿ ಬೆಲೆಬಾಳುವ ಕಾಡು ಜಾತಿಯ ಮರಗಳಿದ್ದವು. ಎಲ್ಲವೂ ಜೋಡುಪಾಲದ ಜಲಪಾತ ಸೇರಿವೆ. ಸುತ್ತಲೂ ಆಗಿರುವ ಭೂಕುಸಿತ ನೋಡಿದರೆ ಗಣೇಶ್‌ ಅವರದ್ದು ಯಾವ ಜಾಗವೆಂಬುದೇ ತಿಳಿಯುವುದಿಲ್ಲ. ಅಲ್ಲಿ ದೊಡ್ಡದಾದ ಪ್ರಪಾತವೇ ಸೃಷ್ಟಿಯಾಗಿದೆ.

ಇನ್ನೂ ಕುಸಿತದ ಜಾಗದಲ್ಲಿ ಇನ್ನೂ ಸಣ್ಣ ಪ್ರಮಾಣದಲ್ಲಿ ಅಂತರ್ಜಲ ಹೊರಬರುತ್ತಿದೆ. ಕುಸಿದ ಮಣ್ಣು ಹಾಗೂ ಕಲ್ಲು ಜೋಡುಪಾಲದ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಬಡಿದಿದೆ. ಅಕ್ಕಪಕ್ಕದ ನಾಲ್ಕು ಮನೆಗಳನ್ನೂ ಇದೇ ಕೆಸರು ಮಣ್ಣು ಆಹುತಿ ಪಡೆದುಕೊಂಡಿದೆ. ಅಷ್ಟಲ್ಲದೇ ಇದೇ ಬೆಟ್ಟ ಕುಸಿತವು ಜೀವಹಾನಿಗೂ ಕಾರಣವಾಗಿತ್ತು.

ಅಲ್ಲಿ ಸಹಜ ಪ್ರಕೃತಿ ನಿರ್ಮಾಣ ಅಸಾಧ್ಯ ಎನ್ನುವ ಸ್ಥಿತಿಯಿದೆ. ಹುಲ್ಲು ಹಾಗೂ ಮರಗಿಡಗಳು ಬೆಳೆದು ಆ ಜಾಗ ಸಹಜ ಸ್ಥಿತಿಗೆ ಬರಲು ಅದೆಷ್ಟೋ ವರ್ಷಗಳು ಬೇಕು ಎನ್ನುವ ಮಟ್ಟಿಗೆ ಭೂಮಿ ಕುಸಿದು ಹೋಗಿದೆ.

ಮಾರಾಟಕ್ಕಿದ್ದ ಜಾಗವೇ ಹೊಯ್ತು: ಮಳೆಗೂ ಮೊದಲು ಗಣೇಶ್‌ ಅವರು ಜಮೀನು ಮಾರಾಟಕ್ಕೆ ನಿರ್ಧರಿಸಿದ್ದರು. ಮಂಗಳೂರು ಮೂಲದ ವ್ಯಕ್ತಿಗೆ ₹ 23 ಲಕ್ಷಕ್ಕೆ ಮಾತುಕತೆ ಅಂತಿಮವಾಗಿತ್ತು. ಆತ ₹ 50 ಸಾವಿರ ಹಣವನ್ನು ಮುಂಗಡವಾಗಿ ಪಾವತಿಸಿದ್ದರು. ಆದರೆ, ಈಗ ಅಲ್ಲಿ ಜಾಗವೇ ಇಲ್ಲದ ಸ್ಥಿತಿಯಿದ್ದು, ಗಣೇಶ್‌ ಅವರಿಗೆ ದಿಕ್ಕು ತೋಚದಾಗಿದೆ.

‘ನಿರಾಶ್ರಿತರಿಗೆ ನೆರವು ನೀಡುತ್ತಿರುವಾಗ ಸ್ನೇಹಿತರು ನಿಮ್ಮ ಜಾಗವನ್ನೊಮ್ಮೆ ನೋಡಿ ಬನ್ನಿ ಎಂದು ಸಲಹೆ ನೀಡಿದ್ದರು. ಆದರೆ, ಏನೂ ಆಗಿಲ್ಲವೆಂಬ ಧೈರ್ಯದಲ್ಲಿದ್ದೆ. ಈಗ ನೋಡಿದರೆ ಶಾಕ್‌ ಆಯಿತು’ ಎಂದು ಕೆ.ಎಂ.ಬಿ. ಗಣೇಶ್‌ ಅಳಲು ತೋಡಿಕೊಂಡರು.

‘ಗಣೇಶ್‌ ಅವರು ಸಂಕಷ್ಟದ ನಡುವೆಯೂ ನೂರಾರು ಮಂದಿಗೆ ನೆರವು ನೀಡಿದ್ದರು. ಅವರೇ ಈಗ ಸಂಕಷ್ಟಕ್ಕೆ ಒಳಗಾಗಿರುವುದು ನೋವಿನ ವಿಚಾರ’ ಎಂದು ಅವರ ಸ್ನೇಹಿತ ಎನ್‌.ಸಿ. ಸುನಿಲ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.